ಯುವ ಜನರೇ,ಡ್ರಗ್ಸ್‌ನಿಂದ ದೂರವಿರಿ: ಮಿಶಲ್ ಕ್ವೀನಿ ಡಿ’ಕೋಸ್ಟ

ಕರಾವಳಿ ಕರ್ನಾಟಕದ ಸುಪುತ್ರಿ ಮಿಶಲ್ ಕ್ವೀನಿ ಡಿ’ಕೋಸ್ಟ ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಮಿಂಚಿದ್ದಾರೆ. ಅವರ ದಕ್ಷತೆಯನ್ನು ಮೆಚ್ಚಿ ದಿಲ್ಲಿಯಿಂದ ಅವರನ್ನು ಗೌರವ ಹುಡುಕಿಕೊಂಡು ಬಂದಿದೆ. ಇಂಡಿಯನ್ ರೆವೆನ್ಯೂ ಸರ್ವಿಸ್ ಅಧಿಕಾರಿ, ಕೇಂದ್ರ ಸರಕಾರದ ರೆವೆನ್ಯೂ ಇಂಟೆಲಿಜೆನ್ಸ್ ನಿರ್ದೇಶನಾಲಯದ ಮುಂಬೈ ಪ್ರಾಂತೀಯ ಘಟಕದ ಉಪ ನಿರ್ದೇಶಕಿ, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ನೀರುಡೆಯ ಮಿಶಲ್ ಕ್ವೀನಿ ಡಿ’ಕೋಸ್ಟ ಅವರು ಕಳೆದ ವರ್ಷ ಕಸ್ಟಮ್ಸ್ ತಂಡದ ಕಾರ್ಯಾಚರಣೆ ವೇಳೆ ನೈಜೀರಿಯಾ ಪ್ರಜೆಗಳು 1.9 ಕೆಜಿ ತೂಕದ ಮಾದಕ ದ್ರವ್ಯದ ಸಹಿತ ನಾಲ್ಕನೇ ಮಹಡಿಯಿಂದ ಜಿಗಿದು ಪರಾರಿಯಾಗಲೆತ್ನಿಸಿದ ವೇಳೆ ಜೀವದ ಹಂಗು ತೊರೆದು ಏಕಾಂಗಿಯಾಗಿ ಅವರ ಬೆಂಬತ್ತಿ ಅಡ್ಡಗಟ್ಟಿ, ಕಾರ್ಯಾಚರಣೆ ತಂಡ ಬರುವವರೆಗೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಸಾಹಸಕ್ಕಾಗಿ ಅವರಿಗೆ ಇತ್ತೀಚೆಗೆ ಹೊಸದಿಲ್ಲಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2022ರ ಸಾಲಿನ ಡಿಆರ್‌ಐ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಮಿಶಲ್, ನೀರುಡೆಯ ಪ್ರಗತಿ ಪರ ಕೃಷಿಕ ಲಾಝರಸ್ ಡಿ’ಕೋಸ್ಟ ಹಾಗೂ ನ್ಯಾನ್ಸಿ ಡಿ’ಕೋಸ್ಟ ಅವರ ಪುತ್ರಿ. 2015ರ ಯುಪಿಎಸ್ಸಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 387ನೇ ರ್ಯಾಂಕ್‌ನೊಂದಿಗೆ ಉತ್ತೀರ್ಣರಾಗಿ ಅದೇ ವರ್ಷ ಜಿಎಸ್‌ಟಿ ಅಸಿಸ್ಟೆಂಟ್ ಕಮಿಷನರ್ ಆಗಿ ನೇಮಕಗೊಂಡಿದ್ದರು.ಈ ಅಪೂರ್ವ ಸಾಧನೆ, ತಾನು ಐಆರ್‌ಎಸ್ ಅಧಿಕಾರಿಯಾಗಲು ಕಾರಣ, ಅದಕ್ಕಾಗಿ ನಡೆಸಿದ ತಯಾರಿ ಹಾಗೂ ಡ್ರಗ್ಸ್ ಮಾಫಿಯಾದ ಸುಳಿಯಲ್ಲಿ ಮಂಗಳೂರಿನ ಯುವಜನತೆ ಸಿಲುಕುತ್ತಿರುವ ಬಗ್ಗೆ ಮಿಶಲ್ ಅವರ ಜೊತೆ ‘ವಾರ್ತಾಭಾರತಿ’ ನಡೆಸಿದ ಮಾತುಕತೆಯಲ್ಲಿ ಅವರು ಹೇಳಿದ್ದು ಇಲ್ಲಿದೆ:
- ಡಿಆರ್‌ಐ ಶೌರ್ಯ ಪ್ರಶಸ್ತಿ ಪಡೆದಿರುವ ನಿಮಗೆ ‘ವಾರ್ತಾಭಾರತಿ’ ಬಳಗದ ಪರವಾಗಿ ಅಭಿನಂದನೆಗಳು. ಕನ್ನಡಿಗರು ಅದರಲ್ಲೂ ವಿಶೇಷವಾಗಿ ಕರಾವಳಿ ಕನ್ನಡಿಗರು ಈ ಸುದ್ದಿ ಓದಿ ಬಹಳ ಖುಷಿ ಪಟ್ಟಿದ್ದಾರೆ. ನೀವು ಈಗ ನಿರ್ವಹಿಸುತ್ತಿರುವ ಹುದ್ದೆ ಮತ್ತು ಅದರ ಜವಾಬ್ದಾರಿಗಳೇನೇನು?
ಮಿಶಲ್: ಈಗ ನಾನು ಮುಂಬೈಯಲ್ಲಿ ರೆವೆನ್ಯೂ ಇಂಟೆಲಿಜೆನ್ಸ್ ನಿರ್ದೇಶನಾಲಯದಲ್ಲಿ ಉಪ ನಿರ್ದೇಶಕಿಯಾಗಿದ್ದೇನೆ. ಇದು ದೇಶದ ಸುಂಕ ಅಕ್ರಮವನ್ನು ಹಿಡಿಯುವ ಏಜನ್ಸಿ. ಮುಖ್ಯವಾಗಿ ತನಿಖೆ ಮತ್ತು ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ. ಎರಡು ವಿಭಾಗಗಳಿವೆ. ಎಕ್ಸಿಕ್ಯೂಟಿವ್ ಮತ್ತು ನಿಯಮಗಳನ್ನು ಅನುಷ್ಠಾನಗೊಳಿಸುವ ವಿಭಾಗ.
- ಡ್ರಗ್ ಪೆಡ್ಲರ್‌ಗಳನ್ನು ಹಿಡಿದ ಕಾರ್ಯಾಚರಣೆಯ ಬಗ್ಗೆ ವಿವರಿಸುತ್ತೀರಾ?
ಮಿಶಲ್: ಅದರ ಬಗ್ಗೆ ನಾನು ತುಂಬ ವಿವರವಾಗಿ ಹೇಳಲು ಆಗುತ್ತಿಲ್ಲ. ಆದರೂ ಇಷ್ಟು ಹೇಳಬಹುದು, ಅದೊಂದು ಗುಪ್ತ ಕಾರ್ಯಾಚರಣೆ. ಇದರಲ್ಲಿ ನಾವು, ಅವರನ್ನು ಹಿಡಿಯುವುದಕ್ಕೆ ವಿವರವಾದ ಯೋಜನೆ ಇಟ್ಟುಕೊಂಡಿದ್ದೆವು. ಈ ನಾರ್ಕೋಟಿಕ್ ಕೇಸ್‌ನಲ್ಲಿ ಡ್ರಗ್ ಪೆಡ್ಲರ್‌ಗಳ ವಿತರಣೆಯ ಸರಪಣಿಯನ್ನು ತಡೆಯುವುದು ಮುಖ್ಯ ಉದ್ದೇಶ. ನಾವು ಅವರೆಲ್ಲರ ನೆಟ್‌ವರ್ಕ್ ಪತ್ತೆಮಾಡಿ ಕಾಯುತ್ತಿದ್ದೆವು. ದುರದೃಷ್ಟವಶಾತ್ ಅವರಿಗೆ ಸ್ವಲ್ಪಸುಳಿವು ಸಿಕ್ಕಿತು. ಹಾಗಾಗಿ ಪರಾರಿಯಾಗಲು ಕಟ್ಟಡದಿಂದ ಜಿಗಿದು ಹೋಗುವಾಗ ಬೆನ್ನಟ್ಟಿ ಹಿಡಿಯಬೇಕಾಯಿತು.
- ನಿಮ್ಮ ಕೌಟುಂಬಿಕ ಹಿನ್ನೆಲೆ ಹಾಗೂ ಶಿಕ್ಷಣದ ಬಗ್ಗೆ ಹೇಳಿ.
ಮಿಶಲ್: ನಮ್ಮದು ಮೂಡುಬಿದಿರೆ ಸಮೀಪದ ನೀರುಡೆ ಎಂಬ ಊರು. ಕೃಷಿಕ ಕುಟುಂಬ. ಅಡಿಕೆ, ತೆಂಗು ಇರುವ ಸಣ್ಣ ತೋಟ ತಂದೆ ತಾಯಿ ನೋಡಿಕೊಳ್ಳುತ್ತಾರೆ. ನಾನು ಪ್ರೈಮರಿಯನ್ನು ಕನ್ನಡ ಮಾಧ್ಯಮದಲ್ಲಿ ಸಂತ ಫ್ರಾನ್ಸಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದೆ. ಹೈಸ್ಕೂಲು ಓದಿದ್ದು ಕಿನ್ನಿಗೋಳಿಯ ಲಿಟಲ್ ಫ್ಲವರ್ ಹೈಸ್ಕೂಲಿನಲ್ಲಿ. ಪಿಯುಸಿಯನ್ನು ಆಳ್ವಾಸ್ ಪ್ರಿ ಯುನಿವರ್ಸಿಟಿ ಕಾಲೇಜಿನಲ್ಲಿ ಓದಿದೆ. ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿದೆ. ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಕೂಡ ಮಾಡಿದ್ದೇನೆ.
- ನೀವು ನಾಗರಿಕ ಸೇವಾ ಕ್ಷೇತ್ರಕ್ಕೆ ಬಂದಿದ್ದು ಹೇಗೆ? ಅದಕ್ಕೆ ಪ್ರೇರಣೆ ಏನು? ಯುಪಿಎಸ್ಸಿ ಪರೀಕ್ಷೆಗೆ ಹೇಗೆ ತಯಾರಿ ನಡೆಸಿದಿರಿ? ಐಆರ್‌ಎಸ್‌ಗೆ ಆಯ್ಕೆಯಾಗಿದ್ದು ಹೇಗೆ?
ಮಿಶಲ್: ದೇವರ ಆಶೀರ್ವಾದಕ್ಕೆ ಋಣಿಯಾಗಿದ್ದೇನೆೆ. ನಮ್ಮ ತಂದೆಯವರು ಈ ಬಗ್ಗೆ ಆಗಾಗ ಹೇಳುತ್ತಿದ್ದರು. ಇಂಜಿನಿಯರಿಂಗ್ ಆದ ಮೇಲೆ, ಯಾಕೆ ಪ್ರಯತ್ನಿಸಬಾರದು ಎಂದುಕೊಂಡೆ. ಹಾಗೆ ಯುಪಿಎಸ್ಸಿ ಪಯಣ ಶುರುವಾಯಿತು. ತಯಾರಿಯಂತೂ ದೊಡ್ಡ ಮಟ್ಟದ್ದು. ಪರೀಕ್ಷೆ ಇಡೀ ವರ್ಷದ ಪ್ರಕ್ರಿಯೆ. ಪ್ರಿಲಿಮಿನರಿ ಮತ್ತು ವಿಷಯವಾರು ಪರೀಕ್ಷೆ ಬಳಿಕ ಪರ್ಸನಾಲಿಟಿ ಟೆಸ್ಟ್. ಅದೇ ಸಂದರ್ಶನ. ಐಚ್ಛಿಕ ವಿಷಯವನ್ನು ಎಚ್ಚರದಿಂದ ಆರಿಸಿಕೊಳ್ಳಬೇಕು. ನಿಮಗೇನು ಗೊತ್ತಿದೆ ಅದನ್ನು ಬರೆಯುವುದಲ್ಲ. ಏನು ಕೇಳಿದ್ದಾರೆ ಅದನ್ನು ಉತ್ತರಿಸುವುದು ಬಹಳ ಮುಖ್ಯ. ತಾಳ್ಮೆ ಬೇಕು. ಏನಾದೀತೆಂಬ ಭಯ ಇರಬಾರದು.
- ನಿಮ್ಮ ಈ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದವರು ಯಾರು?
ಮಿಶಲ್: ಖಂಡಿತವಾಗಿಯೂ ನನ್ನ ತಂದೆ, ತಾಯಿ. ಎಲ್ಲರೂ ಯಾವಾಗ ನೌಕರಿ ಎಂದು ಕೇಳುವ ಸಂದರ್ಭವಿರುವಾಗ ಅವರು ನನ್ನ ಪ್ರಯತ್ನ ಬೆಂಬಲಿಸುವ ತಾಳ್ಮೆ ತೋರಿಸಿದರು. ನನ್ನ ಅಕ್ಕ ಮತ್ತು ತಮ್ಮನ ಸಹಕಾರವಿತ್ತು. ನನ್ನೆಲ್ಲ ಶಿಕ್ಷಕರದು ಈ ಯಶಸ್ಸಿನಲ್ಲಿ ಮಹತ್ವದ ಪಾತ್ರವಿದೆ. ವಿಶೇಷವಾಗಿ ನನ್ನ ಕನ್ನಡ ಶಿಕ್ಷಕ ಮನೋಜ್ ಸರ್. ಅವರೆಲ್ಲರಿಗೂ ಇದರಲ್ಲಿನ ಶ್ರೇಯಸ್ಸು ಸಲ್ಲಬೇಕು.
- ಗ್ರಾಮೀಣ ಪ್ರದೇಶದಿಂದ ಬಂದಿರುವ ನೀವು ಇಂದು ಈ ದೊಡ್ಡ ಹುದ್ದೆಗೆ ತಲುಪಿದ್ದೀರಿ. ಏನನಿಸುತ್ತದೆ?
ಮಿಶಲ್: ನಾವು ಅಪ್‌ಡೇಟ್ ಆಗಿರುವುದು, ಸವಾಲಾಗಿ ತೆಗೆದುಕೊಳ್ಳುವುದು ಬಹಳ ಮುಖ್ಯ. ಯಾರೂ ಯಾವ ಉದ್ಯೋಗವನ್ನೂ ಮಾಡಲು ಸಾಧ್ಯ. ಗ್ರಾಮೀಣ ಭಾಗದಿಂದ ಬಂದರೂ ಅದರದ್ದೇ ಆದ ಒಂದು ಅನುಭವ ಇರುತ್ತದೆ. ಕಠಿಣ ಪರಿಶ್ರಮ, ತಾಳ್ಮೆ, ಛಲ ಅದೆಲ್ಲ ಗ್ರಾಮೀಣ ಹಿನ್ನೆಲೆಯಿಂದ ಬಂದ ಮಕ್ಕಳಲ್ಲಿ ಯಾವಾಗಲೂ ಇರುತ್ತದೆ. ಯಾವ ಪ್ರತಿಷ್ಠೆಯಿಲ್ಲದೆ, ಕಲಿಕೆಯನ್ನು ಮುಂದುವರಿಸಬೇಕು. ಆಗ ಜಗತ್ತಿನ ಯಾವ ಮೂಲೆಗೂ ಹೋಗಬಹುದು.
- ದಕ್ಷಿಣ ಕನ್ನಡ ಹಾಗೂ ಕರಾವಳಿ ಜಿಲ್ಲೆಗಳ ಯುವಜನ ಇತ್ತೀಚಿನ ವರ್ಷಗಳಲ್ಲಿ ನಾಗರಿಕ ಸೇವಾ ಪರೀಕ್ಷೆಗಳ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ.ಅವರಿಗೆ ನಿಮ್ಮ ಸಲಹೆ ಏನು?
ಮಿಶಲ್: ಇದು ತುಂಬ ಸಂತೋಷದ ವಿಷಯ. ಯಾವುದೇ ಕ್ಷೇತ್ರದಲ್ಲಿಯೂ ಇಲ್ಲಿನ ಪ್ರತಿಭೆಗಳು ಕಡಿಮೆಯಿಲ್ಲ. ಅವರು ತಮ್ಮ ವೃತ್ತಿಯನ್ನು ಜಾಗರೂಕತೆಯಿಂದ ಆರಿಸಿಕೊಳ್ಳಬೇಕು. ಯಾವ ವೃತ್ತಿ ಮಾಡಿದರೆ ಜೀವನದಲ್ಲಿ ಖುಷಿಯಿರುತ್ತದೆ ಎಂಬುದನ್ನು ಗಮನದಲ್ಲಿಡಬೇಕು. ನಾನು ಆಯ್ಕೆ ಮಾಡಿಕೊಳ್ಳುವಾಗಲೂ ಒಂದೆಡೆ ವೃತ್ತಿ ಮತ್ತು ಅದೇ ವೇಳೆ ಜನರಿಗೇನಾದರೂ ಉಪಯುಕ್ತವಾಗುವುದನ್ನು ಮಾಡಬೇಕೆಂಬ ಹಂಬಲವೇ ಇತ್ತು.
- ಡ್ರಗ್ಸ್ ಮಾಫಿಯಾದ ಸುಳಿಗೆ ಮಂಗಳೂರಿನ ಯುವಜನತೆ ಸಿಲುಕುತ್ತಿರುವ ವರದಿಗಳು ಬರುತ್ತಿವೆ. ತಾವು ಮಂಗಳೂರಿನ ಯುವಜನರಿಗೆ ನೀಡುವ ಸಂದೇಶವೇನು?
ಮಿಶಲ್: ಒಂದೇ ಸಾಲಿನ ಸಂದೇಶ. ದಯವಿಟ್ಟು ಅದರಿಂದ ದೂರವಿರಿ. ಈಗಾಗಲೇ ಅದರಲ್ಲಿ ಸಿಲುಕಿದ್ದರೆ ಇದರಿಂದ ಬೇಗ ಹೊರಬನ್ನಿ. ಸುರಕ್ಷಿತವಾಗಿರಿ. ನಿಮ್ಮನ್ನು ನೀವು ರೂಪಿಸಿಕೊಳ್ಳುವಲ್ಲಿ ಶಕ್ತಿಯನ್ನು ತೊಡಗಿಸಿ. ಡ್ರಗ್ಸ್ ನಿಂದ ದುಡ್ಡು ಮಾಡುವ ಜಾಲ ಯುವಜನರನ್ನು ಟಾರ್ಗೆಟ್ ಮಾಡುತ್ತಿದೆ. ನಿಮ್ಮ ಬದುಕನ್ನು ನಾಶ ಮಾಡಿ ಅವರು ತಮ್ಮ ಉದ್ಯಮ ಬೆಳೆಸಿಕೊಳ್ಳುತ್ತಾರೆ. ನೀವು ಎಚ್ಚರದಿಂದಿರಬೇಕು.
ತಂದೆ, ತಾಯಿ ಮಾತು
ಬಾಲ್ಯದಿಂದಲೂ ಅವಳು ಎಲ್ಲ ವಿಷಯಗಳಲ್ಲಿ ಮುಂದೆ. ಯಾವ ಕೆಲಸದಲ್ಲಿಯೂ ಹಿಂಜರಿಕೆ ಇಲ್ಲ. ಕಲಿಕೆಯಲ್ಲಿ ಮುಂದಿದ್ದಳು. ಶಾಲೆಯಲ್ಲಿ ಶಿಕ್ಷಕರಿಗೆಲ್ಲ ಬಹಳ ಅಚ್ಚುಮೆಚ್ಚಿನ ವಿದ್ಯಾರ್ಥಿನಿ. ಮನೆಗೆಲಸದಲ್ಲಿಯೂ ಹಾಗೆಯೇ. ಕೋಚಿಂಗ್ ತೆಗೆದುಕೊಳ್ಳುತ್ತಿರುವಾಗಲೇ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗೆ ಹಾಜ ರಾಗಿ, ಅಸಿಸ್ಟಂಟ್ ಕಮಿಷನರ್ ಆಫ್ ಇನ್‌ಕಂ ಟ್ಯಾಕ್ಸ್ ಗೆ ಸೆಲೆಕ್ಷನ್ ಆಗಿತ್ತು. ಇದಕ್ಕೂ ಮುಂಚೆ ತರಬೇತಿಯಲ್ಲಿ ಹೈದರಾಬಾದಿನಲ್ಲಿದ್ದಾಗ ಬೆಸ್ಟ್ ಟ್ರೈನಿ ಆಫೀಸರ್ ಅವಾರ್ಡ್ ಸಿಕ್ಕಿತ್ತು. ಫರೀದಾಬಾದ್‌ನಲ್ಲಿ ತರಬೇತಿಯಾಗಿ ಹೊರಬರುವಾಗ ವಿತ್ತಸಚಿವರಿಂದ ಗೋಲ್ಡ್ ಮೆಡಲ್ ಸಿಕ್ಕಿತ್ತು. ಅದನ್ನು ಪಡೆದುಕೊಳ್ಳುವಾಗ ನಾವು ಅಲ್ಲಿಗೆ ಹೋಗಿದ್ದೆವು. ಈಗ ಇನ್ನೊಂದು ಪ್ರಶಸ್ತಿ ಅವಳಿಗೆ ಬಂದದ್ದು ನಮಗೆ, ಊರಿನವರಿಗೂ ಬಹಳ ಸಂತೋಷ ತಂದಿದೆ.
-ಲಾಝರಸ್ ಡಿ’ಕೋಸ್ಟ, ಮಿಶಲ್ ಅವರ ತಂದೆ
ತನಗೆ ಪ್ರಶಸ್ತಿ ಬಂದಿದೆ ಎಂದಷ್ಟೇ ಹೇಳಿದ್ದಳು. ಮತ್ತೆ ಅಲ್ಲಿಗೆ ಹೋಗುವಾಗಲೇ ಎಲ್ಲವೂ ತಿಳಿದದ್ದು. ತುಂಬ ರಿಸ್ಕ್ ತೆಗೆದುಕೊಂಡು ಮಾಡಿದ್ದಾಳೆ. ತನ್ನ ಜೀವದ ಹಂಗು ತೊರೆದು ಮಾಡಿದಳಲ್ಲ ಎಂದು ಖುಷಿಯಾಯಿತು. ಕಷ್ಟಪಟ್ಟು ಕೆಲಸ ಮಾಡುತ್ತಾಳೆ. ಹಿಂದೆ ನೋಡುವ ಮಾತೇ ಇಲ್ಲ. ಮುನ್ನುಗ್ಗುವುದೇ ಅವಳ ಅಭ್ಯಾಸ. ಯಾವಾಗಲೂ ಹಾಗೆಯೇ. ಓದು, ಶಾಲೆಯ ಕೆಲಸ ಮುಗಿಸಿಕೊ ಎಂದು ಹೇಳುವ ಅಗತ್ಯವೇ ಇರಲಿಲ್ಲ. ಅವಳ ಕೆಲಸ ನಿಷ್ಠೆಯಿಂದ ಮಾಡಿದ್ದಾಳೆ. ಮಕ್ಕಳು ಏನು ಮಾಡಲು ಬಯಸುತ್ತಾರೊ ಅದನ್ನು ಮಾಡಲು ನಾವು ಉತ್ತೇಜನ ಕೊಡಬೇಕು.
-ನ್ಯಾನ್ಸಿ ಡಿ’ಕೋಸ್ಟ, ಮಿಶಲ್ ಅವರ ತಾಯಿ