ಲಡಾಕ್ ಬಳಿಯ ಎಲ್ಎಸಿಯಲ್ಲಿ ಯುದ್ಧಸಿದ್ಧತೆ ಪರಿಶೀಲಿಸಿದ ಚೀನಾ ಅಧ್ಯಕ್ಷ

ಬೀಜಿಂಗ್, ಜ.20: ಪೂರ್ವ ಲಡಾಕ್ನಲ್ಲಿ ಭಾರತ-ಚೀನಾ ಗಡಿಯುದ್ಧಕ್ಕೂ ನಿಯೋಜನೆಗೊಂಡಿರುವ ಯೋಧರೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂಭಾಷಣೆ ನಡೆಸಿದ ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್(Xi Jinping), ಯುದ್ಧಸಿದ್ಧತೆಯನ್ನು ಪರಿಶೀಲನೆ ನಡೆಸಿದರು ಎಂದು ಸರಕಾರಿ ಸ್ವಾಮ್ಯದ ಮಾಧ್ಯಮ ಶುಕ್ರವಾರ ವರದಿ ಮಾಡಿದೆ.
ಬೀಜಿಂಗ್ ನಲ್ಲಿರುವ ಪೀಪಲ್ಸ್ ಲಿಬರೇಷನ್ ಆರ್ಮಿ(ಚೀನಾ ಸೇನಾಪಡೆ)ಯ ಕೇಂದ್ರಕಚೇರಿಯಿಂದ ಲಡಾಕ್ನ ವಾಸ್ತವಿಕ ನಿಯಂತ್ರಣ ರೇಖೆಯ ಬಳಿಯ ಯೋಧರನ್ನು ಉದ್ದೇಶಿಸಿ ಮಾತನಾಡಿದ ಜಿಂಪಿಂಗ್, ಕ್ಸಿನ್ಜಿಯಾಂಗ್ ಮಿಲಿಟರಿ ವಿಭಾಗದ ವ್ಯಾಪ್ತಿಯಲ್ಲಿರುವ ಖುಂಜೆರಾಬ್ ಪ್ರಾಂತದ ಗಡಿಭದ್ರತಾ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದರು. ಇತ್ತೀಚಿನ ದಿನಗಳಲ್ಲಿ ಈ ಪ್ರಾಂತದಲ್ಲಿ ನಡೆಯುತ್ತಿರುವ ನಿರಂತರ ಬದಲಾವಣೆ, ಮತ್ತು ಅದರಿಂದ ಸೇನೆಯ ಮೇಲೆ ಆಗುತ್ತಿರುವ ಪರಿಣಾಮದ ಬಗ್ಗೆ ಜಿಂಪಿಂಗ್ ಉಲ್ಲೇಖಿಸಿದರು ಎಂದು ಮಾಧ್ಯಮ ವರದಿ ಮಾಡಿದೆ.
ಆಡಳಿತಾರೂಢ ಚೀನಾ ಕಮ್ಯುನಿಸ್ಟ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಜಿಂಪಿಂಗ್, ಚೀನಾ ಸೇನೆಯ ಮಹಾದಂಡನಾಯಕರೂ ಆಗಿದ್ದಾರೆ.ಗಡಿ ಪಡೆಗಳ ‘ಗಡಿ ಗಸ್ತು ಮತ್ತು ನಿರ್ವಹಣಾ ಕಾರ್ಯದ’ ಬಗ್ಗೆ ವಿಚಾರಿಸಿದ ಅವರು, ಯೋಧರು ಗಡಿರಕ್ಷಣೆಯ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು. ದೇಶ ರಕ್ಷಣೆಯ ಯೋಧರ ಪ್ರಯತ್ನ ಮುಂದುವರಿಯಬೇಕು ಎಂದ ಅವರು, ಯೋಧರ ಯೋಗಕ್ಷೇಮ ವಿಚಾರಿಸಿದರು.
ಪೂರ್ವ ಲಡಾಕ್ನಲ್ಲಿ ಭಾರತ-ಚೀನಾ ಮಧ್ಯೆ ಗಡಿವಿವಾದವಿದ್ದು 2020ರ ಮೇ 5ರಂದು ಉಭಯ ಪಡೆಗಳ ಮಧ್ಯೆ ಘರ್ಷಣೆ ನಡೆದಿತ್ತು.