ಮಂಗಳೂರು | ಗಾಂಜಾ ಪ್ರಕರಣ: ಮತ್ತೆ ಇಬ್ಬರು ವೈದ್ಯರು, ಏಳು ವೈದ್ಯ ವಿದ್ಯಾರ್ಥಿಗಳ ಬಂಧನ
ಬಂಧಿತರ ಒಟ್ಟು ಸಂಖ್ಯೆ 24ಕ್ಕೆ ಏರಿಕೆ

ಮಂಗಳೂರು, ಜ.21: ಇತ್ತೀಚೆಗೆ ಬೆಳಕಿಗೆ ಬಂದಿರುವ ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕೆಲವು ವೈದ್ಯರ ಮತ್ತು ವಿದ್ಯಾರ್ಥಿಗಳ ಗಾಂಜಾ ಮಾರಾಟ-ಸೇವನೆ ಪ್ರಕರಣದ ತನಿಖೆಯನ್ನು ಮಂಗಳೂರು ನಗರ ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಇಬ್ಬರು ವೈದ್ಯರು, ಏಳು ಮಂದಿ ವೈದ್ಯ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ತನ್ನ ಕಚೇರಿಯಲ್ಲಿಂದು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ವೈದ್ಯರಾದ ಉತ್ತರ ಪ್ರದೇಶದ ಡಾ. ವಿದುಶ್ ಕುಮಾರ್ (27), ಕರ್ನಾಟಕದ ಡಾ.ಸುಧೀಂದ್ರ(34), ವೈದ್ಯ ವಿದ್ಯಾರ್ಥಿಗಳಾದ ಡಾ.ಸಿದ್ದಾರ್ಥ ಪಾವಸ್ಕರ್(29) ದಿಲ್ಲಿಯ ಡಾ.ಶರಣ್ಯ(23), ಕೇರಳದ ಡಾ.ಸೂರ್ಯಜೀತ್‌ದೇವ್(20), ಡಾ.ಆಯಿಷಾ ಮುಹಮ್ಮದ್(23), ತೆಲಂಗಾಣದವರಾದ ಡಾ.ಪ್ರಣಯ್ ನಟರಾಜ(24), ಡಾ.ಚೈತನ್ಯ ಆರ್ ತುಮುಲುರಿ(23) ಮತ್ತು ಉತ್ತರ ಪ್ರದೇಶ ಮೂಲದ ಡಾ. ಇಶಾ ಮಿಡ್ಡಾ(27) ಎಂಬವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಹೇಳಿದರು.
ಜ.7ರಂದು ವೈದ್ಯರ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಪ್ರಕರಣ ಪತ್ತೆಯಾದ ಬಳಿಕ ಈ ಪ್ರಕರಣದಲ್ಲಿ ಬಂಧಿತರ ಒಟ್ಟು ಸಂಖ್ಯೆ 24ಕ್ಕೆ ಏರಿದೆ ಎಂದು ಎನ್. ಶಶಿಕುಮಾರ್ ತಿಳಿಸಿದ್ದಾರೆ.