ಶಸ್ತ್ರಾಸ್ತ್ರ ಸರಬರಾಜು ತ್ವರಿತಗೊಳಿಸಲು ಉಕ್ರೇನ್ ಆಗ್ರಹ

ಕೀವ್, ಜ.19: ಟ್ಯಾಂಕ್ ಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಯನ್ನು ತ್ವರಿತಗೊಳಿಸುವಂತೆ ಗುರುವಾರ ಪಾಶ್ಚಿಮಾತ್ಯ ಮಿತ್ರದೇಶಗಳನ್ನು ಆಗ್ರಹಿಸಿರುವ ಉಕ್ರೇನ್, ಈ ಕುರಿತು ನಿರ್ಧಾರ ಕೈಗೊಳ್ಳಲು ವಿಳಂಬವಾದಷ್ಟೂ ಯುದ್ಧದ ಮುಂಚೂಣಿಯಲ್ಲಿರುವ ಯೋಧರ ಜೀವಕ್ಕೆ ಅಪಾಯದ ಸಾಧ್ಯತೆ ಅಧಿಕವಾಗಲಿದೆ ಎಂದು ಹೇಳಿದೆ.
‘ನಮಗೆ ಸಮಯವಿಲ್ಲ, ಜಗತ್ತಿಗೂ ಈ ಸಮಯವಿಲ್ಲ. ಉಕ್ರೇನ್ ಗೆ ಟ್ಯಾಂಕ್ ಗಳ ಪ್ರಶ್ನೆಯನ್ನು ಮತ್ತು ಹೆಚ್ಚುವರಿ ವಾಯುರಕ್ಷಣಾ ವ್ಯವಸ್ಥೆಯ ಕುರಿತ ಪ್ರಶ್ನೆಯನ್ನು ಸಾಧ್ಯವಾದಷ್ಟು ಬೇಗ ಮುಗಿಸಬೇಕು. ಈ ಪ್ರಕ್ರಿಯೆ ವಿಳಂಬವಾದಷ್ಟೂ ನಮ್ಮ ಜನರ ಜೀವಕ್ಕೆ ಅಪಾಯದ ಸಾಧ್ಯತೆ ಹೆಚ್ಚಿದೆ. ಹಾಗೆ ಆಗಲು ಬಿಡಬಾರದು ಎಂದು ಉಕ್ರೇನಿಯನ್ ಅಧ್ಯಕ್ಷೀಯ ಆಡಳಿತದ ಮುಖ್ಯಸ್ಥ ಆಂಡ್ರಿವ್ ಯೆರ್ಮಾಕ್ ಹೇಳಿದ್ದಾರೆ.
ರಶ್ಯ ಪಡೆಗಳನ್ನು ಹಿಮ್ಮೆಟ್ಟಿಸಲು ಉಕ್ರೇನ್ ಗೆ ತನ್ನ ಲಿಯೊಪಾರ್ಡ್ 2 ಯುದ್ಧಟ್ಯಾಂಕ್ ಗಳನ್ನು ರವಾನಿಸಲು ಜರ್ಮನಿಯು ಅವಕಾಶ ನೀಡಬಹುದೇ ಎಂಬ ವಿಷಯವನ್ನು ಚರ್ಚಿಸಲು ಪಾಶ್ಚಿಮಾತ್ಯ ಮಿತ್ರದೇಶಗಳು ಜರ್ಮನಿಯ ರಮ್ಸ್ಟೈನ್ ವಾಯುನೆಲೆಯಲ್ಲಿ ಶುಕ್ರವಾರ ಸಭೆ ನಡೆಸಿದವು.
ಬುಧವಾರ ಲಾವೋಸ್ ನಲ್ಲಿ ವಿಶ್ವ ಆರ್ಥಿಕ ವೇದಿಕೆಯನ್ನುದ್ದೇಶಿಸಿ ಮಾತನಾಡಿದ್ದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ, ರಶ್ಯವು ಮುಂದಿನ ದಾಳಿಗೆ ಸಿದ್ಧತೆ ನಡೆಸುವುದಕ್ಕಿಂತ ಕ್ಷಿಪ್ರವಾಗಿ ಟ್ಯಾಂಕ್ ಗಳು ಮತ್ತು ವಾಯುರಕ್ಷಣಾ ವ್ಯವಸ್ಥೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದರು. ಈ ವಾರದ ಆರಂಭದಲ್ಲಿ ಬ್ರಿಟನ್ ಉಕ್ರೇನ್ ಗೆ ಟ್ಯಾಂಕ್ ಗಳನ್ನು ಪೂರೈಸಿರುವುದರಿಂದ ಜರ್ಮನಿಯ ಮೇಲೆ ಮತ್ತಷ್ಟು ಒತ್ತಡ ಬಿದ್ದಿದೆ. ಅತ್ಯಾಧುನಿಕ ಲಿಯೊಪಾರ್ಡ್ 2 ಟ್ಯಾಂಕ್ ಗಳನ್ನು ಹೊಂದಿರುವ ಗ್ರೀಸ್, ಡೆನ್ಮಾರ್ಕ್, ಸ್ಪೈನ್, ಕೆನಡಾ, ನೆದರ್ಲ್ಯಾಂಡ್, ಜರ್ಮನಿ, ನಾರ್ವೆ, ಪೋಲ್ಯಾಂಡ್, ಟರ್ಕಿ, ಫಿನ್ಲ್ಯಾಂಡ್ ಮತ್ತು ಸ್ವೀಡನ್ಗಳಿಗೆ ತ್ವರಿತವಾಗಿ ಟ್ಯಾಂಕ್ಗಳನ್ನು ಪೂರೈಸಲು ಮನವಿ ಮಾಡಲಾಗಿದೆ ಎಂದು ಉಕ್ರೇನ್ನ ರಕ್ಷಣಾ ಸಚಿವ ಒಲೆಕ್ಸಿಯ್ ರೆಝ್ನಿಕೋವ್ ಹೇಳಿದ್ದಾರೆ.
ಉಕ್ರೇನ್ - ರಶ್ಯ ಯುದ್ಧದ ಆರಂಭದ ದಿನಗಳಲ್ಲಿ ರಶ್ಯದ ಪಡೆಗಳು ಉಕ್ರೇನ್ ಪೂರ್ವ ಮತ್ತು ದಕ್ಷಿಣದ ಪ್ರಾಂತಗಳ ಮೇಲೆ ತೀವ್ರ ದಾಳಿ ಆರಂಭಿಸಿದ್ದವು. ಆ ಬಳಿಕದ ಕೆಲ ದಿನಗಳಲ್ಲಿ ಯುದ್ಧರಂಗದಲ್ಲಿ ಉಕ್ರೇನ್ ಸೇನೆಯ ಕೈಮೇಲಾಗಿತ್ತು. ಆದರೆ ಹೆಚ್ಚುವರಿ ಯೋಧರು ಹಾಗೂ ಆಧುನಿಕ ಶಸ್ತ್ರಾಸ್ತ್ರಗಳನ್ನು ಯುದ್ಧರಂಗಕ್ಕೆ ರವಾನಿಸಿದ ರಶ್ಯ ಈಗ ಪೂರ್ವದಲ್ಲಿ ನಿರ್ಣಾಯಕ ಮುನ್ನಡೆ ಸಾಧಿಸಲು ಗಮನ ಕೇಂದ್ರೀಕರಿಸಿದೆ. ನೇಟೊದ ಹಲವು ಸದಸ್ಯದೇಶಗಳಲ್ಲಿ ಅತ್ಯಾಧುನಿಕ ಲಿಯೊಪಾರ್ಡ್ ಟ್ಯಾಂಕ್ಗಳಿವೆ. ಆದರೆ ಅದನ್ನು ಉಕ್ರೇನ್ಗೆ ವರ್ಗಾಯಿಸಲು ಜರ್ಮನಿಯ ಅನುಮೋದನೆ ಅಗತ್ಯವಾಗಿದೆ.