ಸಿ.ಟಿ. ರವಿ ಗೆಲುವಿನ ಓಟಕ್ಕೆ ಬೀಳಲಿದೆಯೆ ಬ್ರೇಕ್?

ಚಿಕ್ಕಮಗಳೂರಲ್ಲಿ ಸಿ.ಟಿ.ರವಿ ಗೆಲುವಿನ ಓಟಕ್ಕೆ ಬೀಳಲಿದೆಯೆ ಈ ಬಾರಿ ಬ್ರೇಕ್ ? | ಸೆಡ್ಡುಹೊಡೆದಿರುವ ಪರಮಾಪ್ತ ಎಚ್.ಡಿ.ತಮ್ಮಯ್ಯ ನಡೆ ಏನು ? | ಸಿ.ಟಿ.ರವಿಗೆ ಮುಳ್ಳಾಗಿ ಕಾಡಲಿವೆಯೆ ಹಲವರ ಅಸಮಾಧಾನ ? | ಬಿಜೆಪಿ ವಿರುದ್ಧ ಕಾಂಗ್ರೆಸ್ ರಣತಂತ್ರವೇನು ? | ದುರ್ಬಲಗೊಂಡಿದೆಯೆ ಜೆಡಿಎಸ್ ಪಡೆ ?
►► ಸಿ.ಟಿ. ರವಿ
ಬಿಜೆಪಿ ನಾಯಕ. ದತ್ತಪೀಠ ವಿವಾದವನ್ನೇ ಮುಂದಿಟ್ಟುಕೊಂಡು ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಗೆಲುವು ಕಂಡಿರುವ ಬಿ.ಜೆಪಿ. ನಾಯಕ ಸಿ.ಟಿ. ರವಿ, ಪ್ರಸಕ್ತ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಅವರು, ಗೋವಾ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಬಿಜೆಪಿ ಉಸ್ತುವಾರಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳಲ್ಲಿ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರ ಸದ್ಯ ಬಿಜೆಪಿಯ ಭದ್ರಕೋಟೆಯಾಗಿದೆ. ಒಂದು ಕಾಲದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿಯ ಕಣವಾಗಿದ್ದ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ಹೆಣಗಾಡುವ ಪರಿಸ್ಥಿತಿ ಇತ್ತು. 2004ರಿಂದ ಇಲ್ಲಿಯವರೆಗೆ ಬಿಜೆಪಿಯ ಸಿ.ಟಿ.ರವಿ ಸತತ 4 ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರರಾಗಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಪ್ರಾಬಲ್ಯ ಹೊಂದಿದ್ದರೂ ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾನೇರ ಹಣಾಹಣಿ ಏರ್ಪಡುವಂತಹ ವಾತಾವರಣ ನಿರ್ಮಾಣವಾಗಿದೆ.
► ಸಿ.ಟಿ. ರವಿಗೆ ಸೆಡ್ಡು
ಈ ಮಧ್ಯೆ ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ಸಿ.ಟಿ.ರವಿ ಅವರ ಬಲಗೈ ಬಂಟ ಎಂಬಂತಿದ್ದ, 4 ಬಾರಿ ನಗರಸಭೆ ಸದಸ್ಯರಾಗಿದ್ದ ಲಿಂಗಾಯತ ಸಮುದಾಯದ ಪ್ರಭಾವೀ ನಾಯಕ ಹಾಗೂ ಮಾಜಿ ಸಿಎಂ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಕಟ್ಟಾ ಬೆಂಬಲಿಗ ಎಚ್.ಡಿ.ತಮ್ಮಯ್ಯ ಸಿ.ಟಿ.ರವಿಗೆ ಸೆಡ್ಡು ಹೊಡೆದಿದ್ದಾರೆ. ತಾನೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಬಾರಿ ಬಿಜೆಪಿಯಿಂದ ಟಿಕೆಟ್ ನೀಡಬೇಕೆಂದು ಪಕ್ಷದ ವರಿಷ್ಠರ ದುಂಬಾಲು ಬಿದ್ದಿದ್ದಾರೆ. ಬಿಜೆಪಿಯಿಂದ ಟಿಕೆಟ್ ನೀಡದಿದ್ದಲ್ಲಿ ಅವರು ಕಾಂಗ್ರೆಸ್ ಪಾಳಯ ಸೇರುವ ಇಂಗಿತ ವ್ಯಕ್ತಪಡಿಸಿದ್ದು, ಇದು ಸಿ.ಟಿ.ರವಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕುವ ಪ್ಲಾನ್ ಎಂದು ಹೇಳಲಾಗುತ್ತಿದೆ.
► ಹಿಂದುತ್ವದ ವಿಚಾರವೇ ಮುಂದೆ
ದತ್ತಪೀಠ ವಿವಾದದ ಹೋರಾಟಕ್ಕೂ ಮುನ್ನ 90ರ ದಶಕದಲ್ಲಿ ಜಿಲ್ಲೆಯಲ್ಲಿ ಸಂಘಪರಿವಾರಕ್ಕಾಗಲೀ, ಬಿಜೆಪಿಗಾಗಲೀ ಭದ್ರ ನೆಲೆ ಇರಲಿಲ್ಲ. ಆಗ ಸಂಘಪರಿವಾರದ ಮೂಲಕ ದತ್ತಪೀಠದ ವಿವಾದವನ್ನು ಮುನ್ನೆಲೆಗೆ ತಂದ ಸಿ.ಟಿ.ರವಿ ಹಾಗೂ ಸುನೀಲ್ ಕುಮಾರ್ ಜೋಡಿಯಿಂದಾಗಿ ಚಿಕ್ಕಮಗಳೂರು ಸದ್ಯ ಸಂಘಪರಿವಾರದ ಪ್ರಯೋಗಶಾಲೆಯಾಗಿ ಮಾರ್ಪಟ್ಟಿದೆ.
ಚಿಕ್ಕಮಗಳೂರು ಕ್ಷೇತ್ರದ ಹಾಲಿ ಶಾಸಕ ಸಿ.ಟಿ.ರವಿ ಪ್ರಖರ ಹಿಂದುತ್ವವಾದಿ. ಇತ್ತೀಚೆಗೆ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ ದತ್ತಜಯಂತಿ ಕಾರ್ಯಕ್ರಮವನ್ನು ವಿವಾದಿತ ಸ್ಥಳದಲ್ಲಿ ವಿಜೃಂಭಣೆಯಿಂದ ನಡೆಸುವ ಮೂಲಕ ದತ್ತಪೀಠದ ಹೋರಾಟದಲ್ಲಿ ಯಶಸ್ಸು ಗಳಿಸಿದ್ದೇನೆಂದು ಗೆಲುವಿನ ನಗು ಬೀರುತ್ತಿದ್ದಾರೆ. ಈ ಹುರುಪಿನಲ್ಲೇ ಮುಂದಿನ ಚುನಾವಣೆಯನ್ನು ಗೆಲ್ಲಲು ರಣತಂತ್ರ ರೂಪಿಸಿಕೊಂಡಿದ್ದಾರೆ.
► ಜನರ ಅಸಮಾಧಾನ
ಇದರ ಹೊರತಾಗಿ ಚಿಕ್ಕಮಗಳೂರು ನಗರದಲ್ಲಿ ದಶಕ ಕಳೆದರೂ ಪೂರ್ಣಗೊಳ್ಳದ ಅಮೃತ್ ಯೋಜನೆ, ಯುಜಿಡಿ ಕಾಮಗಾರಿಗಳು ಸಿ.ಟಿ.ರವಿ ವಿರುದ್ಧ ಜನರ ಅಸಮಾಧಾನಕ್ಕೆ ಕಾರಣವಾಗಿದೆ. 100 ಕೋಟಿ ವೆಚ್ಚದ ಯೋಜನೆ ಕಳೆದೊಂದು ದಶಕದಿಂದ ಕುಂಟುತ್ತಾ ಸಾಗಿದ್ದು, ಇದುವರೆಗೂ ಪೂರ್ಣಗೊಂಡಿಲ್ಲ. ಇನ್ನು ಚಿಕ್ಕಮಗಳೂರು ಕ್ಷೇತ್ರ ಸೇರಿದಂತೆ ಜಿಲ್ಲೆಗೆ ಮಂಜೂರಾಗುವ ಭಾರೀ ಮೊತ್ತದ ಕಾಮಗಾರಿಗಳ ಗುತ್ತಿಗೆಯನ್ನು ಸಿ.ಟಿ.ರವಿ ಅವರು ತನ್ನ ಸಂಬಂಧಿ ಸುದರ್ಶನ್ ಎಂಬ ಗುತ್ತಿಗೆದಾರನಿಗೆ ಕೊಡಿಸುತ್ತಿರುವ ಬಗ್ಗೆಯೂ ಕ್ಷೇತ್ರದ ಜನರು ಹಾಗೂ ಬಿಜೆಪಿ ಮುಖಂಡರಲ್ಲೇ ಅಸಮಾಧಾನವಿದೆ.
► ಕುರುಬ ಸಮುದಾಯ ಆಕ್ರೋಶ
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ಹೇಳಿಕೆಗಳಿಂದ ಕುರುಬ ಸಮುದಾಯದಲ್ಲಿಯೂ ಅಸಮಾಧಾನ ಮೂಡಿದೆ. ಕುರುಬ ಸಮುದಾಯದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಶಾಸಕ ಸಿ.ಟಿ.ರವಿ ಮಾಡದ ಟೀಕೆಗಳೇ ಇಲ್ಲ. ಇಂತಹ ಹೇಳಿಕೆಗಳಿಂದಾಗಿ ಕ್ಷೇತ್ರದಲ್ಲಿರುವ ಕುರುಬ ಸಮುದಾಯದ ಜನತೆ ಸಿ.ಟಿ.ರವಿ ವಿರುದ್ಧ ಅಸಮಾಧಾನಗೊಂಡಿದ್ದಾರೆ.
► ಕ್ಷೀಣಿಸಿದೆಯೆ ಜೆಡಿಎಸ್ ಪ್ರಾಬಲ್ಯ?
ಜೆಡಿಎಸ್ ಈ ಬಾರಿ ಬಿ.ಎಂ. ತಿಮ್ಮಶೆಟ್ಟಿ ಎಂಬವರಿಗೆ ಟಿಕೆಟ್ ನೀಡಿದೆ. ಈ ಸಂಬಂಧ ಅಧಿಕೃತ ಆದೇಶ ಹೊರ ಬಾರದಿದ್ದರೂ ಜೆಡಿಎಸ್ ವರಿಷ್ಠರು ಮೌಖಿಕವಾಗಿ ತಿಮ್ಮಶೆಟ್ಟಿ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಿಮ್ಮಶೆಟ್ಟಿ ಕ್ಷೇತ್ರದಾದ್ಯಂತ ಮತದಾರರ ಮನ ಸೆಳೆಯುವ ನಿಟ್ಟಿನಲ್ಲಿ ಎಲ್ಲೆಡೆ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿದ್ದರೂ ಸಂಘಟನೆ ದುರ್ಬಲಗೊಂಡಿದೆ.
► ಕೈ ಅಭ್ಯರ್ಥಿ ಯಾರು?
ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದು ಮಾತ್ರ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ಕ್ಷೇತ್ರದಲ್ಲಿ ಹಾಲಿ ಶಾಸಕ ಸಿ.ಟಿ.ರವಿ ಬಿಜೆಪಿ ಅಭ್ಯರ್ಥಿಯಾಗಿರುವುದರಿಂದ ಸಿ.ಟಿ. ರವಿಗೆ ತೀವ್ರ ಪೈಪೋಟಿ ನೀಡಬಲ್ಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ವರಿಷ್ಠರು ಕಸರತ್ತು ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೂದಲೆಳೆಯ ಅಂತರದಲ್ಲಿ ಪರಾಜಿತರಾದ ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಗಾಯತ್ರಿ ಶಾಂತೇಗೌಡ ಅವರು ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದಲ್ಲಿ ಮಾತ್ರ ಸಿ.ಟಿ.ರವಿಗೆ ಪೈಪೋಟಿ ನೀಡಲು ಸಾಧ್ಯ ಎಂಬ ಅಭಿಪ್ರಾಯ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿದೆ. ಈ ಹಿಂದೆ ಎಂಎಲ್‌ಸಿಯಾಗಿದ್ದ ಗಾಯತ್ರಿ ಅವರಿಗೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ. ಗಾಯತ್ರಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರೂ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿಲ್ಲ. ಅರ್ಜಿ ಸಲ್ಲಿಸುವ ಸಂದರ್ಭದಲ್ಲೇ ಅವರ ಮನೆ ಮೇಲೆ ಐಟಿ ದಾಳಿಯಾಗಿದ್ದರಿಂದ ಅರ್ಜಿ ಸಲ್ಲಿಸಲೂ ಅವರಿಗೆ ಕಾಲಾವಕಾಶ ಸಿಗಲಿಲ್ಲ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲದೇ ಕ್ಷೇತ್ರದಲ್ಲಿ ಸಿಪಿಐ, ಬಿಎಸ್ಪಿಪಕ್ಷಗಳ ಅಸ್ತಿತ್ವ ತಕ್ಕಮಟ್ಟಿಗಿದ್ದು, ಈ ಪಕ್ಷಗಳು ಜಾತ್ಯತೀತ ಪಕ್ಷಗಳೊಂದಿಗೆ ಹೊಂದಾಣಿಕೆಗೆ ಇಳಿಯಲಿವೆಯೇ ಅಥವಾ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆಯೇ ಎಂಬ ಗುಟ್ಟನ್ನು ಇದುವರೆಗೂ ರಟ್ಟು ಮಾಡಿಲ್ಲ. ಏನೇ ಆದರೂ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆಯೇ ಬಿಗ್ ಫೈಟ್ ನಡೆಯಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.







