ನೇಪಾಳ: ವಿಮಾನ ದುರಂತ ಸಂತ್ರಸ್ತರ ಕುಟುಂಬಗಳಿಗೆ ಅಧಿಕ ಪರಿಹಾರ ಕೈತಪ್ಪುವ ಸಾಧ್ಯತೆ

ಕಠ್ಮಂಡು, ಜ.20: ನೇಪಾಳ ಸರಕಾರವು ನಿರ್ಣಾಯಕ ‘ವಿಮಾನಯಾನ ಸಂಸ್ಥೆಗಳ ಹೊಣೆಗಾರಿಕೆ ಮತ್ತು ವಿಮಾ ಕರಡು ಮಸೂದೆ’ಯನ್ನು ಅನುಮೋದಿಸದ ಕಾರಣ, ಯೇತಿ ಏರ್ಲೈನ್ಸ್ ವಿಮಾನ ಅಪಘಾತದ ಸಂತ್ರಸ್ತರ ದುಃಖಿತ ಕುಟುಂಬಗಳು ಲಕ್ಷಾಂತರ ರೂ. ಪರಿಹಾರ ಮೊತ್ತವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.
ಜನವರಿ 15ರಂದು ಪೋಖರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಂದರ್ಭದಲ್ಲಿ ಯೇತಿ ಏರ್ ಲೈನ್ಸ್ ನ ವಿಮಾನ ಕಂದಕಕ್ಕೆ ಉರುಳಿಬಿದ್ದು ವಿಮಾನದಲ್ಲಿದ್ದ 72 ಮಂದಿ ಮೃತಪಟ್ಟಿದ್ದರು. 2020ರಲ್ಲಿ ನೇಪಾಳ ಸರಕಾರ ದೇಶೀಯ ವಿಮಾನ ಪ್ರಯಾಣಿಕರ ಹೊಣೆಗಾರಿಕೆ ವ್ಯವಸ್ಥೆಯ ಕರಡು ಮಸೂದೆಯನ್ನು ಅಂತಿಮಗೊಳಿಸಿತ್ತು. ಇದಕ್ಕೂ 2 ವರ್ಷದ ಹಿಂದೆ , ಪ್ರಯಾಣಿಕರ ಸಾವು ಅಥವಾ ಗಾಯದ ಸಂದರ್ಭದಲ್ಲಿ ವಿಮಾನಯಾನ ಸಂಸ್ಥೆಗಳನ್ನು ಹೊಣೆಗಾರರನ್ನಾಗಿಸುವ ‘ಮಾಂಟ್ರಿಯಲ್ ನಿರ್ಣಯ 1999’ನ್ನು ಅಳವಡಿಸಿಕೊಂಡಿತ್ತು.
ಈಗ ನೇಪಾಳದಲ್ಲಿ ವಿಮಾನ ಅಪಘಾತದ ಸಂದರ್ಭ ಸಂತ್ರಸ್ತರ ಕುಟುಂಬದವರಿಗೆ 20,000 ಅಮೆರಿಕನ್ ಡಾಲರ್ ಪರಿಹಾರ ಸಿಗುತ್ತಿದೆ. ‘ವಿಮಾನಯಾನ ಸಂಸ್ಥೆಗಳ ಹೊಣೆಗಾರಿಕೆ ಮತ್ತು ವಿಮಾ ಕರಡು ಮಸೂದೆ’ಯ ಪ್ರಕಾರ, ವಿಮಾನ ಪ್ರಯಾಣದ ಸಂದರ್ಭ ಸಾವು ಅಥವಾ ಗಾಯಗೊಂಡರೆ ಸಂತ್ರಸ್ತರ ಕುಟುಂಬಗಳಿಗೆ 5 ಪಟ್ಟು ಅಧಿಕ ಪರಿಹಾರ ದೊರಕುತ್ತದೆ. ಅಂದರೆ ಸಂತ್ರಸ್ತರ ಕುಟುಂಬಗಳಿಗೆ ಕನಿಷ್ಟ 1 ಲಕ್ಷ ಅಮೆರಿಕನ್ ಡಾಲರ್ ಮೊತ್ತದ ಪರಿಹಾರ ದೊರಕುತ್ತದೆ. ಆದರೆ ಈ ಕರಡು ಮಸೂದೆಯನ್ನು ಸಂಪುಟ ಸಭೆಯಲ್ಲಿ ಅನುಮೋದಿಸಿ ಬಳಿಕ ಸಂಸತ್ತಿನಲ್ಲಿ ಮಂಡಿಸಬೇಕಿದೆ. ನೇಪಾಳದಲ್ಲಿ ಈಗ ರಾಜಕೀಯ ಅಸ್ಥಿರತೆ ನೆಲೆಸಿದ್ದು ಸಂಸತ್ತಿನ ಅನುಮೋದನೆ ಕ್ಷಿಪ್ರವಾಗಿ ದೊರಕುವ ಸಾಧ್ಯತೆಯಿಲ್ಲ. ಪ್ರಸ್ತಾವಿತ ಮಸೂದೆಯ ಪ್ರಕಾರ, ವಿಮಾನ ದುರಂತ ನಡೆದ 60 ದಿನಗಳೊಳಗೆ ಪರಿಹಾರ ಮೊತ್ತಕ್ಕೆ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಆದರೆ ಈ ಎಲ್ಲಾ ಪ್ರಕ್ರಿಯೆ ಕ್ಷಿಪ್ರಗತಿಯಲ್ಲಿ ಸಾಗುವ ಸಾಧ್ಯತೆಯಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.