ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ಉತ್ತರಾಖಂಡದಲ್ಲಿ ಬಂಧಿಸಿದ ಮಣಿಪಾಲ ಪೊಲೀಸರು

ಮಣಿಪಾಲ: ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ನೇಪಾಳ ದೇಶದ ಪೋಕ್ಸೋ ಪ್ರಕರಣದ ಆರೋಪಿಯನ್ನು ಮಣಿಪಾಲ ಪೊಲೀಸರು ಭಾರತ-ನೇಪಾಳ ಗಡಿಭಾಗದ ಉತ್ತರಾಖಂಡ ರಾಜ್ಯದ ಬನ್‌ಬಸಾ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿಕೋಟ್ ಎಂಬಲ್ಲಿ ಜ.20ರಂದು ಬಂಧಿಸಿದ್ದಾರೆ.
ನೇಪಾಳ ದೇಶದ ಸುಧುರ್ ಪಶ್ಚಿಮ ರಾಜ್ಯದ ಕಾಂಚನಪುರ ಜಿಲ್ಲೆಯ ನಿವಾಸಿ ಜಿತೇಂದ್ರ ಶಾರ್ಕಿ(26) ಬಂಧಿತ ಆರೋಪಿ. ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಜಿತೇಂದ್ರ ಶಾರ್ಕಿ ವಿರುದ್ದ ನ್ಯಾಯಾಲಯವು ಸುಮಾರು 16 ಬಾರಿ ವಾರಂಟ್ ಹಾಗೂ ಮೂರು ಬಾರಿ ಅಟ್ಯಾಚ್‌ಮೆಂಟ್ ವಾರೆಂಟ್ ಹೊರಡಿಸಿತ್ತು.
ಈತನನ್ನು ಪತ್ತೆ ಹಚ್ಚಲು ಎಸ್ಪಿ ಅಕ್ಷಯ್ ಮಚ್ಚೀಂದ್ರ ಹಾಕೇ ವಿಶೇಷ ತಂಡ ವನ್ನು ರಚಿಸಿದ್ದು, ಹೆಚ್ಚುವರಿ ಎಸ್ಪಿ ಸಿದ್ಧಲಿಂಗಪ್ಪ, ಡಿವೈಎಸ್ಪಿ ದಿನಕರ ಕೆ.ಪಿ., ಮಪಾಲ ಪೊಲೀಸ್ ನಿರೀಕ್ಷಕ ದೇವರಾಜ ಟಿ.ವಿ. ನಿರ್ದೇಶನದಲ್ಲಿ ಮಪಾಲ ಎಸ್ಸೈ ಅಬ್ದುಲ್ ಖಾದರ್, ಪ್ರೊಬೇಷನರಿ ಎಸ್ಸೈ ನಿಧಿ ಬಿ.ಎನ್. ಮತ್ತು ಪ್ರೊಸೆಸ್ ಕರ್ತವ್ಯದ ಎಚ್‌ಸಿ ಥೋಮ್ಸನ್, ಎಸ್‌ಪಿ ಕಛೇರಿಯ ಗಣಕ ಯಂತ್ರ ವಿಭಾಗದ ಸಿಬ್ಬಂದಿ ದಿನೇಶ್ ಸಹಕಾರದೊಂದಿಗೆ ಸತತ ಒಂದು ವಾರಗಳ ಕಾಲ ಭಾರತ- ನೇಪಾಳ ಗಡಿಯಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.
ಜಿತೇಂದ್ರ ಶಾರ್ಕಿಯನ್ನು ವಶಕ್ಕೆ ಪಡೆದು ಜ.22ರಂದು ವಾರೆಂಟ್‌ನೊಂದಿಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.