ಅಮೆರಿಕ: ಪೋಷಕರನ್ನು ಗರಗಸದಿಂದ ಹತ್ಯೆ ಮಾಡಿದ ಮಹಿಳೆಯ ಬಂಧನ

ವಾಷಿಂಗ್ಟನ್, ಜ.19: ತಂದೆ ಮತ್ತು ತಾಯಿಯನ್ನು ಗರಗಸದಿಂದ ಕತ್ತರಿಸಿ ಹತ್ಯೆ ಮಾಡಿ ದೇಹದ ಭಾಗಗಳನ್ನು ಕಸದ ತೊಟ್ಟಿಗೆ ಬಿಸಾಡಿದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಬಂಧಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಬಿಸಿ ವರದಿ ಮಾಡಿದೆ.
ಫಿಲಿಡೆಲ್ಫಿಯಾ ನಗರದ ಬಳಿಯ ಅಬಿಂಗ್ಟನ್ ನಗರದಲ್ಲಿ ನಡೆದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 49 ವರ್ಷದ ವೆರಿಟಿ ಬೆಕ್ ಎಂಬಾಕೆ ತನ್ನ ಹೆತ್ತವರಾದ ರೀಡ್ ಬೆಕ್ ಮತ್ತು ಮರಿಯಮ್ ಬೆಕ್ರನ್ನು ಹತ್ಯೆ ಮಾಡಿ, ಗರಗಸದಿಂದ ಕತ್ತರಿಸಿದ ದೇಹದ ಭಾಗಗಳನ್ನು ಕಸದ ತೊಟ್ಟಿಗೆ ಎಸೆದಿದ್ದಳು.
ಆದರೆ ಕೆಲ ದಿನಗಳ ಬಳಿಕ ನೆರೆಮನೆಯವರಿಗೆ ವೆರಿಟಿಯ ವರ್ತನೆಯ ಸಂಶಯ ಮೂಡಿದೆ. ಕೆಲ ದಿನಗಳಿಂದ ರೀಡ್ ಮತ್ತು ಮರಿಯಮ್ರ ಪತ್ತೆಯಿಲ್ಲ ಎಂದು ನೆರೆಮನೆಯವರು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಜನವರಿ 7ರಂದು ತಾನು ಹೆತ್ತವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದು ಆ ಬಳಿಕ ಅವರನ್ನು ಸಂಪರ್ಕಿಸಿಲ್ಲ ಎಂದು ವೆರೆಟಿಯ ಸಹೋದರ ಜಸ್ಟಿನ್ ಹೇಳಿದ್ದಾನೆ.
ಗರಗಸದಿಂದ ಕತ್ತರಿಸುವ ಮುನ್ನ ಇಬ್ಬರ ತಲೆಗೂ ಗುಂಡೇಟು ಬಿದ್ದಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ವೆರಟಿಯನ್ನು ಬಂಧಿಸಿದ್ದು ಆಕೆಗೆ ಜಾಮೀನು ನೀಡಬಾರದು ಎಂದು ಪೆನ್ಸಿಲ್ವೇನಿಯಾ ನ್ಯಾಯಾಲಯ ಸೂಚಿಸಿದೆ.