ಗಮಕಿ, ಹಿರಿಯ ಗಾಯಕ ಚಂದ್ರಶೇಖರ್ ಕೆದ್ಲಾಯ ನಿಧನ

ಬ್ರಹ್ಮಾವರ, ಜ.24: ಕವಿ ಗೋಪಾಲಕೃಷ್ಣ ಅಡಿಗರ ‘ಕಟ್ಟುವೆವು ನಾವು ಹೊಸ ನಾಡೊಂದನ್ನು... ರಸದ ಬೀಡೊಂದನ್ನು..’ ಕವನವನ್ನು ತಮ್ಮ ಕಂಚಿನ ಕಂಠದ ಗಾಯನದ ಮೂಲಕ ಜನಪ್ರಿಯಗೊಳಿಸಿದ ಸುಗಮ ಸಂಗೀತಗಾರ, ಹಿರಿಯ ಗಮಕಿ ಹಾಗೂ ಆಕಾಶವಾಣಿ ಕಲಾವಿದ ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ (72) ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಬ್ರಹ್ಮಾವರ ದೇವಸ್ಥಾನದ ಪಕ್ಕದ ತಮ್ಮ ಸ್ವಗೃಹದಲ್ಲಿ ಹೃದಯಘಾತದಿಂದ ನಿಧನರಾದರು.
ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ ಅವರದು ಬಹುಮುಖ ಪ್ರತಿಭೆ. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ, ನಾಡಿನ ಶ್ರೇಷ್ಠ ಗಮಕಿಗಳಲ್ಲೊಬ್ಬರಾಗಿ, ಸುಗಮ ಸಂಗೀತ ಗಾಯಕನಾಗಿ, ಕಲಾ ತರಬೇತುದಾರರಾಗಿ, ನೃತ್ಯ ರೂಪಕ- ನಾಟಕಗಳ ಸಂಗೀತ ಸಂಯೋಜಕರಾಗಿ, ರಂಗಕರ್ಮಿಯಾಗಿ ಅವರು ಬಹುವಿಧದಲ್ಲಿ ತಮ್ಮ ಪ್ರತಿಭೆಯನ್ನು ಬೆಳಗಿಸಿದ್ದಾರೆ.
ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿರುವ ಚಂದ್ರಶೇಖರ ಕೆದ್ಲಾಯರ ಅಂತಿಮ ಸಂಸ್ಕಾರ ಬುಧವಾರ ನಡೆಯಲಿದ್ದು, ಇದಕ್ಕೆ ಮುನ್ನ ಬೆಳಗ್ಗೆ 9ರಿಂದ 11ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶಿರಿಯಾರ ಸಮೀಪದ ಹಾರ್ಯಾಡಿ ಎಂಬ ಕುಗ್ರಾಮ ಅವರ ಹುಟ್ಟೂರು. 1950ರ ಎಪ್ರಿಲ್‌ನಲ್ಲಿ ಗಣಪಯ್ಯ ಕೆದ್ಲಾಯ ಹಾಗೂ ಕಮಲಮ್ಮ ದಂಪತಿ ಪುತ್ರನಾಗಿ ಜನಿಸಿದ ಚಂದ್ರಶೇಖರ ಕೆದ್ಲಾಯರ ಆರಂಭಿಕ ವಿದ್ಯಾಬ್ಯಾಸ ನಡೆದುದು ಹಾರ್ಯಾಡಿಯಲ್ಲೇ. ಹಿರಿಯ ಪ್ರಾಥಮಿಕ ಶಾಲೆಗೆ ಹೋದುದು ಸಾಯಿಬ್ರಕಟ್ಟೆಯಲ್ಲಿ. ಕೋಟೇಶ್ವರ ಹಾಗೂ ಕುಂದಾಪುರದಲ್ಲಿ ಹೈಸ್ಕೂಲ್ ಹಾಗೂ ಪಿಯುಸಿ ವಿದ್ಯಾಭ್ಯಾಸ ಪಡೆದರು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ಇವರು, ಉಡುಪಿಯ ಡಾ.ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಪದವಿ ಪಡೆದರು.
ಮಾಬುಕಳದ ಚೇತನ ಪ್ರೌಢ ಶಾಲೆ ಹಾಗೂ ಮಂಗಳೂರಿನ ಕೆನರಾ ಪ್ರೌಢ ಶಾಲೆಗಳಲ್ಲಿ ತಲಾ ಒಂದು ವರ್ಷ ಶಿಕ್ಷಕರಾಗಿ ದುಡಿದ ಬಳಿಕ 1976ರಲ್ಲಿ ಬ್ರಹ್ಮಾವರದ ನಿರ್ಮಲಾ ಹೈಸ್ಕೂಲ್‌ನಲ್ಲಿ ಅಧ್ಯಾಪಕರಾಗಿ ಸೇರಿದ ಅವರು 2011ರಲ್ಲಿ ನಿವೃತ್ತಿಯವರವೆಗೆ 35ವರ್ಷ ಅಲ್ಲೇ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.1992-93ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕೆದ್ಲಾಯರಿಗೆ 2008ರಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತ್ತು.
ಶಾಲಾ ದಿನಗಳಿಂದಲೂ ಉತ್ತಮ ಗಾಯಕರಾಗಿದ್ದ ಇವರು, ವಿವಿಧ ರೂಪದಲ್ಲಿ, ವಿವಿಧ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಪೂರ್ಣಪ್ರಜ್ಞದಲ್ಲಿ ಪ್ರಾಂಶುಪಾಲರಾಗಿದ್ದ ಕವಿ ಎಂ.ಗೋಪಾಲಕೃಷ್ಣ ಅಡಿಗರ ಪ್ರೇರಣೆ ಹಾಗೂ ಪ್ರೋತ್ಸಾಹದಿಂದ ಅವರ ನವ್ಯ ಕವನಗಳನ್ನೂ ತಮ್ಮ ಕಂಚಿನ ಕಂಠದಿಂದ ನಾಡಿನಾದ್ಯಂತ ಜನಪ್ರಿಯಗೊಳಿಸಿದರು.
ಚಂದ್ರಶೇಖರ ಕೆದ್ಲಾಯ ಅವರು ಅಡಿಗರ ‘ಅಮೃತವಾಹಿನಿಯೊಂದು..’, ‘ಎಂದು ಕೊನೆ... ಎಂದು ಕೊನೆ...’, ‘ಕೆಸುವಿನೆಲೆ ಮೇಲೆ ಮಳೆಯ ಹನಿಯಂತೆ..’, ‘ಯಾರವರು’ ಕವನವನ್ನು ಜನಮಾನಸದಲ್ಲಿ ನೆಲೆಸುವಂತೆ ಹಾಡಿದ್ದರು. ಇದರೊಂದಿಗೆ ಅವರು ಉತ್ತಮ ಗಮಕಿ ಸಹ. ನೀಲಾವರ ಲಕ್ಷ್ಮೀನಾರಾಯಣ ರಾವ್, ಮಟಪಾಡಿ ರಾಜಗೋಪಾಲಾಚಾರ್ಯ ಹಾಗೂ ಮೈಸೂರಿನ ರಾಘವೇಂದ್ರ ರಾವ್ ಇವರಿಗೆ ಗಮಕಕ್ಕೆ ಗುರುಗಳಾಗಿದ್ದರು. ಚಂದ್ರಶೇಖರ ಕೆದ್ಲಾಯ ಅವರು ಅಡಿಗರ ‘ಅಮೃತವಾಹಿನಿಯೊಂದು..’, ‘ಎಂದು ಕೊನೆ... ಎಂದು ಕೊನೆ...’, ‘ಕೆಸುವಿನೆಲೆ ಮೇಲೆ ಮಳೆಯ ಹನಿಯಂತೆ..’, ‘ಯಾರವರು’ ಕವನವನ್ನು ಜನಮಾನಸದಲ್ಲಿ ನೆಲೆಸುವಂತೆ ಹಾಡಿದ್ದರು.
ಇದರೊಂದಿಗೆ ಅವರು ಉತ್ತಮ ಗಮಕಿ ಸಹ. ನೀಲಾವರ ಲಕ್ಷ್ಮೀನಾರಾಯಣ ರಾವ್, ಮಟಪಾಡಿ ರಾಜಗೋಪಾಲಾಚಾರ್ಯ ಹಾಗೂ ಮೈಸೂರಿನ ರಾಘವೇಂದ್ರ ರಾವ್ ಇವರಿಗೆ ಗಮಕಕ್ಕೆ ಗುರುಗಳಾಗಿದ್ದರು. ಅಲ್ಲದೇ ಗುರು ಅಡಿಗರು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರ ಕವನಗಳನ್ನು ಹಾಡುತಿದ್ದರು. ಇವರು ಹಾಡಿದ ಭಾವಗೀತೆಗಳು, ಭಕ್ತಿಗೀತೆಗಳು, ಜಿನಸ್ತುತಿ, ಬಪ್ಪನಾಡು ಸುಪ್ರಭಾತ ಮುಂತಾದವು ಕ್ಯಾಸೆಟ್ ರೂಪದಲ್ಲಿ ಹೊರಬಂದಿವೆ. ಕೆದ್ಲಾಯರ ಸುಮಧುರ ಕಂಠದಲ್ಲಿ ಕುಮಾರವ್ಯಾಸ ಭಾರತ ಕಾವ್ಯವಾಚನ ಡಾ.ಆರ್.ಗಣೇಶರ ವ್ಯಾಖ್ಯಾನದೊಂದಿಗೆ ಧ್ವನಿಸುರುಳಿಯಾಗಿ ಬಂದಿದೆ.
ಕೆದ್ಲಾಯರು ಬ್ರಹ್ಮಾವರದ ಅಜಪುರ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಕ್ರಿಯ ಕಾರ್ಯಕರ್ತರಾಗಿದ್ದವರು. ಇದರೊಂದಿಗೆ ರಂಗಭೂಮಿ ಉಡುಪಿ, ರಥಬೀದಿ ಗೆಳೆಯರು ಸೇರಿದಂತೆ ನಾಡಿನ ಹತ್ತಾರು ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ತರಬೇತುದಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳಿಗೆ ತಮ್ಮ ಜ್ಞಾನ ಸಂಪತ್ತನ್ನು ಧಾರೆ ಎರೆದಿದ್ದಾರೆ.







