Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಾನವೀಯ ಅಂತಃಕರಣದ ಕವಿ ಸು.ರಂ. ಎಕ್ಕುಂಡಿ

ಮಾನವೀಯ ಅಂತಃಕರಣದ ಕವಿ ಸು.ರಂ. ಎಕ್ಕುಂಡಿ

ಇಂದು ಸು.ರಂ.ಎಕ್ಕುಂಡಿ ಅವರ 100ನೇ ಜನ್ಮದಿನ

ನಾಗರೇಖಾ ಗಾಂವಕರನಾಗರೇಖಾ ಗಾಂವಕರ20 Jan 2023 11:56 AM IST
share
ಮಾನವೀಯ ಅಂತಃಕರಣದ ಕವಿ ಸು.ರಂ. ಎಕ್ಕುಂಡಿ
ಇಂದು ಸು.ರಂ.ಎಕ್ಕುಂಡಿ ಅವರ 100ನೇ ಜನ್ಮದಿನ

ವಾದ ವಿವಾದಗಳಿಂದ ಸದಾ ದೂರವೇ ಇರುತ್ತಿದ್ದ ಎಕ್ಕುಂಡಿ ಮಾನವೀಯ ಅಂತಃಕರಣವನ್ನೇ ತಮ್ಮ ಕಾವ್ಯದಲ್ಲೂ ಉಸಿರಾಡಿದವರು. ಹೊಗಳಿಕೆ ತೆಗಳಿಕೆಗಳಿಗೆ ನಿರ್ಲಿಪ್ತ ಭಾವ ಅವರದು. ಇವರ ಕಾವ್ಯಗಳಲ್ಲಿ ಕಥನ ಕವನಗಳ, ಬರಹಗಳಲ್ಲಿ ಮಾಧ್ವ ನಿಲುವು, ಮಾರ್ಕ್ಸ್‌ವಾದಿ ಧೋರಣೆ ಇವೆರಡೂ ಕಂಡುಬರುತ್ತವೆ ಎಂಬ ಮಾತಿದೆ. ಬದುಕಿನ ಆಚರಣೆಗೆ ನಂಬಿದ ಸಿದ್ಧಾಂತಗಳಲ್ಲಿ, ಮನುಕುಲದ ಏಳ್ಗೆಗಾಗಿ ಕ್ರೌರ್ಯವನ್ನು ನಿರಾಕರಿಸುವ ಮಾನವೀಯ ಮೌಲ್ಯಗಳನ್ನು ಸ್ಥಾಪಿಸುವಲ್ಲಿ ಅವರು ಅನುಸರಿಸಿದ ರೀತಿ ಅದು.

‘‘ನನ್ನ ಕಾವ್ಯ ಉಳುವ ಕೈಗಳನ್ನು ಕುರಿತು, ಪ್ರಾರ್ಥಿಸುವ ಕೈಗಳ ಕುರಿತು, ಸೌಂದರ್ಯವನ್ನು ಕಂಡು ಸಂತೋಷಪಡುವ ಕಣ್ಣುಗಳನ್ನು ಕುರಿತು, ಅದಕ್ಕೆ ಸ್ಪಂದಿಸುವ ಹೃದಯಗಳನ್ನು ಕುರಿತು ಮಾತಾಡುತ್ತದೆಂದು ನನ್ನ ನಂಬಿಕೆ. ಜೊತೆಗೆ ನನ್ನ ಪ್ರಿಯವಾದ ಇನ್ನೊಂದು ಕಲ್ಪನೆ ಯೋಧ ನಡೆಯುವ ದಾರಿ ಕವಿಯ ದಾರಿಯೂ ಹೌದು.’’ ಹೀಗೆ ಹೇಳಿದ್ದ ಕವಿ ಸು.ರಂ.ಎಕ್ಕುಂಡಿ. ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಕವಿಯ ನೆನೆಯಲು, ಅವರ ಕವಿತೆಗಳ ಇನ್ನೊಮ್ಮೆ ಎದೆಗಿಳಿಸಿಕೊಳ್ಳಲು ಸಿಕ್ಕ ಅವಕಾಶವೇ ನಮ್ಮ ಭಾಗ್ಯ. ‘‘ಪ್ರತಿಯೊಬ್ಬನ ಹೃದಯದಲ್ಲೂ ಒಂದು ಬೆಳ್ಳಕ್ಕಿ ಇದೆ. ಶುಭ್ರ, ಸುಂದರ, ಬೆಳ್ಳಗೆ ಮತ್ತು ಲಾಲಿತ್ಯಪೂರ್ಣ. ಹೀಗಾಗಿ ಅಪಾರದ ದಾಹ ಎಲ್ಲರಲ್ಲೂ ಸ್ವಾಭಾವಿಕ. ಕೊನೆಯಿಲ್ಲದ ಅಪಾರದ ಈ ದಾಹವೇ ಮನುಷ್ಯನನ್ನು ಕಾವ್ಯದ ಮಾಯಾ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಅದೇ ಅವನನ್ನು ಸಂಗೀತ, ವರ್ಣಗಳು ಹಾಗೂ ಲಲಿತಕಲೆಗಳ ಪ್ರಪಂಚಕ್ಕೆ ಒಯ್ಯುತ್ತದೆ’’ಎನ್ನುತ್ತಾರೆ ಸು.ರಂ. ಎಕ್ಕುಂಡಿ. ಈ ಮಾತಿನ ಮರ್ಮ ಕಲಾಪ್ರಕಾರದ ಜಗತ್ತಿನಲ್ಲಿ ನೆಲೆನಿಂತವರಿಗೆ ನಿಜವೆನಿಸದೇ ಇರದು. ಕನ್ನಡ ಸಾಹಿತ್ಯ ಲೋಕದ ಮೇರು ಮಣಿಯಾಗಿ ಸಾತ್ವಿಕ ಸಿರಿಯಾಗಿ ಬೆಳಗಿದವರು ಎಕ್ಕುಂಡಿಯವರು. ‘ಸಹಜಕವಿ’ ಎಂದು ಪುತಿನ ಅವರಿಂದ ಕರೆಯಿಸಿಕೊಂಡಿದ್ದ ಎಕ್ಕುಂಡಿಯವರು ಬದುಕಿನಿಂದ ಹೊರತಾದ ಕಾವ್ಯಕ್ಕೆ ಹೊರತಾದವರು. ಇವರ ಕಾವ್ಯದ ತುಂಬಾ ಸಾಮಾನ್ಯರ ಜನಜೀವನವೇ ಹಾಸುಹೊಕ್ಕಾಗಿದೆ. ಅದಕ್ಕೆಂದೇ ಕವಿ ಅಂದಿರುವರು:

‘‘ಒಮ್ಮೆ ಮಳೆಯು ಒಮ್ಮೆ ಬಿಸಿಲು

ಇದುವೇ ಮಾಸ ಶ್ರಾವಣ

ಒಮ್ಮೆ ನೋವು ಒಮ್ಮೆ ನಲಿವು

ಇದುವೇ ನಮ್ಮ ಜೀವನ’’

ಯಾವ ಇಸಂಗಳ ಗೊಡವೆಯನ್ನೂ ಇಟ್ಟುಕೊಳ್ಳದ ಸರಳ ಜೀವನವನ್ನೇ ಬದುಕಿನ ಆದರ್ಶವೆಂದು ತಿಳಿದು ಅಂತೆಯೇ ಬದುಕಿದ ಕವಿ ತಮ್ಮ ನಿವೃತ್ತಿ ಅಂಚಿನಲ್ಲೂ ಸ್ವಂತ ಸೈಕಲೂ ಇಲ್ಲದ ಜೀವನ ನಡೆಸಿದವರು.

ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರು ಜನಿಸಿದ್ದು ರಾಣೆಬೆನ್ನೂರಿನಲ್ಲಿ. 1923ರ ಜನವರಿ 20ರಂದು. ತಂದೆ ರಂಗನಾಥ ಎಕ್ಕುಂಡಿ, ತಾಯಿ ರಾಜಕ್ಕ. ಇವರ ಮೂಲ ನೆಲೆ ಕಲಬುರ್ಗಿ ಜಿಲ್ಲೆಯ ಮಣ್ಣೂರು. ತಂದೆ ರಾಣೆಬೆನ್ನೂರಿನಲ್ಲಿ ಶಿಕ್ಷಕರಾಗಿದ್ದ ಕಾರಣ ಇವರ ಜನನ ರಾಣೆಬೆನ್ನೂರಿನಲ್ಲಾಯಿತು. ಬದುಕಿನ ದುರದೃಷ್ಟ ಇವರ ಬಾಲ್ಯದ ಸಂತಸವನ್ನು ಕಸಿದುಕೊಂಡಿತ್ತು. ಕೇವಲ ಐದು ವರ್ಷದವರಿದ್ದಾಗಲೇ ತಂದೆ ನಿಧನರಾದರು. ಮನೆಯ ಜವಾಬ್ದಾರಿ ತಲೆಯ ಮೇಲೆ ಬಿದ್ದಿತ್ತು. ಆದರೆ ಶಿಕ್ಷಣದತ್ತ ಇದ್ದ ಒಲವು ಮತ್ತು ಕಾವ್ಯದ ಒಲವು ಬದುಕಿನ ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಿ ಮುನ್ನಡೆಯುವ ಧೈರ್ಯ ನೀಡಿದ್ದವು. ಹೈಸ್ಕೂಲಿನಲ್ಲಿ ಕಲಿಯುವಾಗಲೇ ಸಾಹಿತ್ಯದ ಒಲವಿಗೆ ಬೇಕಾದ ವಾತಾವರಣ ದೊರಕಿತು. ಆಗಲೇ ‘ಉನ್ನತಿ’ ಎಂಬ ಸಾಹಿತ್ಯಿಕ ಕೈಬರಹ ಪತ್ರಿಕೆಯ ಸಂಪಾದಕರಾದರು. ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನಿಂದ ಪದವಿ ಪಡೆದು ಮುಂದೆ ಹೈದರಾಬಾದಿನಲ್ಲಿ ಸಿ.ಐ. ಉನ್ನತ ಶಿಕ್ಷಣ ಪಡೆದರು. ಅನಂತರ ಉತ್ತರ ಕನ್ನಡದ ಬಂಕಿಕೊಡ್ಲದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಸೇರಿ ಆನಂತರ ಮುಖ್ಯಾಧ್ಯಾಪಕರಾಗಿ ಮೂವತೈದು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದರು. ಬಾಲ್ಯದಲ್ಲಿ ಒಮ್ಮೆ ಸ್ನೇಹಿತನೊಂದಿಗೆ ಗೋಕರ್ಣಕ್ಕೆ ಬಂದಿದ್ದ ಎಕ್ಕುಂಡಿಯವರಿಗೆ ಇಲ್ಲಿಯ ನೈಸರ್ಗಿಕ ಸೊಬಗು ಮನಸೂರೆಗೊಂಡಿತ್ತು. ಹಾಗಾಗಿ ಸೇವೆಯುದ್ದಕ್ಕೂ ಬಂಕಿಕೊಡ್ಲದಲ್ಲಿಯೇ ಇದ್ದರು. ಕಡಲ ತಡಿಯ ಊರಿನಲ್ಲಿ ಧೋ ಎಂದು ಸುರಿವ ಕುಂಭದ್ರೋಣ ಮಳೆ, ಬೆಟ್ಟ ಗುಡ್ಡಗಳು, ಜಲಪಾತಗಳು, ಕಡಲು, ತೆಂಗು ಬಾಳೆಗಳ ನಡುವೆ ಹಬ್ಬಿದ ಭತ್ತದ ಗದ್ದೆಗಳು, ತೆಂಗು ಕಂಗುಗಳ ಸೊಬಗು, ಹಾಗೇ ಶ್ರಮಸಂಸ್ಕೃತಿಯ ದ್ಯೋತಕವಾಗಿರುವ ಹಾಲಕ್ಕಿಗಳ ಹಾಡು ಪಾಡು, ಬಡತನದ ಗುಡಿಸಲುಗಳಲ್ಲಿ ಬೇಯುವ ಕುಚಲಕ್ಕಿಯ ಗಂಜಿ ಹೀಗೆ ಇವೆಲ್ಲವೂ ಇವರ ಕಾವ್ಯಗಳಲ್ಲಿ ಜೀವಂತಿಕೆ ಪಡೆದಿದೆ.

ವಾದ ವಿವಾದಗಳಿಂದ ಸದಾ ದೂರವೇ ಇರುತ್ತಿದ್ದ ಎಕ್ಕುಂಡಿ ಮಾನವೀಯ ಅಂತಃಕರಣವನ್ನೇ ತಮ್ಮ ಕಾವ್ಯದಲ್ಲೂ ಉಸಿರಾಡಿದವರು. ಹೊಗಳಿಕೆ ತೆಗಳಿಕೆಗಳಿಗೆ ನಿರ್ಲಿಪ್ತ ಭಾವ ಅವರದು. ಇವರ ಕಾವ್ಯಗಳಲ್ಲಿ ಕಥನ ಕವನಗಳ, ಬರಹಗಳಲ್ಲಿ ಮಾಧ್ವ ನಿಲುವು, ಮಾರ್ಕ್ಸ್‌ವಾದಿ ಧೋರಣೆ ಇವೆರಡೂ ಕಂಡುಬರುತ್ತವೆ ಎಂಬ ಮಾತಿದೆ. ಬದುಕಿನ ಆಚರಣೆಗೆ ನಂಬಿದ ಸಿದ್ಧಾಂತಗಳಲ್ಲಿ, ಮನುಕುಲದ ಏಳ್ಗೆಗಾಗಿ ಕ್ರೌರ್ಯವನ್ನು ನಿರಾಕರಿಸುವ ಮಾನವೀಯ ಮೌಲ್ಯಗಳನ್ನು ಸ್ಥಾಪಿಸುವಲ್ಲಿ ಅವರು ಅನುಸರಿಸಿದ ರೀತಿ ಅದು. ಎಚ್.ಎಸ್.ವೆಂಕಟೇಶಮೂರ್ತಿ ಒಮ್ಮೆ ಎಕ್ಕುಂಡಿಯವರೊಂದಿಗೆ ಮಾತನಾಡುತ್ತಾ ‘‘ಸರ್ ನೀವು ಮಾರ್ಕ್ಸ್ ಮತ್ತು ಮಧ್ವರನ್ನು ಒಟ್ಟ್ಟಿಗೆ ನಿಮ್ಮ ಕಾವ್ಯದಲ್ಲಿ ತರುತ್ತಿರುವ ಬಗ್ಗೆ ಕೆಲವರ ಆಕ್ಷೇಪವಿದೆ’’ ಎಂದರಂತೆ. ಅದಕ್ಕೆ ಎಕ್ಕುಂಡಿ, ‘‘ಮಧ್ವ ಮತ್ತು ಮಾರ್ಕ್ಸ್ ಇಬ್ಬರೂ ಮನುಷ್ಯರ ಹಕ್ಕಿನ ಪರವಾಗಿ ಹೋರಾಡಿದವರಲ್ಲವಾ? ಮಾರ್ಕ್ಸ್ ಮಹಾಶಯರು ಪ್ರತೀ ಮನುಷ್ಯನಿಗೂ ಒಂದು ತುಂಡು ನೆಲದ ಮೇಲೆ ಹಕ್ಕಿದೆ ಎನ್ನುತ್ತಾರೆ. ಮಧ್ವಾಚಾರ್ಯರು ಪ್ರತಿಯೊಬ್ಬ ಮನುಷ್ಯನಿಗೂ ಒಂದು ತುಂಡು ಆಕಾಶದ ಮೇಲೆ ಹಕ್ಕಿದೆ ಎನ್ನುತ್ತಾರೆ! ಅವರಿಬ್ಬರನ್ನೂ ಒಟ್ಟಿಗೆ ಯಾಕೆ ಇಡಬಾರದು?’’ ಎಂದಿದ್ದರಂತೆ. ಸ್ವತಃ ಎಕ್ಕುಂಡಿಯವರೇ ಒಂದೆಡೆ ಹೀಗೆ ಹೇಳುತ್ತಾರೆ: ‘‘ನನ್ನ ಸಾಹಿತ್ಯದ ಎರಡು ಧ್ವನಿಗಳನ್ನು ನಾನು ಇಲ್ಲಿ ಪ್ರಸ್ತಾಪಿಸುವುದು ಅಗತ್ಯ. ಅವುಗಳಲ್ಲೊಂದು ಮಧ್ವಮುನಿಗಳ ಚಿಂತನಧಾರೆ. ಇನ್ನೊಂದು ಮಾರ್ಕ್ಸ್‌ನ ಸಾಮಾಜಿಕ ವಿಪ್ಲವದ ದನಿ. ಇವೆರಡರ ಸಮನ್ವಯ ಸಾಮರಸ್ಯಗಳೇ ಪ್ರಪಂಚವು ಕಾಣಲಿರುವ ಹೊಸ ಸಂಸ್ಕೃತಿಯ ತಳಹದಿ ಆಗಿದೆ. ಅಲೌಕಿಕದ ತುಡಿತ, ಕರುಣೆ ಹಾಗೂ ಶ್ರದ್ಧೆಗಳಿಲ್ಲದೆ ಸಮಾಜವಾದ ಕಟ್ಟಿದ ಹಂದರಗಳೆಲ್ಲ ಒಂದೊಂದಾಗಿ ಕುಸಿದು ಬಿದ್ದಿದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಸಮಾಜದ ಹಸಿವು, ನೋವು, ಅನ್ಯಾಯಗಳಿಗೆ ಕುರುಡಾದ, ಕಿವಿಡಾದ ಶ್ರದ್ಧೆಯ ಪೀಠಗಳು ಗಾಳಿಗೊಡ್ಡಿದ ತರಗೆಲೆಯಂತೆ ಚದುರಿ ಚೆಲ್ಲಾಪಿಲ್ಲಿಯಾದ ಚರಿತ್ರೆ ಎಲ್ಲವೂ ಹರಿದಾಸರ, ಶಿವಶರಣರ ಉಡಿಯಿಂದ ಬಂದವು. ಹಾಗೆಯೇ ಮಾರ್ಕ್ಸ್‌ನ ನೊಂದ ಕಣ್ಣಿನಿಂದಲೂ ಸಿಡಿದವು.’’ 

‘ರೊಟ್ಟಿ ಮತ್ತು ಕೋವಿ’ಯ ಈ ಸಾಲುಗಳಲ್ಲೆ ಕವಿ ನಮ್ಮೆದೆಗೆ ಇಳಿಯುತ್ತಾರೆ

‘‘ಹಸಿದವರು ಕೂಡ ಬದುಕಬೇಕಲ್ಲವೇ?

ಮತ್ತೆ ಪ್ರೀತಿಯೂ ಬೇಕಲ್ಲ ದುಡಿವ ಜನಕೆ

ಎದೆಯ ಕದಗಳು ಮುಚ್ಚಿದಾಗ, ಮತ್ತೀನ್ನೇನು

ಮುಖ್ಯವಲ್ಲವೇ ಸಾವಿಗಿಂತ ಬದುಕೇ?’’

ಬದುಕನ್ನು ಪ್ರೀತಿಸುವುದೆಂದರೆ ಇದೇ ಅಲ್ಲವೇ? ಇನ್ನೊಂದು ಕವಿತೆ ‘ಬೆಸೆದ ಬಂಡೆ’ಯ ಈ ಸಾಲುಗಳು ಕಟ್ಟಿಕೊಡುವ ಮಾನವ ಪ್ರೀತಿಗೆ ವಿಶ್ಲೇಷಣೆಯ ಅಗತ್ಯವೇ ಇಲ್ಲ.

‘‘ದೂರವಿದ್ದವರನ್ನು ಹತ್ತಿರಕೆ ತರಬೇಕು

ಹರಿವ ಹೊಳೆಗೂ ಉಂಟು ಎರಡು

ತೋಳು, ನೆಲವನಪ್ಪಿದ ಎರಡು ದಂಡೆ

ಗಳ ಬಾಂಧವ್ಯ ಬೆಸೆಯಬೇಕಲ್ಲವೇ?

ನಮ್ಮ ಬಾಳು’’

ಹಾಗಾಗಿಯೇ ಕವಿ ಹೇಳುತ್ತಾರೆ: ‘‘ನನ್ನ ಕಾವ್ಯ ಉಳುವ ಕೈಗಳನ್ನು ಕುರಿತು, ಪ್ರಾರ್ಥಿಸುವ ಕೈಗಳ ಕುರಿತು, ಸೌಂದರ್ಯವನ್ನು ಕಂಡು ಸಂತೋಷಪಡುವ ಕಣ್ಣುಗಳನ್ನು ಕುರಿತು, ಅದಕ್ಕೆ ಸ್ಪಂದಿಸುವ ಹೃದಯಗಳನ್ನು ಕುರಿತು ಮಾತಾಡುತ್ತದೆಂದು ನನ್ನ ನಂಬಿಕೆ. ಜೊತೆಗೆ ನನ್ನ ಪ್ರಿಯವಾದ ಇನ್ನೊಂದು ಕಲ್ಪನೆ ಯೋಧ ನಡೆಯುವ ದಾರಿ ಕವಿಯ ದಾರಿಯೂ ಹೌದು’’

ಇವರ ‘ನಾನೂ ಹಾಗೆಯೇ’, ‘ಪಾರಿವಾಳ’, ‘ಇಬ್ಬರು ರೈತರು’, ‘ಹಾವಾಡಿಗರ ಹುಡುಗ’ ಪದ್ಯಗಳು ನಮ್ಮೆಲ್ಲರ ಅಚ್ಚುಮೆಚ್ಚಿನ ಕವಿತೆಗಳು. ಸು. ರಂ ಎಕ್ಕುಂಡಿಯವರ ಜನ್ಮಶತಮಾನೋತ್ಸವದ ಈ ಸಂದರ್ಭದಲ್ಲಿ ಕವಿಯ ನೆನೆಯಲು, ಅವರ ಕವಿತೆಗಳ ಇನ್ನೊಮ್ಮೆ ಎದೆಗಿಳಿಸಿಕೊಳ್ಳಲು ಸಿಕ್ಕ ಅವಕಾಶವೇ ನಮ್ಮ ಭಾಗ್ಯ.

share
ನಾಗರೇಖಾ ಗಾಂವಕರ
ನಾಗರೇಖಾ ಗಾಂವಕರ
Next Story
X