"ಕೊಲಿಜಿಯಂನಲ್ಲಿ ಸರಕಾರದ ಪ್ರತಿನಿಧಿ ನೇಮಕ" ನ್ಯಾಯಾಂಗ ವ್ಯವಸ್ಥೆಯನ್ನು ಸ್ವಾಧೀನ ಪಡೆಯುವ ಉದ್ದೇಶ: ಸಂತೋಷ್ ಹೆಗ್ಡೆ

ಮೈಸೂರು: ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ನೇಮಕಕ್ಕೆ ನನ್ನ ಸಂಪೂರ್ಣ ವಿರೋಧವಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ಮೈಸೂರು ಜಿಲ್ಲಾ ಪತ್ರಕರ್ತ ಸಂಘ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕೊಲಿಜಿಯಂ ನಲ್ಲಿ ಸರ್ಕಾರದ ಪ್ರತಿನಿಧಿ ಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತಿರುವುದು ನ್ಯಾಯಾಂಗವನ್ನು ತನ್ನ ಸ್ವಾಧೀನಕ್ಕೆ ಪಡೆಯುವ ಉದ್ದೇಶ. ಇದು ಯಾವುದೇ ಕಾರಣಕ್ಕೂ ಆಗಬಾರದು ಎಂದು ಹೇಳಿದರು.
ಒಬ್ಬ ನ್ಯಾಯಾಧೀಶರನ್ನು ನೇಮಕ ಮಾಡುವ ಅಧಿಕಾರ ಕೊಲಿಜಿಯಂಗೆ ಬಿಟ್ಟರೆ ಹೊರಗಿನವರಿಗೆ ಗೊತ್ತಿರುವುದಿಲ್ಲ. ನ್ಯಾಯಾಧೀಶರಾಗಿ ನೇಮಕವಾಗುವ ವಕೀಲರು ನ್ಯಾಯಾಲಯದಲ್ಲಿ ಯಾವ ರೀತಿ ಪ್ರಕರಣಗಳನ್ನು ಮಾಡಿದ್ದಾರೆ. ಇವರ ಅನುಭವ ಏನು? ಮತ್ತು ಇವರು ನ್ಯಾಧೀಶರ ಹುದ್ದೆಗೆ ಅರ್ಹರೆ ಎಂಬುದು ಕೊಲಿಜಿಯಂ ಗೆ ಮಾತ್ರ ಗೊತ್ತಿರುತ್ತದೆ. ಹಾಗಾಗಿ ಸರ್ಕಾರದ ಪ್ರತಿನಿಧಿಗಳ ಹಸ್ತಕ್ಷೇಪ ಸರಿಯಲ್ಲ ಎಂದು ಅವರು ಅಭಿಪ್ರಾಯಿಸಿದರು.
ಒಂದು ಸಚಿವ ಸಂಪುಟಕ್ಕೆ ಯಾರನ್ನು ನೇಮಕ ಮಾಡಿಕೊಳ್ಳಬೇಕು ಬೇಡ ಎಂಬ ಅಧಿಕಾರ ಮುಖ್ಯಮಂತ್ರಿಗೆ ಇರುತ್ತದೆ. ಅದೇ ರೀತಿ ಯಾರನ್ನು ಹೈಕೋಟ್೯ ಸುಪ್ರೀಂಕೋಟ್೯ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳಬೇಕು ಎಂಬುದು ಕೊಲಿಜಿಯಂ ವಿವೇಚನೆಗೆ ಬಿಟ್ಟಿದ್ದು, ಕೊಲಿಜಿಯಂ ನಲ್ಲಿ ಮುಖ್ಯ ನ್ಯಾಯಾಧೀಶರ ತೀರ್ಮಾನವೇ ಅಂತಿಮವಾಗುವುದಿಲ್ಲ. ಅಲ್ಲಿಯೂ ಸಹ ಮೂರು ಪೀಠ ಐವರ ಪೀಠ ಎಂಬುದಿರುತ್ತದೆ. ಅವರ ಶಿಫಾರಸಿನ ಮೇಲೆ ನೇಮಕ ಮಾಡುವುದು. ಹಾಗಾಗಿ ಸರ್ಕಾರದ ಮಧ್ಯಪ್ರವೇಶ ಇರಬಾರದು ಎಂದು ಅವರು ಹೇಳಿದರು.
ಶಾಸಕಾಂಗ ಈಗಾಗಲೇ ಕಾರ್ಯಾಂಗದ ಆಡಳಿತವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಅದೇ ರೀತಿ ನ್ಯಾಯಾಂಗವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂಬ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಈ ಹಿಂದೆ ಇದ್ದಂತಹ ಸರ್ಕಾರಗಳಲ್ಲಿ ಇಂತಹ ವ್ಯವಸ್ಥೆ ಇರಲಿಲ್ಲ. ಆದರೆ ಈಗ ಕೇಂದ್ರ ಸರ್ಕಾರ ಮಧ್ಯ. ಪ್ರವೇಶ ಮಾಡಲು ಹೊರಟಿರುವುದು ಅತ್ಯಂತ ದುರಂತ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಒಂದು ಸರ್ಕಾರಕ್ಕೆ ಸ್ಪಷ್ಟ ಬಹುಮತ ಇದೆ ಎಂದ ಕಾರಣಕ್ಕೆ ತನಗಿಷ್ಟ ಬಂದಹಾಗೆ ನಡೆದುಕೊಳ್ಳಲು ಸಾಧ್ಯವಿಲ್ಲ. ಸಂಸತ್ ನಲ್ಲಿ ತಾನು ತೆಗೆದುಕೊಂಡ ನಿರ್ಣವನ್ನು ಯಾರೂ ಪ್ರಶ್ನಿಸಬಾರದು ಎಂದರೆ ಏನರ್ಥ? ಇಂದು ಶಾಸಕಾಂಗ, ಕಾರ್ಯಾಂಗಗಳು ಭ್ರಷ್ಟಾಚಾರದಿಂದ ಕೂಡಿದೆ. ನ್ಯಾಯಾಂಗದಲ್ಲಿ ಎಲ್ಲಾ ಸರಿ ಇದೆ ಎಂದು ಹೇಳುವುದಿಲ್ಲ. ಆದರೆ ಈ ಎರಡು ರಂಗಗಳಿಗಿಂತ ಕಡಿಮೆ ಭ್ರಷ್ಟಾಚಾರ ನ್ಯಾಯಾಂಗ ವ್ಯವಸ್ಥೆಯಲ್ಲಿದೆ. ಅದನ್ನು ತನ್ನ ಹಿಡಿತಕ್ಕೆ ಕೇಂದ್ರ ಸರ್ಕಾರ ಪಡೆಯಬೇಕು ಎಂದರೆ ಪ್ರಜೆಗಳು ಎಲ್ಲಿಗೆ ಹೋಗಬೇಕು. ಇದು ಸಂವಿಧಾನ ವಿರೋಧಿ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಾಧೀಶರನ್ನು ವೈಯಕ್ತಿಕ ಕಾರಣ ಕೊಟ್ಟು ಕೇಂದ್ರ ಸರ್ಕಾರ ನಿರಾಕರಿಸಿರುವ ಕ್ರಮ ಸರಿಯಲ್ಲ. ಒಬ್ಬ ಮನುಷ್ಯ ಎಂದ ಮೇಲೆ ಅವನಿಗೆ ಆದ ವೈಯಕ್ತಿಕ ಜೀವನಗಳಿರುತ್ತದೆ. ಅದನ್ನು ಆಡಳಿತ ದೃಷ್ಟಿಯಲ್ಲಿ ನೋಡಬಾರದು ಎಂದು ಹೇಳಿದರು.
ಬಿಲ್ಕಿಸ್ ಬಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಟ್ಟಿರುವ ಕ್ರಮ ಸರಿಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಇದು ನ್ಯಾಯಾಧೀಶರ ವಿವೇಚನೆಗೆ ಬಿಟ್ಟಿದ್ದು. ಈ ಜಡ್ಜ್ ಮೆಂಟ್ ನಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಇಂತಹ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಕೆಲವರು ಗಲ್ಲು ಶಿಕ್ಷೆಯನ್ನು ನೀಡುತ್ತಾರೆ. ಇನ್ನು ಕೆಲವು ನ್ಯಾಯಾಧೀಶರು ಜೀವಾವಧಿ ಶಿಕ್ಷೆಯನ್ನು ನೀಡುತ್ತಾರೆ. ನ್ಯಾಯಾಯಲಗಳ ನ್ಯೂನತೆಯಿಂದ ಇಂತಹ ತೀರ್ಮಾನ ಕೈಗೊಂಡಿರಬಹುದು ಎಂದು ಹೇಳಿದರು.
ಲೊಕಯುಕ್ತಕ್ಕೆ ಈಗಲೂ ಪರಮಾಧಿಕಾರ ಇದೆ. ಅದರ ಜವಾಬ್ದಾರಿ ವಹಿಸಿಕೊಳ್ಳುವವರು ತಮ್ಮ ಅಧಿಕಾರವನ್ನು ಚಲಾಯಿಸಬೇಕು. ಸರ್ಕಾರ ತನ್ನ ಮಾತು ಕೇಳುವ ಅಧಿಕಾರಿಗಳನ್ನು ನೇಮಕ ಮಾಡಿದರೆ ನ್ಯಾಯಾಲಯಕ್ಕೆ ಹೋಗಿ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು. ಮತ್ತು ಈ ಹುದ್ದೆಯಲ್ಲಿರುವವರು ಭ್ರಷ್ಟಾಚಾರದಿಂದ ದೂರ ಇರುವವರು ಆಗಬೇಕು ಎಂದರು.
ಇಂದು ಮನುಷ್ಯನಿಗೆ ದುರಾಸೆ ಹೆಚ್ಚಾಗಿ ಭ್ರಷ್ಟಚಾರ ತಾಂಡವವಾಡುತ್ತಿದೆ. ಜೈಲಿಗೆ ಹೋಗಿ ಬಂದವರನ್ನು ಹಾರ ಹಾಕಿ ಪಟಾಕಿ ಹೊಡೆದು ಬರಮಾಡಿಕೊಳ್ಳಲಾಗುತ್ತಿದೆ. ಈ ವ್ಯವಸ್ಥೆಗೆ ಯಾರು ಕಾರಣ ಎಂದರೆ ಸಮಾಜ. ಹಾಗಾಗಿ ಈ ಸಮಾಜವೇ ಮುಂದೊಂದು ದಿನ ಧಂಗೆ ಹೇಳುವ ಕಾಲ ಬರಬಹುದು ಎಂದು ಹೇಳಿದರು.
ಸಂವಾದದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನಕಾರ್ಯದರ್ಶಿ ಸುಬ್ರಮಣ್ಯ, ಜಿಲ್ಲಾ ಉಪಾಧ್ಯಕ್ಷ ಧರ್ಮಾಪುರ ನಾರಾಯಣ, ನಗರ ಕಾರ್ಯದರ್ಶಿ ರಂಗಸ್ವಾಮಿ ಉಪಸ್ಥಿತರಿದ್ದರು.






.jpeg)


