ಅಂತರ್ಜಾತಿ ವಿವಾಹವಾಗಿದ್ದ ಕುಟುಂಬಕ್ಕೆ 23 ವರ್ಷಗಳಿಂದ ಸಾಮಾಜಿಕ ಬಹಿಷ್ಕಾರ: ಜಾತಿ ಪಂಚರ ವಿರುದ್ಧ ಪ್ರಕರಣ ದಾಖಲು

ಪುಣೆ: ಅಂತರ್ಜಾತಿ ವಿವಾಹವಾಗಿದ್ದಾನೆ ಎಂಬ ಕಾರಣಕ್ಕೆ ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಓರ್ವ ವ್ಯಕ್ತಿ ಮತ್ತು ಆತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ವಿಧಿಸಿದ್ದ ಆರೋಪದಡಿ ಜಾತಿ ಪಂಚರು ಸೇರಿದಂತೆ ಒಟ್ಟು ಒಂಬತ್ತು ಮಂದಿಯ ವಿರುದ್ಧ ಪುಣೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು indianexpress.com ವರದಿ ಮಾಡಿದೆ.
1998ರಲ್ಲಿ ಅನ್ಯ ಜಾತಿಯ ಮಹಿಳೆಯನ್ನು ವಿವಾಹವಾಗಿದ್ದ 46 ವರ್ಷದ ಪ್ರಕಾಶ್ ಡಾಂಗಿ ಎಂಬ ಫುರ್ಸುಂಗಿ ನಿವಾಸಿಯ ದೂರನ್ನು ಆಧರಿಸಿ ಬಿಬ್ವೆವಾಂಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದೆ. ಸಾಮಾಜಿಕ ಬಹಿಷ್ಕಾರ(ತಡೆ, ನಿಷೇಧ ಹಾಗೂ ಪರಿಹಾರ)ದಿಂದ ಮಹಾರಾಷ್ಟ್ರ ಜನರ ರಕ್ಷಣೆ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 34ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಾಥಮಿಕ ಮಾಹಿತಿ ವರದಿಯ ಪ್ರಕಾರ, ನನ್ನ ಜಾತಿಯ ಪಂಚರು ನನ್ನ ವಿರುದ್ಧ 'ಒಲಾಬಾ' (ಸಾಮಾಜಿಕ ಬಹಿಷ್ಕಾರ) ವಿಧಿಸಿದ್ದಾರೆ. ಕಳೆದ 23 ವರ್ಷಗಳಿಂದ ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಹಬ್ಬಗಳು, ಸಭೆಗಳು ಹಾಗೂ ನನ್ನ ಸಮುದಾಯದ ಜನರಿಗಾಗಿ ಏರ್ಪಡಿಸುವ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿಲ್ಲ ಎಂದು ಡಾಂಗಿ ಆರೋಪಿಸಿದ್ದಾರೆ.
ನನ್ನ ವಿರುದ್ಧದ ಸಾಮಾಜಿಕ ಬಹಿಷ್ಕಾರವನ್ನು ಹಿಂಪಡೆಯುವಂತೆ ನಾನು ನನ್ನ ಜಾತಿ ಪಂಚರಿಗೆ ಹಲವಾರು ಬಾರಿ ಮನವಿ ಮಾಡಿದ್ದೆ. ಆದರೆ, ಅದನ್ನು ಪ್ರತಿ ಬಾರಿಯೂ ನಿರಾಕರಿಸಲಾಯಿತು ಮತ್ತು ನನ್ನನ್ನು ಅವಮಾನಿಸಲಾಯಿತು. ಸಾಮಾಜಿಕ ಬಹಿಷ್ಕಾರ ಹಿಂಪಡೆಯುವಂತೆ ರಾಜಸ್ಥಾನದಲ್ಲಿನ ನನ್ನ ಸಮುದಾಯದ ನಾಯಕರನ್ನೂ ಸಂಪರ್ಕಿಸಿದೆ. ಆದರೆ, ಅವರು ಸಾಮಾಜಿಕ ಬಹಿಷ್ಕಾರವನ್ನು ಹಿಂಪಡೆಯಲು ರೂ. 1.25 ಲಕ್ಷ ದಂಡವನ್ನು ಸಮುದಾಯಕ್ಕೆ ಮರಳಿಸಬೇಕು ಎಂದು ಸೂಚಿಸಿದ್ದರು ಎಂದೂ ಡಾಂಗಿ ಆರೋಪಿಸಿದ್ದಾರೆ.
ನಂತರ, ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನಾ ಸಮಿತಿಯ ಹೋರಾಟಗಾರರಾದ ನಂದಿನಿ ಜಾಧವ್ ಮತ್ತು ಮಿಲಿಂದ್ ದೇಶ್‌ಮುಖ್ ಅವರ ನೆರವು ಪಡೆದಿರುವ ಡಾಂಗಿ, ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಸಮಿತಿಯು ಸಾಮಾಜಿಕ ಬಹಿಷ್ಕಾರದಂಥ ಘಟನೆಗಳ ವಿರುದ್ಧ ಹೋರಾಡುತ್ತಿದೆ.







