ಕಡಬ: ಕುಮಾರಧಾರ ಹೊಳೆಯಲ್ಲಿ ತೆಪ್ಪ ಮಗುಚಿ ಮಹಿಳೆ ಮೃತ್ಯು
ಕಡಬ: ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಏಣಿತ್ತಡ್ಕ ಎಂಬಲ್ಲಿ ಕುಮಾರಧಾರ ನದಿಯಲ್ಲಿ ತೆಪ್ಪ ಮಗುಚಿ ಮಹಿಳೆಯೋರ್ವರು ಮೃತಪಟ್ಟ ಘಟನೆ ವರದಿಯಾಗಿದೆ.
ಏಣಿತ್ತಡ್ಕ ನಿವಾಸಿ ಬಾಳಪ್ಪ ನಾಯ್ಕ ಎಂಬುವವರ ಪತ್ನಿ ಗೀತಾ(46) ಮೃತಪಟ್ಟ ಮಹಿಳೆ ಎಂದು ತಿಳಿದು ಬಂದಿದೆ.
ಕುಮಾರಧಾರ ಹೊಳೆಯಲ್ಲಿ ತೆಪ್ಪದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅರೆಲ್ತಡ್ಕ ಎಂಬಲ್ಲಿಂದ ಗೀತಾ ಹುಲ್ಲು ಸಂಗ್ರಹಿಸಿ ಹೊಳೆ ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ನದಿಯ ಮದ್ಯ ಭಾಗಕ್ಕೆ ಬಂದಾಗ ಜೋರಾಗಿ ಗಾಳಿ ಬೀಸಿದೆ. ಇದರಿಂದ ತೆಪ್ಪ ನಿಯಂತ್ರಣಕ್ಕೆ ಸಿಗದೇ ಮಗುಚಿ ಬಿದ್ದಿದೆ ಎಂದು ಹೇಳಲಾಗಿದೆ.
ಇಬ್ಬರು ಪಾರು: ತೆಪ್ಪದಲ್ಲಿದ್ದ ಇನ್ನಿಬ್ಬರು ಮಹಿಳೆಯರು ಹುಲ್ಲು ತುಂಬಿದ್ದ ಗೋಣಿ ಚೀಲದ ಸಹಾಯದಿಂದ ಈಜಿ ದಡ ಸೇರಿದ್ದಾರೆ. ಆದರೆ, ಗೀತಾ ಈಜಲಾಗದೇ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಕಡಬ. ಠಾಣಾ ಎ.ಎಸ್ ಐ ಶಿವರಾಮ, ಕಾನ್ಸ್ ಟೇಬಲ್ ಚಂದನ್ ಸ್ಥಳಕ್ಕಾಗಮಿಸಿ ಪರೀಶಿಲನೆ ನಡೆಸಿದ್ದಾರೆ. ಮೃತರ ಪತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಇಬ್ಬರು ಪುತ್ರರು ಹಾಗು ಓರ್ವ ಪುತ್ರಿಯನ್ನು ಅಗಲಿದ್ದಾರೆ.