ಜೆಸಿಂಡಾ ಆರ್ಡನ್ ರಾಜೀನಾಮೆಯ ಕುರಿತ ಶೀರ್ಷಿಕೆಗೆ ಬಿಬಿಸಿ ಕ್ಷಮೆಯಾಚನೆ

ಲಂಡನ್, ಜ.20: ಗುರುವಾರ ದಿಢೀರ್ ರಾಜೀನಾಮೆ ಘೋಷಿಸಿದ್ದ ನ್ಯೂಝಿಲ್ಯಾಂಡ್ ಪ್ರಧಾನಿ ಜೆಸಿಂಡಾ ಆರ್ಡನ್(Jacinda Ardern) ಅವರ ಕುರಿತ ವರದಿಗೆ ಲಿಂಗತಾರಮ್ಯದ ಶೀರ್ಷಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ಬಿಬಿಸಿ, ಈ ಪ್ರಮಾದಕ್ಕೆ ಕ್ಷಮೆ ಯಾಚಿಸಿದೆ.
ಜೆಸಿಂಡಾ ರಾಜೀನಾಮೆಯ ವರದಿಗೆ ‘ಕ್ಯಾನ್ ವುಮೆನ್ ಹ್ಯಾವ್ ಇಟ್ ಆಲ್ (ಮಹಿಳೆಯರು ಎಲ್ಲವನ್ನೂ ಹೊಂದಿರಲು ಸಾಧ್ಯವೇ?) ’ ಎಂಬ ಶೀರ್ಷಿಕೆಯನ್ನು ಬಿಬಿಸಿ(BBC) ನೀಡಿತ್ತು. ಆದರೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಶೀರ್ಷಿಕೆಯನ್ನು ಡಿಲೀಟ್ ಮಾಡಿತ್ತು. ಆದರೆ ಟ್ವಿಟರ್ ನಲ್ಲಿ ಈ ಶೀರ್ಷಿಕೆ ಪ್ರಕಟವಾಗಿದ್ದು ಇದಕ್ಕೆ ಬಿಬಿಸಿಯಲ್ಲಿ ಪ್ರಕಟವಾಗಿದ್ದ ವರದಿಗೆ ಲಿಂಕ್ ನೀಡಲಾಗಿತ್ತು.
ಈ ಬಗ್ಗೆ ವ್ಯಾಪಕ ಟೀಕೆ, ಆಕ್ಷೇಪ ವ್ಯಕ್ತವಾಗಿದೆ. ಬಿಬಿಸಿ ಲಿಂಗತಾರತಮ್ಯ ಅನುಸರಿಸುತ್ತಿದೆ ಎಂದು ಕೆಲವು ಬಳಕೆದಾರರು ದೂರಿದ್ದರೆ, ಬಿಬಿಸಿ ಸ್ತ್ರೀದ್ವೇಷದ ಪ್ರತಿಪಾದಕ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣ ಎಚ್ಚೆತ್ತ ಬಿಬಿಸಿ ಕ್ಷಮೆ ಯಾಚಿಸಿದ್ದು ವರದಿಯ ಶೀರ್ಷಿಕೆಯನ್ನು ‘ ನಿರ್ಗಮನವು ಪ್ರಧಾನಿಯ ಮೇಲಿದ್ದ ವಿಶೇಷ ಒತ್ತಡವನ್ನು ಬಹಿರಂಗಪಡಿಸಿದೆ’ ಎಂದು ಬದಲಿಸಿದೆ.





