ಕ್ಲಿಂಟನ್ ವಿರುದ್ಧ ಕ್ಷುಲ್ಲಕ ಮೊಕದ್ದಮೆ: ಟ್ರಂಪ್ ಗೆ 1 ದಶಲಕ್ಷ ಡಾಲರ್ ದಂಡ

ವಾಷಿಂಗ್ಟನ್, ಜ.20: ಹಿಲರಿ ಕ್ಲಿಂಟನ್ 2016ರ ಅಧ್ಯಕ್ಷೀಯ ಚುನಾವಣೆಯನ್ನು ಮೋಸದಿಂದ ಗೆಲ್ಲಲು ಪ್ರಯತ್ನಿಸಿದ್ದರು ಎಂಬ ಕ್ಷುಲ್ಲಕ ಮೊಕದ್ದಮೆಯನ್ನು ದಾಖಲಿಸಿದ್ದಕ್ಕಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ವಕೀಲರಿಗೆ ಸುಮಾರು 1 ದಶಲಕ್ಷ ಡಾಲರ್ ದಂಡ ವಿಧಿಸಿ ಅಮೆರಿಕದ ೆಡರಲ್ ನ್ಯಾಯಾಲಯ ಆದೇಶಿಸಿದೆ.
2016ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಸೋತಿದ್ದರು. ಆದರೆ ಟ್ರಂಪ್ ಗೆಲುವಿನಲ್ಲಿ ರಶ್ಯದ ಹಸ್ತಕ್ಷೇಪವಿದೆ ಎಂಬ ಸುಳ್ಳು ಸುದ್ಧಿ ಪ್ರಸಾರ ಮಾಡಿ ಚುನಾವಣೆಯ ಫಲಿತಾಂಶವನ್ನು ತಡೆಯಲು ಕ್ಲಿಂಟನ್ ಪ್ರಯತ್ನಿಸಿದ್ದರು ಎಂದು ಆರೋಪಿಸಿ ಟ್ರಂಪ್ ಅವರ ತಂಡ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು. ಈ ಅಪಪ್ರಚಾರದಿಂದ ತನಗಾಗಿರುವ ಹಾನಿಗೆ ಕ್ಲಿಂಟನ್ 70 ದಶಲಕ್ಷ ಡಾಲರ್ ಪರಿಹಾರ ನೀಡಬೇಕು ಎಂದು ಕೋರಿದ್ದರು.
ಆದರೆ ಆರೋಪಕ್ಕೆ ಪೂರಕವಾದ ದಾಖಲೆ ಅಥವಾ ಮಾಹಿತಿಗಳನ್ನು ಟ್ರಂಪ್ ಒದಗಿಸಿಲ್ಲ. ರಾಜಕೀಯ ದುರುದ್ದೇಶದ ಮೊಕದ್ದಮೆ ದಾಖಲಿಸಿ ಅನವಶ್ಯಕವಾಗಿ ನ್ಯಾಯಾಲಯದ ಸಮಯ ವ್ಯರ್ಥ ಮಾಡಿರುವುದಕ್ಕೆ ಅವರು ದಂಡ ಪಾವತಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶ ಜಾನ್ ಮಿಡ್ಲ್ಬ್ರೂಕ್ಸ್ ಆದೇಶಿಸಿದ್ದಾರೆ.