ಕರಾವಳಿ ಕರ್ನಾಟಕಕ್ಕೆ ಕಾಂಗ್ರೆಸ್ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ: ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ

ಮಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರಾವಳಿ ಕರ್ನಾಟಕಕ್ಕೆ ಕಾಂಗ್ರೆಸ್ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ, ಚುನಾವಣಾ ಪ್ರಣಾಳಿಕೆ ರಚನಾ ಸಮಿತಿಯ ಅಧ್ಯಕ್ಷ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೆಸಿಸಿಐ, ಕ್ರೆಡೈಯಲ್ಲದೆ ರೈತರು, ಅಡಿಕೆ ಬೆಳೆಗಾರರು, ಮೀನುಗಾರರು, ರಿಕ್ಷಾ, ಬಸ್, ವಿದ್ಯಾರ್ಥಿ ಮತ್ತು ಎನ್‌ಜಿಒ ಸಂಘಟನೆಗಳು ಹಾಗೂ ಪಂಚಾಯತ್‌ರಾಜ್ ವ್ಯವಸ್ಥೆಯ ಸಂಘಟನೆಗಳ ಮುಖಂಡರ ಜೊತೆ ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದರು.
ದ.ಕ.ಜಿಲ್ಲೆಯಲ್ಲಿ ಮತೀಯ ಭಾವನೆ ಕೆರಳಿಸಿ ಅಶಾಂತಿ ಸೃಷ್ಟಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ಅದಕ್ಕೆ ಕಡಿವಾಣ ಹಾಕಿ ಶಾಂತಿ ನೆಲೆಸಲು ಪ್ರಯತ್ನ ಮಾಡಬೇಕಿದೆ. ಕಾಂಗ್ರೆಸ್ ಎಂದೂ ಕೂಡ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ಅಧಿಕಾರಕ್ಕೇರಿದ ಬಳಿಕ ಈಡೇರಿಸಲು ಸಾಧ್ಯವಾಗುವಂತಹ ಭರವಸೆಗಳನ್ನು ಮಾತ್ರ ಪ್ರಣಾಳಿಕೆಯಲ್ಲಿ ಸೇರಿಸಲಾಗುತ್ತದೆ. 200 ಯುನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂ.ನೀಡುವ ಭರವಸೆಯನ್ನು ನೀಡಲಾಗಿದೆ. ಹಣಕಾಸಿನ ಲೆಕ್ಕಾಚಾರ ಹಾಕಿಯೇ ಇದನ್ನು ಘೋಷಿಸಲಾಗಿದೆ ಎಂದು ಡಾ.ಪರಮೇಶ್ವರ ಹೇಳಿದರು.
ರಾಜ್ಯ ಸರಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿವೆ. ಶೇ.40 ಕಮಿಷನ್ ಆರೋಪ ಈಗಲೂ ಕೇಳಿ ಬರುತ್ತಿವೆ. ಗುತ್ತಿಗೆದಾರರ ಸಂಘಟನೆಗಳ ಮುಖಂಡರು ಈ ಬಗ್ಗೆ ಪ್ರಧಾನಿಗೆ ದೂರು ನೀಡಿದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಪರಮೇಶ್ವರ ಆರೋಪಿಸಿದರು.
ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಆದರೆ ಭಿನ್ನ ಅಭಿಪ್ರಾಯವಿದೆ. ಅದು ಸಹಜವಾದುದು. ಅದನ್ನು ಸರಿಪಡಿಸಿಕೊಂಡು ಚುನಾವಣೆಯನ್ನು ಎದುರಿಸಲಾಗುವುದು. ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೇರಲಿದೆ. ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರಕಾರ ರಚಿಸುವಂತಹ ವಾತಾವರಣ ಸೃಷ್ಟಿಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತ್ ಜೋಡೋ ಯಾತ್ರೆಯಿಂದ ಎಐಸಿಸಿ ನಾಯಕ ರಾಹುಲ್‌ಗಾಂಧಿಯ ವ್ಯಕ್ತಿತ್ವದಲ್ಲಿ ಭಾರೀ ಬದಲಾವಣೆಯಾಗಿದೆ ಎಂಬ ಮಾತು ರಾಜಕೀಯ ವಿಶ್ಲೇಷಕರಿಂದ ಕೇಳಿ ಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಮಧು ಬಂಗಾರಪ್ಪ, ಜೆ.ಆರ್.ಲೋಬೋ, ಐವನ್ ಡಿಸೋಜ, ಶಕುಂತಳಾ ಶೆಟ್ಟಿ, ಮನಪಾ ವಿಪಕ್ಷ ನಾಯಕ ನವೀನ್ ಡಿಸೋಜ, ಮುಖಂಡರಾದ ಜಿ.ಎ.ಬಾವಾ, ಇಬ್ರಾಹೀಂ ಕೋಡಿಜಾಲ್, ಕವಿತಾ ಸನಿಲ್, ಪ್ರೊ. ರಾಧಾಕೃಷ್ಣ, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಕೆ.ಕೆ.ಶಾಹುಲ್ ಹಮೀದ್, ಕೃಪಾ ಆಳ್ವ ಮತ್ತಿತರರು ಉಪಸ್ಥಿತರಿದ್ದರು.