ದೇಶಕ್ಕೆ ಭ್ರಷ್ಟಾಚಾರವನ್ನು ಪರಿಚಯಿಸಿದ್ದೇ ಕಾಂಗ್ರೆಸ್: ನಳಿನ್‍ಕುಮಾರ್ ಕಟೀಲ್
''ಕಾಂಗ್ರೆಸ್ ನಲ್ಲಿ ಕಾರ್ಯಕರ್ತರ ಕೊರತೆ ಇದೆ''

ಚಿಕ್ಕಮಗಳೂರು, ಜ.24: ಕಾಂಗ್ರೆಸ್ ಪಕ್ಷ ದೇಶ ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರದ ಪಿತಾಮಹಾ ಆಗಿದೆ. ಇಡೀ ದೇಶಕ್ಕೆ ಭ್ರಷ್ಟಾಚಾರವನ್ನು ಪರಿಚಯಿಸಿದ್ದೇ ಕಾಂಗ್ರೆಸ್ ಪಕ್ಷವಾಗಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂಬ ಭಯದಿಂದಾಗಿ ಬಿಜೆಪಿಯ ಮೇಲೆ ಭ್ರಷ್ಟಾಚಾರದ ಆರೋಪವನ್ನು ಹೊರಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಈ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಮಂಗಳವಾರ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಾಗೂ ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಪಿತಾಮಹಾ ಆಗಿದೆ. ರಾಹುಲ್ ಗಾಂಧಿ ಬೇಲಿನ ಮೇಲೆ ಹೊರಗಿದ್ದಾರೆ, ರಾಬರ್ಟ್ ವಾದ್ರಾ ಕೂಡ ಬೇಲಲ್ಲಿದ್ದಾರೆ. ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಬೇಲಲ್ಲಿದ್ದಾರೆ. ಕಾಂಗ್ರೆಸ್ ಪಕ್ಷವೇ ಬೇಲಲ್ಲಿರುವ ಪಾರ್ಟಿಯಾಗಿದೆ. ಕಾಂಗ್ರೆಸ್ ಪಕ್ಷ ಎಂದರೇ ಭ್ರಷ್ಟಾಚಾರಿಗಳ ಪಕ್ಷವಾಗಿದ್ದು, ಭ್ರಷ್ಟಾಚಾರ ಮುಕ್ತ ದೇಶ ಆಗಬೇಕಿದ್ದರೇ ಮೊದಲು ಕಾಂಗ್ರೆಸ್ ಮುಕ್ತ ಆಗಬೇಕು ಎಂದ ಅವರು, ಭಷ್ಟಾಚಾರದ ವಿಚಾರದಲ್ಲಿ ಕಾಂಗ್ರೆಸ್‍ನವರು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಾ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದರು.
ಬಿಜೆಪಿ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಸಿದ್ದರಾಮಯ್ಯ ಪ್ರಾಮಾಣಿಕರಾಗಿದ್ದರೇ, ಅವರ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿದ್ದು ಏಕೆ?, ಲೋಕಾಯುಕ್ತಕ್ಕಿದ್ದ ಶಕ್ತಿಯನ್ನು ಕುಂದಿಸಿದ್ದೇಕೆ? ಎಂದು ಪ್ರಶ್ನಿಸಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಲೋಕಾಯುಕ್ತದಲ್ಲಿ ಈಗಾಗಲೇ ಮೂರು ಕೇಸ್‍ಗಳಿವೆ. ಅರ್ಕಾವತಿ ಹಗರಣದ ಆರೋಪ ಅವರ ಮೇಲಿದ್ದು, ಅದು ಎಂತಹ ಹಗರಣ ಎಂಬುದು ಮುಂದೆ ತಿಳಿಯುತ್ತೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರೇ ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿ ಬಂದಿದ್ದು, ಬಿಜೆಪಿಯವರ ಮೇಲೆ ಭ್ರಷ್ಟಾಚಾರ, ಕಮೀಶನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ತಮ್ಮ ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ಇಂದಿಗೂ ನೀಡಿಲ್ಲ. ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡಿದ್ದರಿಂದಾಗಿ ಕೆಂಪಣ್ಣ ಜೈಲಿಗೆ ಹೋಗಿದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಲೋಕಾಯುಕ್ತಕ್ಕೆ ಶಕ್ತಿ ನೀಡಿದ್ದು, ಭ್ರಷ್ಟಾಚಾರಿಗಳು ಜೈಲು ಸೇರಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಯಾರೆಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ, ಈ ವಿಚಾರದಲ್ಲಿ ಸಿದ್ದು, ಡಿಕೆಶಿ ವಿರುದ್ಧ ಪೈಪೋಟಿ ಏರ್ಪಟ್ಟಿದೆ. ಮಾಜಿ ಸಿಎಂ ಹಾಗೂ 13 ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಅವರಂತಹ ಕಾಂಗ್ರೆಸ್‍ನ ಅಗ್ರಗಣ್ಯ ನಾಯಕನಿಗೆ ಕ್ಷೇತ್ರ ಇಲ್ಲದಂತಾಗಿದ್ದು, ಅವರಿನ್ನೂ ಕ್ಷೇತ್ರದ ಹುಡುಕಾಟದಲ್ಲಿರುವುದು ವಿಪರ್ಯಾಸ ಎಂದು ಟೀಕಿಸಿದ ಕಟೀಲ್, ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರ ನಡುವೆ ಸಿಎಂ ಹುದ್ದೆಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಎಲ್ಲವೂ ಸರಿಇಲ್ಲ. ಕಾಂಗ್ರೆಸ್‍ನ ಅಗ್ರಗಣ್ಯ ನಾಯಕರಾಗಿರುವ ಸಿದ್ದರಾಮಯ್ಯ ಅವರಂತಹ ನಾಯಕನಿಗೆ ನಿರ್ದಿಷ್ಟ ಕ್ಷೇತ್ರವೇ ಇಲ್ಲದಂತಾಗಿದ್ದು, ಅವರಿನ್ನೂ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಕ್ಷೇತ್ರ ವಿಚಾರದಲ್ಲಿ ಗೊಂದಲ್ಲಿದ್ದು, ರಾಮನಗರ ಇಲ್ಲವೇ ಮದ್ದೂರಿನಲ್ಲಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೆ ನೀಡುತ್ತಾ ಮಾತು ಬದಲಾಯಿಸುತ್ತಿದ್ದಾರೆ. ಡಿಕೆಶಿ ಅವರನ್ನು ಆ ಕ್ಷೇತ್ರಗಳ ಜನ ಕರೆದು ಚುನಾವಣೆಗೆ ನಿಲ್ಲಿಸುತ್ತಿಲ್ಲ, ಬದಲಾಗಿ ಜನರೇ ಕ್ಷೇತ್ರದಿಂದ ಹೊರ ಹಾಕುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರ ಕೊರತೆ ಇದೆ, ಆದರೆ ಬಿಜೆಪಿಯಲ್ಲಿ ಮತದಾರರ ಪಟ್ಟಿಯ ಪೇಜಿಗೊಬ್ಬ ಕಾರ್ಯಕರ್ತರಿದ್ದಾರೆ. ಕಾಂಗ್ರೆಸ್‍ನಲ್ಲಿ ಇಡೀ ಮತದಾರರ ಪಟ್ಟಿಗೆ ಒಬ್ಬನೇ ಕಾರ್ಯಕರ್ತರಿದ್ದಾರೆ. ಇದು ಇವತ್ತಿನ ಕಾಂಗ್ರೆಸ್‍ನ ಹೀನಾಯ ಪರಿಸ್ಥಿತಿ ಎಂದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ. ಈ ಭೀತಿಯಿಂದಾಗಿ ಕಾಂಗ್ರೆಸ್ ಪಕ್ಷದವರು ವಿಲವಿಲ ಒದ್ದಾಡುತ್ತಾ ಭ್ರಷ್ಟಾಚಾರದ ಆರೋಪ ಮಾಡುತ್ತ ಯಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಉಪಸ್ಥಿತರಿದ್ದರು.
'ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಪಕ್ಷ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಆರೋಪ ಇದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಳಿನ್‍ಕುಮಾರ್ ಕಟೀಲ್, ಯಡಿಯೂರಪ್ಪ ಅವರು ನಮ್ಮ ಸರ್ವೋಚ್ಛ ನ್ಯಾಯಕ. ಅವರ ನಮ್ಮ ಚುನಾವಣಾ ಮಂಡಳಿ, ಸಂಸದೀಯ ಸಮಿತಿಯ ಸದಸ್ಯರಾಗಿದ್ದಾರೆ. ಅವರ ಮಾರ್ಗದರ್ಶನಲ್ಲೇ ಪಕ್ಷ ಮುನ್ನಡೆಯುತ್ತಿದೆ. ಪಕ್ಷದ ಹಿರಿಯ ನಾಯಕರಾಗಿರುವ ಅವರಿಗೆ ಪಕ್ಷ ಯಾವಯಾವ ಜವಬ್ದಾರಿಗಳನ್ನು ನೀಡಬೇಕೋ ಅದೆನ್ನೆಲ್ಲ ನೀಡಿದೆ. ಈ ವಿಚಾರದಲ್ಲಿ ಅವರಿಗೆ ಸಂತೃಪ್ತಿ ಇದ್ದು, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲೇ ಪಕ್ಷ ನಡೆಯುತ್ತಿದೆ'
ನಳಿನ್ ಕುಮಾರ್ ಕಟೀಲ್- ಬಿಜೆಪಿ ರಾಜ್ಯಾಧ್ಯಕ್ಷರು







