ನಾವು ಜೆಡಿಎಸ್ ಪಕ್ಷದ ಮನೆ ಬಾಗಿಲಿಗೆ ಹೋಗಿದ್ದು ಎಚ್ ಡಿಕೆ ದಕ್ಷ ಆಡಳಿತಗಾರರು ಎಂದಲ್ಲ: ಸಿದ್ದರಾಮಯ್ಯ

ತುಮಕೂರು.ಜ.24: 'ಕಳೆದ 2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಜನತೆ ಯಾರಿಗೂ ಬಹುಮತ ನೀಡಲಿಲ್ಲ. ಆದರೆ ಶೇ38ರಷ್ಟು ಜನ ನಮಗೆ ಮತ ನೀಡಿದರೆ, ಶೇ34ರಷ್ಟು ಮತ ಬಿಜೆಪಿಗೆ ಬಿದ್ದಿದೆ. ವಾಮಮಾರ್ಗದಿಂದ ಅಧಿಕಾರ ಹಿಡಿದಿದೆ. ಜೆಡಿಎಸ್ ಪಕ್ಷದ ಮನೆ ಬಾಗಿಲಿಗೆ ಹೋಗಿದ್ದು, ಕೋಮವಾದಿ ಬಿಜೆಪಿಗೆ ಅಧಿಕಾರ ಸಿಗಬಾರದು ಎಂಬ ಕಾರಣಕ್ಕೆ ಹೊರತು. ನೀವು ಪರೋಪಕಾರಿಗಳು, ದಕ್ಷ ಆಡಳಿತಗಾರರು ಎಂದಲ್ಲ. ಇದನ್ನು ಹೆಚ್.ಡಿ.ಕೆ.ಮರೆಯಬಾರದು' ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಗಾಜಿನಮನೆಯುಲ್ಲಿ ಜಿಲ್ಲಾ ಕಾಂಗ್ರೆಸ್‍ವತಿಯಿಂದ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಬಸ್ ಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು 'ಅಧಿಕಾರದ ಆಸೆಗೆ ಅಂದು ಧರ್ಮಸಿಂಗ್ ಅವರ ಸ್ನೇಹ ಧಿಕ್ಕರಿಸಿ, ಬಿಜೆಪಿ ಜೊತೆ ಕೈಜೋಡಿಸಿದ್ದು ನಿಮ್ಮದು ಜಾತ್ಯಾತೀತ ಪಕ್ಷವೇ?' ಎಂದು ಪ್ರಶ್ನಿಸಿದರು.
'ನಾನು ಅಧಿಕಾರದಿಂದ ಕೆಳಗೆ ಇಳಿಯಲು ಸಿದ್ದರಾಮಯ್ಯ ಕಾರಣ ಎನ್ನುತ್ತೀರಿ. ಹಾಗಾದರೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ನಿಮ್ಮ ಸಾಧನೆ ಎನು ? ಸದಾ ಬಿಜೆಪಿಯ ಸಾಂಗತ್ಯ ಬಯಸಿದರೆ ನಿಮ್ಮ ಬಿಜೆಪಿ ಬಿ.ಟೀಮ್ ಅನ್ನದೆ ಇನ್ಯಾವ ಹೆಸರಿನಿಂದ ಕರೆಯಲು ಸಾಧ್ಯ.ಜೆಡಿಎಸ್ ಪಕ್ಷದ್ದು,ನಾಟಕೀಯ ಜಾತ್ಯಾತೀತ.ಇದಕ್ಕೆ ರಾಜ್ಯದ ಅಲ್ಪಸಂಖ್ಯಾತರು ಮಾರು ಹೋಗಬೇಡಿ, ನರೇಂದ್ರಮೋದಿಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ ಎಂಬ ರೀತಿಯಲ್ಲಿಯೇ ಜೆಡಿಎಸ್‍ದ್ದು ಮುಸ್ಲಿಮರ ಮೇಲಿನ ಪ್ರೀತಿ ನಾಟಕೀಯ' ಎಂದರು.
'ತುಮಕೂರು ಜಿಲ್ಲೆ ಡಾ.ನಂಜುಂಡಪ್ಪ ವರದಿ ಪ್ರಕಾರ ಜಿಲ್ಲೆಯ 10 ತಾಲೂಕುಗಳಲ್ಲಿ 8 ತಾಲೂಕುಗಳು ಅತ್ಯಂತ ಹಿಂದುಳಿದ ತಾಲೂಕುಗಳಾಗಿವೆ. ನಾವು ಅಧಿಕಾರಕ್ಕೆ ಬಂದ 2013ರಲ್ಲಿ ತುಮಕೂರಿನ ಜನರ ತಲಾ ಅದಾಯ 43,687 ರೂ ಇತ್ತು.ನಾವು ಅಧಿಕಾರದಿಂದ ಇಳಿಯುವಾಗ 1,74,884 ರೂ ಹೆಚ್ಚಳವಾಗಿತ್ತು. ಪ್ರಸ್ತುತ 1,84,000 ರೂ ಇದೆ. ಕಳೆದ ಎಂಟು ವರ್ಷಗಳ ಸರಾಸರಿ ಲೆಕ್ಕ ಹಾಕಿದರೆ ಮೈನಸ್ ಆಗಿದೆ. ಇದು ಬಿಜೆಪಿಯ ಅಭಿವೃದ್ದಿಯ ಲೆಕ್ಕಾಚಾರ' ಎಂದು ಆರೋಪಿಸಿದರು.
'ಈ ದೇಶದ ಅತ್ಯಂತ ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರಮೋದಿ, ರೈತರ ಅದಾಯ ದ್ವಿಗುಣ,ಕಪ್ಪು ಹಣ,ವಾರ್ಷಿಕ ಎರಡುಕೋಟಿ ಉದ್ಯೋಗ,ಅಚ್ಚೆ ದಿನ ಆಯೇಗಾ,ನೋಟು ಅಮಾನೀಕರಣದಿಂದ ಭ್ರಷ್ಟಾಚಾರ, ಭಯೋತ್ಪಾಧನೆಗೆ ತಡೆ ಸಾಧ್ಯವಾಯಿತೇ.ಸುಳ್ಳು ಹೇಳುವುದರಿಂದ ದೇಶದ ಅಭಿವೃದ್ದಿ ಸಾಧ್ಯವಿಲ್ಲ. 2014ರಲ್ಲಿ ದೇಶದ ಮೇಲಿನ ಸಾಲ 53,11,000 ಕೋಟಿ,153,00000 ಕಳೆದ 9 ವರ್ಷಗಳಲ್ಲಿ 100 ಲಕ್ಷ ಕೋಟಿ ಸಾಲ ಮಾಡಿದ್ದೀರಿ.ನೀವು ಜನನಾಯಕರೇ, ನೀವು ಅಭಿವೃದ್ದಿಯ ಹರಿಕಾರರೇ ಎಂಬುದನ್ನು ನೀವೇ ಜನತೆಯ ಮುಂದೆ ಹೇಳಿ' ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ಬಿಜೆಪಿ ಒಂದು ಕೋಮವಾದಿ ಪಕ್ಷ ಹಿಜಾಬ್, ಹಲಾಲ್ ಹೆಸರಿನಲ್ಲಿ ದೇಶ ಒಡೆದಿದೆ. ಆದರೆ ಕಾಂಗ್ರೆಸ್ ದೇಶದ ಸಂವಿಧಾನದಲ್ಲಿ ನಂಬಿಕೆ ಇರಿಸಿದೆ. ರಾಷ್ಟ್ರಗೀತೆ, ನಾಡಗೀತೆಗೆ ವಿರುದ್ಧವಾಗಿ ನಡೆದುಕೊಂಡು ಯುವಕರನ್ನು ಬಲಿ ತೆಗೆದುಕೊಳ್ಳತ್ತಿದ್ದಾರೆ. ದಲಿತರು, ಹಿಂದುಳಿದವರು,ಅಲ್ಪಸಂಖ್ಯಾತರು, ಯುವಕರು ಭಯದಿಂದ ಬದುಕುವಂತಹ ವಾತಾವರಣ ತಂದಿದೆ.ಇಂತಹ ಸರಕಾರ ನಮಗೆ ಅಗತ್ಯವೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಜನತೆ ಇಂತಹ ಕೋಮುವಾದಿ, ಜನವಿರೋಧಿ ಸರಕಾರವನ್ನು ಕಿತ್ತೊಗೆಯಲು ಮುಂದಾಗುವಂತೆ ಕರೆ ನೀಡಿದರು.







