ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದ ವಿಚಾರ; ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ ಎಂದ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು, ಜ. 21: ‘ವಿಮಾನದಲ್ಲಿ ತುರ್ತು ನಿರ್ಗಮನ ದ್ವಾರ ತೆರೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ನಾಯಕರ ಟೀಕೆಗಳನ್ನು ನಾನು ವೈಭವೀಕರಿಸಲು ಹೋಗುವುದಿಲ್ಲ. ಈಗಾಗಲೇ ಈ ವಿಷಯದ ಬಗ್ಗೆ ನಾನು ಸ್ಪಷ್ಟನೆ ನೀಡಿದ್ದು, ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಸಂಸದ ತೇಜಸ್ವಿ ಸೂರ್ಯ ನಿರಾಕರಿಸಿದ್ದಾರೆ.
ಶನಿವಾರ ಇಲ್ಲಿನ ವಿಜಯನಗರದಲ್ಲಿ ‘ನಮೋ ಚಾರಿಟಿ ರನ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ವಿಷಯದ ಬಗ್ಗೆ ಈಗಾಗಲೇ ಏರ್‍ಲೈನ್ಸ್ ಡಿಜಿಸಿಎ ಸ್ಪಷ್ಟನೆ ನೀಡಿದೆ. ವಿಮಾನಯಾನ ಸಚಿವರು ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಸ್ಪಷ್ಟಪಡಿಸಿದ್ದು, ನನ್ನ ಜೊತೆ ಪ್ರಯಾಣ ಬೆಳೆಸಿದ್ದ ಅಣ್ಣಾಮಲೈ ಘಟನೆಯ ಸತ್ಯ ಸಂಗತಿಗಳನ್ನು ತಿಳಿಸಿದ್ದಾರೆ ಎಂದು ವಿವರಣೆ ನೀಡಿದರು.
ಇದೇ ಸಂದರ್ಭದಲ್ಲಿ ನನ್ನೊಂದಿಗೆ ಪ್ರಯಾಣಿಸುತ್ತಿದ್ದ ಇನ್ನಿಬ್ಬರು ಪ್ರಯಾಣಿಕರು ನಡೆದ ಸತ್ಯ ಸಂಗತಿ ತಿಳಿಸಿದ್ದಾರೆ. ಹೀಗಾಗಿ ಈ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಕೇಳುವ ಪ್ರಶ್ನೆಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದು ತೇಜಸ್ವಿ ಸೂರ್ಯ ತಿಳಿಸಿದರು.
2022ರ ಡಿಸೆಂಬರ್ 10ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಚೆನ್ನೈ-ತಿರುಚ್ಚಿ ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದ ಘಟನೆ ನಡೆದಿತ್ತು. ಈ ಸಂಬಂಧ ಸಂಸದ ತೇಜಸ್ವಿ ಸೂರ್ಯ ಹೆಸರು ಕೇಳಿ ಬಂದಿತ್ತು. ಈ ವೇಳೆ ತುರ್ತು ನಿರ್ಗಮನ ಬಾಗಿಲ ಬಳಿ ಕುಳಿತಿದ್ದ ಪ್ರಯಾಣಿಕರೋರ್ವರು ಇದ್ದಕ್ಕಿದ್ದಂತೆ ಲಿವರ್ ಅನ್ನು ಎಳೆದು ಬಾಗಿಲನ್ನು ತೆರೆದಿದ್ದರು ಎಂದು ಹೇಳಲಾಗಿತ್ತು.







