ಫೆಬ್ರವರಿಯಲ್ಲಿ ರಾಜ್ಯಕ್ಕೆ ಮತ್ತೆ ಪ್ರಧಾನಿ ಮೋದಿ ಭೇಟಿ
ಬೆಂಗಳೂರು, ಜ. 22: ಇದೇ ತಿಂಗಳಲ್ಲಿ ಎರಡು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಫೆಬ್ರವರಿಯಲ್ಲಿ ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಫೆ.6ರಂದು ಧಾರವಾಡ ಮತ್ತು ತುಮಕೂರು ಜಿಲ್ಲೆ ಪ್ರವಾಸ ಕೈಗೊಂಡಿದ್ದು, ಧಾರವಾಡದ ಐಐಟಿ ಉದ್ಘಾಟನೆ ಮಾಡಲು ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಅದೇ ದಿನ ತುಮಕೂರು ಜಿಲ್ಲೆಯ ಗುಬ್ಬಿ ಬಳಿಯ ಎಚ್ಎಎಲ್ ಹೆಲಿಕಾಪ್ಟರ್ ಘಟಕ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಆ ಬಳಿಕ ಫೆ.27ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಲು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಮೋದಿ ಅವರು ಸರಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ಬೃಹತ್ ಸಮಾವೇಶವನ್ನು ಏರ್ಪಡಿಸಲು ಬಿಜೆಪಿ ನಾಯಕರಿಗೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆಂದು ಹೇಳಲಾಗಿದೆ.
ಜ.12ಕ್ಕೆ ವಿವೇಕಾನಂದರ ಜನ್ಮದಿನ ಪ್ರಯುಕ್ತ ಹುಬ್ಬಳ್ಳಿ-ಧಾರವಾಡದಲ್ಲಿ ನಡೆದ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಚಾಲನೆ ನೀಡಿದ್ದರು. ನಂತರ ಜ.19ರಂದು ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗೆ ಭೇಟಿ ನೀಡಿ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಸಹಿತ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದ್ದರು.