ಸರಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡ ಬಡವರಿಗೆ ಹಕ್ಕು ಪತ್ರ: ಸಚಿವ ಅಶೋಕ್
''ಹೊಸಕೋಟೆ ವರೆಗೆ ಮೆಟ್ರೊ ವಿಸ್ತರಣೆ''

ಬೆಂಗಳೂರು, ಜ. 21: ಹೊಸಕೋಟೆ ನಗರದ ವರೆಗೆ ಮೆಟ್ರೊ ಹಾಗೂ ಕಾವೇರಿ ನೀರು ಪೂರೈಕೆ ವಿಸ್ತರಿಸುವ ಕಾರ್ಯವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೊಕ್ ಹೇಳಿದರು.
ಶನಿವಾರ ಜಿಲ್ಲಾಡಳಿತ, ಜಿ.ಪಂ.ಸಹಯೋಗದಲ್ಲಿ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ರಾಗಿಯ ರಾಶಿಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಜಮೀನು ಹಾಗೂ ಅರಣ್ಯದ ಅಂಚಿನ ಜಾಗೆಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ ಬಡ ಜನರನ್ನು ಎತ್ತಂಗಡಿ ಮಾಡಲು ಅವಕಾಶ ನೀಡುವುದಿಲ್ಲ. 94 ‘ಸಿ’ ಹಾಗೂ 94 ‘ಸಿಸಿ’ ಅಡಿ ಅವರು ಅರ್ಜಿ ನೀಡಿದರೆ ಅವರಿಗೆ ನಿವೇಶನದ ಹಕ್ಕುಗಳನ್ನು ನೀಡಲಾಗುವುದು. ಬರುವ ತಿಂಗಳಿನಿಂದ ಪಡಿತರ ವಿತರಣೆ ಪ್ರಮಾಣ ಪುನಃ 10ಕೆಜಿಗೆ ಹೆಚ್ಚಿಸಲಾಗುವುದು ಎಂದರು.
ಬಡ ನಿವೇಶನ ರಹಿತರ ಹಕ್ಕುಗಳನ್ನು ಕಾಯಲು ಸರಕಾರ ಬದ್ಧ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬರುತ್ತಿದ್ದ ಪಡಿತರ ಸ್ಥಗಿತವಾಗಿರುವದರಿಂದ ಪಡಿತರ ವಿತರಣೆ ಪ್ರಮಾಣ ಇಳಿಕೆಯಾಗಿದೆ. ಪುನಃ ಈ ಪ್ರಮಾಣ ಹೆಚ್ಚಿಸಲು ಸಿಎಂ ಜತೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಚಿವ ಎನ್.ನಾಗರಾಜ(ಎಂಟಿಬಿ) ಮಾತನಾಡಿ, ಯಾವುದೇ ಜಾತಿ, ಧರ್ಮಗಳ ಭೇದವಿಲ್ಲದೆ ಎಲ್ಲ ಬಡವರಿಗೆ ನಿವೇಶನ ಒದಗಿಸುವ ಸಂಕಲ್ಪ ಇದಾಗಿದೆ. ಫಲಾನುಭವಿಗಳ ಆಯ್ಕೆಯು ನಿಯಮಾನುಸಾರ ಪಾರದರ್ಶಕವಾಗಿ ನಡೆಯಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳಡಿ 28 ಸಾವಿರಕ್ಕೂ ಹೆಚ್ಚು ವಿವಿಧ ವೈಯಕ್ತಿಕ ಸವಲತ್ತುಗಳು ಇಂದು ವಿತರಣೆಯಾಗುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಜನಸಾಮಾನ್ಯರ ಕಲ್ಯಾಣದ ಕನಸಿನೊಂದಿಗೆ ಸರಕಾರ ಜನಪರ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ. ಸಾರ್ವಜನಿಕರ ತೆರಿಗೆಯಿಂದ ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಇಂದು ತೆರಿಗೆ ಪಾವತಿದಾರರ ಬಳಿಗೆ ಬಂದು ಸೌಲಭ್ಯಗಳನ್ನು ನೀಡುತ್ತಿರುವದು ಅಭಿನಂದನೀಯ ಕಾರ್ಯ.
ಹೊಸಕೋಟೆ ತಾಲೂಕಿನ ಸಾಗುವಳಿ ಚೀಟಿ ಹೊಂದಿರುವ ತಾಲೂಕಿನ ರೈತರಿಗೆ ಹಕ್ಕುಪತ್ರ ವಿತರಣೆಗೂ ಕ್ರಮವಹಿಸಬೇಕು. ಬಡರೈತರನ್ನು ಒಕ್ಕಲೆಬ್ಬಿಸಿ ನಿವೇಶನ ರಹಿತರಿಗೆ ನಿವೇಶನ ಒದಗಿಸುವದಕ್ಕಿಂತ, ಖಾಲಿ ಇರುವ ಜಾಗೆಗಳನ್ನು ಗುರುತಿಸಿ ನಿವೇಶನದ ಹಕ್ಕುಪತ್ರಗಳನ್ನು ವಿತರಿಸಬೇಕು. ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ಉಪನೋಂದಣಾಧಿಕಾರಿ ಕಚೇರಿ ಹಾಗೂ ತಾಲೂಕು ಆಡಳಿತ ಸೌಧ ನಿರ್ಮಿಸಬೇಕು. ಪಡಿತರ ಪ್ರಮಾಣವನ್ನು 10ಕೆಜಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ, ನಗರಸಭೆ ಅಧ್ಯಕ್ಷ ಬಿ.ಕೆ.ನಾಗರಾಜ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಂಕರೇಗೌಡ, ಉಪಾಧ್ಯಕ್ಷೆ ಸುಗುಣಾ, ಜಡಿಗೇನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಪಲ್ಲವಿ ಅರುಣಕುಮಾರ್, ಉಪಾಧ್ಯಕ್ಷ ಎಚ್.ಎನ್.ರವಿಕುಮಾರ್, ಜಿಪಂ ಸಿಇಓ ಕೆ.ರೇವಣಪ್ಪ, ಉಪವಿಭಾಗಾಧಿಕಾರಿ ತೇಜಸ್ ಕುಮಾರ, ತಹಸೀಲ್ದಾರ ಮಹೇಶಕುಮಾರ ಉಪಸ್ಥಿತರಿದ್ದರು.







