ಕನ್ನಡಿಗರಿಗೆ ಮೀಸಲಾತಿ ನೀಡುವಂತೆ ವಕೀಲರ ಪಟ್ಟು: ರಾಷ್ಟ್ರೀಯ ಕಾನೂನು ಶಾಲೆ ಕಚೇರಿಗೆ ಮುತ್ತಿಗೆ

ಬೆಂಗಳೂರು, ಜ.21: ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕನ್ನಡಿಗರಿಗೆ ಪ್ರವೇಶಾತಿಯಲ್ಲಿ ಮೀಸಲಾತಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವಕೀಲರು, ವಿವಿಧ ಸಂಘಟನೆಗಳ ಸದಸ್ಯರು ಕುಲಪತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಶನಿವಾರ ನಗರದ ನಾಗರಬಾವಿಯ ರಾಷ್ಟ್ರೀಯ ಕಾನೂನು ವಿದ್ಯಾಲಯದ ಮುಖ್ಯ ದ್ವಾರದ ಬಳಿ ಜಮಾಯಿಸಿದ ವಕೀಲರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಕುಲಪತಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.
ಈ ವೇಳೆ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ(ಎನ್‍ಎಲ್‍ಎಸ್‍ಐಯು) ಪ್ರವೇಶಾತಿಯಲ್ಲಿ ಕಾಯ್ದೆ ಪ್ರಕಾರ ಸ್ಥಳೀಯ ಮೀಸಲಾತಿಯಡಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟು ನೀಡದಿರುವುದನ್ನು ಖಂಡಿಸಿ ವಿವಿಯ ಕುಲಪತಿ ಕಚೇರಿಗೆ ಮುತ್ತಿಗೆ ಹಾಕಿದ್ದೇವೆ ಎಂದು ತಿಳಿಸಿದರು.
ನಮ್ಮ ನೆಲ-ಜಲ ಬಳಸಿಕೊಂಡು ಇದೀಗ ನಿಯಮಗಳನ್ವಯ ರಾಜ್ಯದ ಮಕ್ಕಳಿಗೆ ಕಳೆದ ಎರಡು ವರ್ಷದಿಂದ ಎಲ್‍ಎಎಲ್‍ಬಿ ಪ್ರವೇಶ ಕಲ್ಪಿಸದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಲ್ಲದೆ, ನ್ಯಾಷನಲ್ ಲಾ ಸ್ಕೂಲ್ ಕಾಯ್ದೆ ಪ್ರಕಾರ ಸ್ಥಳೀಯ ಮೀಸಲಾತಿಯಡಿ ಶೇ.25ರಷ್ಟನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು. ಆದರೆ, ಕೆಲ ವರ್ಷಗಳಿಂದ ಈ ನೀತಿಯನ್ನು ಪಾಲಿಸುತ್ತಿಲ್ಲ ಎಂದು ಅವರು ಆರೋಪಿಸಿದರು.







