ಉಡುಪಿ: ಆಧಾರ್ ಕಾರ್ಡ್ ನವೀಕರಣಕ್ಕೆ ಜಿಲ್ಲಾಧಿಕಾರಿಗಳ ಸೂಚನೆ

ಉಡುಪಿ: ಜಿಲ್ಲೆಯಲ್ಲಿ 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ನೊಂದಣಿ ಮಾಡಿಸಿಕೊಂಡ ಪ್ರತಿಯೊಬ್ಬ ಸಾರ್ವಜನಿಕರೂ ತಮ್ಮ ವಿಳಾಸ ದೃಢೀಕರಣ ದಾಖಲೆಯೊಂದಿಗೆ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ನವೀಕರಣ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದ್ದಾರೆ.
ಗುರುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಧಾರ್ ಕಾರ್ಡ್ ನವೀಕರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸರಕಾರ ನೀಡಿರುವ ಆಧಾರ್ ಶಿಷ್ಠ ಗುರುತಿನ ಚೀಟಿಯನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಗಳೂ ಮಾಡಿಸಿಕೊಳ್ಳಬೇಕು. ಈಗಾಗಲೇ ಆಧಾರ್ ಕಾರ್ಡ್ ನೊಂದಣಿಯನ್ನು 10 ವರ್ಷಗಳ ಹಿಂದೆ ಮಾಡಿಸಿದ್ದವರು ತಮ್ಮ ವಿಳಾಸ ಗುರುತಿನ ದಾಖಲೆಗಳನ್ನು ನೀಡುವುದರೊಂದಿಗೆ ಕಡ್ಡಾಯವಾಗಿ ನವೀಕರಣ ಗೊಳಿಸಿಕೊಳ್ಳಬೇಕು ಎಂದರು.
ಈಗಾಗಲೇ ಜಿಲ್ಲೆಯಲ್ಲಿ 5 ವರ್ಷದೊಳಗಿನ 42,312 ಮಕ್ಕಳು ಆಧಾರ್ ನೊಂದಣಿ ಮಾಡಿಸಿಕೊಂಡಿದ್ದು, ಕೈಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್ ಸೇರಿದಂತೆ ಇತರ ಬಯೋಮೆಟ್ರಿಕ್ ನೀಡದೇ ಇರುವ, ಪ್ರತಿಯೊಬ್ಬ ಆಧಾರ್ ನೊಂದಣಿ ಮಾಡಿಸಿಕೊಂಡಿರುವ ಮಕ್ಕಳು ಬಯೋಮೆಟ್ರಿಕ್ ನೀಡಬೇಕು ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ 13 ಲಕ್ಷಕ್ಕೂ ಅಧಿಕ ಜನರು ಆಧಾರ್ ನೊಂದಣಿಯನ್ನು ಮಾಡಿಸಿಕೊಂಡಿದ್ದು, ಇವರಲ್ಲಿ 15 ವರ್ಷ ಮೇಲ್ಪಟ್ಟ 2 ಲಕ್ಷ ಮಂದಿ ತಮ್ಮ ಮೊಬೈಲ್ ಸಂಖ್ಯೆ ಜೋಡಣೆಯನ್ನು ಮಾಡಿಸಿಲ್ಲ. ಅಂತಹವರು ತಮ್ಮ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿಕೊಳ್ಳಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಸರಕಾರದ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆ ಪ್ರಮುಖ ಪಾತ್ರ ವಹಿಸುತ್ತಿದೆ. ಆಧಾರ್ ಸಂಖ್ಯೆಯು ಬ್ಯಾಂಕ್ ಖಾತೆ ಜೋಡಣೆ ಹೊಂದಿ, ಸರಕಾರದ ವಿವಿಧ ಯೋಜನೆಗಳ ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್‌ಗಳ ಖಾತೆಗೆ ವರ್ಗಾಯಿಸಲು ಸಹ ಸುಲಭವಾಗಲಿದೆ ಎಂದರು.
ಸಭೆಯಲ್ಲಿ ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ತರಬೇತಿನಿರತ ಐಎಎಸ್ ಅಧಿಕಾರಿ ಯತೀಶ್, ಆಧಾರ್ ಪ್ರಾಧಿಕಾರದ ಉಪ ನಿರ್ದೇಶಕ ರಾಘವೇಂದ್ರ ಎಸ್ ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.