ಮೋದಿ ಕುರಿತ ಬಿಬಿಸಿ ಕಾರ್ಯಕ್ರಮ ಒಪ್ಪುವುದಿಲ್ಲ: ಬ್ರಿಟನ್ ಪ್ರಧಾನಿ

ಲಂಡನ್, ಜ.19: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆ ಕುರಿತ ಬಿಬಿಸಿ ಸರಣಿ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಈ ಕಾರ್ಯಕ್ರಮದಲ್ಲಿ ಮೋದಿಯನ್ನು ಚಿತ್ರಿಸಿರುವ ರೀತಿಯನ್ನು ತಾನು ಒಪ್ಪುವುದಿಲ್ಲ ಎಂದಿದ್ದಾರೆ.
ಬಿಬಿಸಿಯ ಕಾರ್ಯಕ್ರಮದ ಬಗ್ಗೆ ಬ್ರಿಟನ್ ಸಂಸತ್ತಿನಲ್ಲಿ ಪಾಕ್ ಮೂಲದ ಸಂಸದ ಇಮ್ರಾನ್ ಹುಸೇನ್ ಪ್ರಸ್ತಾವಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಸುನಕ್ ‘ ಈ ವಿಷಯದಲ್ಲಿ ಬ್ರಿಟನ್ ಸರಕಾರದ ನಿಲುವು ಸ್ಪಷ್ಟವಾಗಿದೆ ಮತ್ತು ದೀರ್ಘಾವಧಿಯಿಂದಲೂ ಅಚಲವಾಗಿದೆ. ಸಹಜವಾಗಿ, ಎಲ್ಲಿಯೇ ಕಿರುಕುಳದ ಘಟನೆ ಕಾಣಿಸಿಕೊಂಡರೂ ನಾವದನ್ನು ಸಹಿಸುವುದಿಲ್ಲ. ಆದರೆ ಈ ಪ್ರಕರಣದಲ್ಲಿ ನನ್ನ ಗೌರವಾನ್ವಿತ ಸಜ್ಜನ ವ್ಯಕ್ತಿಯನ್ನು ಚಿತ್ರಿಸುವ ರೀತಿಗೆ ಖಂಡಿತಾ ನನ್ನ ಒಪ್ಪಿಗೆಯಿಲ್ಲ’ ಎಂದು ಹೇಳಿದ್ದಾರೆ.
2002ರ ಗುಜರಾತ್ ದಂಗೆ ಪ್ರಕರಣದ ಸಂದರ್ಭ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯ ಆಡಳಿತ ವ್ಯವಸ್ಥೆಯನ್ನು ಟೀಕಿಸುವ ಕಾರ್ಯಕ್ರಮವನ್ನು 2 ಕಂತುಗಳಲ್ಲಿ ಬ್ರಿಟನ್ನ ರಾಷ್ಟ್ರೀಯ ವಾಹಿನಿ ಬಿಬಿಸಿ ಪ್ರಸಾರ ಮಾಡಿದೆ. ಈ ಕಾರ್ಯಕ್ರಮದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಆಯ್ದ ವೇದಿಕೆಗಳಿಂದ ಇದನ್ನು ತೆಗೆದುಹಾಕಲಾಗಿದೆ.
ಈ ಪಕ್ಷಪಾತದ ವರದಿಯನ್ನು ಖಂಡಿಸಿರುವ ಬ್ರಿಟನ್ನ ಪ್ರಮುಖ ಪ್ರಜೆ ಲಾರ್ಡ್ ರಾಮಿ ರ್ಯಾಂಗರ್ ‘ಬಿಬಿಸಿಯು ಕೋಟ್ಯಾಂತರ ಭಾರತೀಯರಿಗೆ ಅಪಾರ ನೋವುಂಟು ಮಾಡಿದೆ. ಈ ಕಾರ್ಯಕ್ರಮದ ಮೂಲಕ ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಯಾಗಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಪೊಲೀಸರು, ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಲಾಗಿದೆ. ದೊಂಬಿ ಮತ್ತು ಜೀವಹಾನಿಯನ್ನು ನಾವು ಖಂಡಿಸುತ್ತೇವೆ, ಅದರ ಜತೆ ಪಕ್ಷಪಾತತನದ ವರದಿಯನ್ನು ಕೂಡಾ’ ಎಂದವರು ಟ್ವೀಟ್ ಮಾಡಿದ್ದಾರೆ.