ರಾಹುಲ್ ಗಾಂಧಿ ಜೊತೆ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡ ನಟಿ-ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್

ಜಮ್ಮು: ಇಂದು ಬೆಳಗ್ಗೆ ಜಮ್ಮುವಿನ ಗ್ಯಾರಿಸನ್ ಟೌನ್ ನಗ್ರೋಟಾದಿಂದ ಪುನರಾರಂಭಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯಲ್ಲಿ ನಟಿ-ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಅವರು ಪಾಲ್ಗೊಂಡರು.
ಬಿಗಿ ಭದ್ರತೆಯ ನಡುವೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ಸೇನಾ ಗ್ಯಾರಿಸನ್ ಬಳಿಯಿಂದ ಪಾದಯಾತ್ರೆ ಆರಂಭವಾದ ಸ್ವಲ್ಪ ಸಮಯದ ನಂತರ ಮಾತೋಂಡ್ಕರ್ ಅವರು ರಾಹುಲ್ ಗಾಂಧಿಯನ್ನು ಸೇರಿಕೊಂಡರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಅವರನ್ನು ಸ್ವಾಗತಿಸಲು ಮಾರ್ಗದುದ್ದಕ್ಕೂ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದರು.
48 ವರ್ಷದ ಊರ್ಮಿಳಾ ಮಾತೋಂಡ್ಕರ್ ಅವರು ಆರು ತಿಂಗಳ ಕಾಲ ಕಾಂಗ್ರೆಸ್ ನಲ್ಲಿದ್ದರು. ನಂತರ 2019 ರ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು ಹಾಗೂ 2020 ರಲ್ಲಿ ಶಿವಸೇನೆಗೆ ಸೇರಿದ್ದರು.
ಖ್ಯಾತ ಲೇಖಕ ಪೆರುಮಾಳ್ ಮುರುಗನ್ ಹಾಗೂ ಜಮ್ಮು-ಕಾಶ್ಮೀರದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಕಾರ್ ರಸೂಲ್ ವಾನಿ, ಮಾಜಿ ಅಧ್ಯಕ್ಷ ಜಿಎ ಮಿರ್ ಹಾಗೂ ಮಾಜಿ ಸಚಿವ ಅಬ್ದುಲ್ ಹಮೀದ್ ಕರ್ರಾ ನೂರಾರು ಜನರೊಂದಿಗೆ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಸಾಗಿದರು.







