ಕುಂದಾಪುರ: 'ಜಿಲ್ಲಾಧಿಕಾರಿಯವರ ನಡೆ ಹಳ್ಳಿಯ ಕಡೆ' ಕಾರ್ಯಕ್ರಮ

ಕುಂದಾಪುರ: ಗ್ರಾಮಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಬಂದು ಜನರ ಸಮಸ್ಯೆಗಳನ್ನು ಆಲಿಸಿ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಅದನ್ನು ಬಗೆಹರಿಸಲು ಜಿಲ್ಲಾಧಿಕಾರಿಯವರ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ ಹೇಳಿದ್ದಾರೆ.
ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳೂರು-74ರ ವ್ಯಾಪ್ತಿಯಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಯವರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಅಹವಾಲು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಗ್ರಾಮಸ್ಥ ಚಿಟ್ಟೆ ರಾಜಗೋಪಾಲ ಹೆಗ್ಡೆ ಮಾತನಾಡಿ, 2015ರಲ್ಲಿ ಉಳ್ಳೂರು 74 ಸ್ವತಂತ್ರ ಗ್ರಾಪಂ ಆಗಿದ್ದು, ಇಲ್ಲಿನ ಕೇಂದ್ರ ಸ್ಥಾನದಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಇದ್ದಲ್ಲಿ ಇಲ್ಲಿನವರು ವಿಎ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಮಚ್ಚಟ್ಟುವಿನಲ್ಲಿರುವ ವಿಎ ಅವರನ್ನು ಸಂಪರ್ಕಿಸುವುದು ಸಾಹಸದ ಕೆಲಸ ಎಂದರು.
ಇದಕ್ಕೆ ಉತ್ತರಿಸಿದ ತಹಶೀಲ್ದಾರ್, ವಾರದಲ್ಲಿ ಮೂರು ದಿನ ಉಳ್ಳೂರಿನಲ್ಲಿ, ಮೂರು ದಿನ ಮಚ್ಚಟ್ಟಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸುವಂತೆ ಸ್ಥಳದಲ್ಲಿಯೇ ಸಂಬಂಧಪಟ್ಟ ಗ್ರಾಮಲೆಕ್ಕಾಧಿಕಾರಿಗೆ ಸೂಚಿಸಿದರು.
ಸ್ಮಶಾನದ ಬಗ್ಗೆ ಜನಾಭಿಪ್ರಾಯ ಪಡೆಯೋಣ: ಉಳ್ಳೂರು ಗ್ರಾಮದಲ್ಲಿ ಸ್ಮಶಾನವಿಲ್ಲ. ಕಾಯ್ದಿರಿಸಿದ ಭೂಮಿಗೆ ಬೇಲಿಹಾಕಿದ್ದು ಗ್ರಾಮದಿಂದ ದೂರದ ಅಂಸಾಡಿ ಎಂಬಲ್ಲಿ ಸ್ಮಶಾನ ನಿರ್ಮಾಣಕ್ಕೆ ಜಾಗ ಗುರುತು ಮಾಡಲಾಗಿದೆ. ಆರ್‌ಟಿಸಿ ಕೂಡ ಸಿದ್ಧವಾಗಿದೆ ಎಂದು ಗ್ರಾಮಸ್ಥರೊಬ್ಬರು ಹೇಳಿದಾಗ, ಸ್ಮಶಾನ ಎಲ್ಲಿ ಮಾಡಬೇಕೆಂಬ ಬಗ್ಗೆ ಗೊಂದಲವಿರುವ ಕಾರಣ ಸ್ಥಳ ಪರಿಶೀಲನೆ ಮಾಡಿ ಜನಾಭಿಪ್ರಾಯ ಪಡೆದು ಮುನ್ನೆಡೆಯೋಣಎಂದು ತಹಶೀಲ್ದಾರ್ ತಿಳಿಸಿದರು. ಇದಕ್ಕೆ ಗ್ರಾಪಂ ಸದಸ್ಯ ಪ್ರಸಾದ ಶೆಟ್ಟಿ ಕಟ್ಟಿನಬೈಲು ಸಹಮತ ವ್ಯಕ್ತಪಡಿಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ ವಾರಾಹಿ ಕಾಲುವೆ ಅವ್ಯವಸ್ಥೆ ಬಗ್ಗೆ ಗ್ರಾಪಂ ಸದಸ್ಯ ಸುಧಾಕರ ಶೆಟ್ಟಿ ಸಂಬಂದಪಟ್ಟ ಅಧಿಕಾರಿಗಳ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಉಳ್ಳೂರು-74, ಹೆಬ್ಬಾಡಿ ಹಾಗೂ ಹದನಗದ್ದೆ ಎಂಬಲ್ಲಿ ಸುಸಜ್ಜಿತ ಸೇತುವೆ ನಿರ್ಮಾಣಕ್ಕೆ ಬೇಡಿಕೆ, ಉಪಆರೋಗ್ಯ ಕೇಂದ್ರ ನಿರ್ಮಾಣ, ಸರಕಾರಿ ಬಸ್ ಓಡಿಸಲು ಬೇಡಿಕೆ, ಕಾಡು ಪ್ರಾಣಿಗಳ ಹಾವಳಿ ಮೊದಲಾದ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಂದ ದೂರು ಕೇಳಿಬಂದವು.
ಇದೇ ಸಂದರ್ಭ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ಸಾಮಾಜಿಕ ಭದ್ರತಾ ಯೋಜನೆ ಮಂಜೂರಾತಿ ಪತ್ರ ಹಾಗೂ 94ಸಿ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಲಾಯಿತು.
ಉಳ್ಳೂರು-74 ಗ್ರಾಪಂ ಅಧ್ಯಕ್ಷ ರಾಜೇಶ್ ಹೆಬ್ಬಾರ್, ಉಪಾಧ್ಯಕ್ಷೆ ರತ್ನಾ ಶೇಖರ ನಾಯ್ಕ್, ಸಿದ್ದಾಪುರ ಗ್ರಾಪಂ ಅಧ್ಯಕ್ಷ ಶೇಖರ ಕುಲಾಲ್ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಕಂದಾಯ ನಿರೀಕ್ಷಕ ರಾಘವೇಂದ್ರ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ ಕಾಮತ್ ವಂದಿಸಿದರು.







