ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ ಆಚರಣೆ: ಮಾಸ್ಕ್ ಕಡ್ಡಾಯ

ಬೆಂಗಳೂರು, ಜ.23: ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಪಾಲ್ಗೊಳ್ಳುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಈ ಬಾರಿಯ ಜ.26ರಂದು 74ನೇ ಗಣರಾಜ್ಯೋತ್ಸವ ಆಚರಣೆಗೆ ಬೆಂಗಳೂರು ನಗರ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಅದರಲ್ಲೂ ಮೈದಾನದಲ್ಲಿ ಎಂಟರಿಂದ ಹತ್ತು ಸಾವಿರ ಮಂದಿ ಜಮಾವಣೆಗೊಳ್ಳಲಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮಾಸ್ಕ್ ಹಾಕೋದು ಕಡ್ಡಾಯ. ಈ ಕುರಿತು ಭದ್ರತಾ ಸಿಬ್ಬಂದಿಯೂ ಹೆಚ್ಚಿನ ನಿಗಾ ಇಡಲಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇನ್ನೂ, ಬೆಂಗಳೂರು ಸೇರಿ ರಾಜ್ಯದಲ್ಲಿ ಕಳೆದ 15 ದಿನಗಳು ವರದಿಯಾಗಿರುವ ಕೋವಿಡ್ ಹೊಸ ಪ್ರಕರಣಗಳನ್ನು ವಿಶ್ಲೇಷಿಸಿರುವ ಕೋವಿಡ್ ತಾಂತ್ರಿಕ ಸಲಹಾ ಸಮಿತಿ, 'ಕೊರೊನಾ ರೂಪಾಂತರಿ ಹೊಸ ತಳಿ ಪತ್ತೆಯಾಗಿಲ್ಲ. ಹೀಗಾಗಿ, ಸದ್ಯಕ್ಕೆ ಕೋವಿಡ್ ಆತಂಕವಿಲ್ಲ ಎಂದು ತಿಳಿಸಿದೆ.
ವಾರದಿಂದ ಸೋಂಕು ದೃಢ ಪ್ರಮಾಣ ಶೇ 0.11ರಷ್ಟಿದೆ. ಮರಣ ಪ್ರಮಾಣ ದರ ಶೂನ್ಯಕ್ಕೆ ಇಳಿಕೆಯಾಗಿದೆ. ಸದ್ಯ 146 ಸಕ್ರಿಯ ಪ್ರಕರಣಗಳಿದ್ದು, 8 ಮಂದಿ ಮಾತ್ರ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗಿದ್ದಾರೆ.
15 ದಿನಗಳ ಕೋವಿಡ್ ಪ್ರಕರಣಗಳನ್ನು ವಿಶ್ಲೇಷಣೆ ಮಾಡಲಾಗಿದ್ದು, ರಾಜ್ಯದಲ್ಲಿ ಪರಿಸ್ಥಿತಿ ಸಾಕಷ್ಟು ಉತ್ತಮವಾಗಿದೆ. ಕೋವಿಡ್‌ಗೆ ಜ. 17ರಂದು ಕೊಪ್ಪಳದಲ್ಲಿ 65 ವರ್ಷದ ಮಹಿಳೆಯೊಬ್ಬರು ಮಾತ್ರ ಮೃತಪಟ್ಟಿದ್ದಾರೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.







