'PSI ಹಗರಣ ಮುಚ್ಚಿಹಾಕಲು 3 ಕೋಟಿ ರೂ. ಕೇಳಿದ್ದರು': ಆರ್.ಡಿ. ಪಾಟೀಲ್ ಹೇಳಿಕೆ ಬಗ್ಗೆ ತನಿಖೆಗೆ ಕಾಂಗ್ರೆಸ್ ಒತ್ತಾಯ
ಆರ್.ಡಿ ಪಾಟೀಲ್ ಹೇಳಿಕೆ ಬಗ್ಗೆ ತನಿಖೆ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು, ಜ. 24: ‘ಪಿಎಸ್ಸೈ ಹಗರಣದ ಮುಚ್ಚಿಹಾಕಲು ಸಿಐಡಿ ಪೊಲೀಸ್ ಅಧಿಕಾರಿಗಳು 3 ಕೋಟಿ ರೂ.ಕೇಳಿದ್ದರು, ನಾನು 76ಲಕ್ಷ ರೂ.ಕೊಟ್ಟಿದ್ದೇನೆ’ ಎಂದು ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಗಂಭೀರ ಆರೋಪ ಮಾಡಿದ್ದಾನೆ. ಪ್ರಾಮಾಣಿಕ, ಪಾರದರ್ಶಕ ತನಿಖೆ ಎಂದು ಡೈಲಾಗ್ ಹೊಡೆದಿದ್ದ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಪಾರದರ್ಶಕತೆ ಇದೇನಾ? ಸರಕಾರದ ತನಿಖೆಯಲ್ಲಿ ಸತ್ಯ ಸಮಾಧಿಯಾಗುತ್ತಿದೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
‘ಪಿಎಸ್ಸೈ ಹಗರಣದ ಪಾರದರ್ಶಕತೆ ಹೇಗಿದೆ ಎಂದು ಹಗರಣದ ಆರೋಪಿಯಿಂದಲೇ ಬೆತ್ತಲಾಗಿದೆ. ನ್ಯಾಯಾಂಗ ತನಿಖೆಗೆ ವಹಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದಾಗ ಪ್ರಾಮಾಣಿಕ ತನಿಖೆ ನಡೆಯುತ್ತಿದೆ ಎಂಬ ಸೋಗಲಾಡಿ ಸಮರ್ಥನೆ ಮಾಡಿಕೊಳ್ಳುತ್ತಿದ್ದ ಗೃಹ ಸಚಿವ ಆಗರ ಜ್ಞಾನೇಂದ್ರ ಸಿಐಡಿ ಅಧಿಕಾರಿಗಳ 3 ಕೋಟಿ ರೂ.ಡೀಲಿಂಗ್ ಬಗ್ಗೆ ಈಗ ಮಾತಾಡುತ್ತಿಲ್ಲವೇಕೆ?’ ಎಂದು ಕಾಂಗ್ರೆಸ್ ಕೇಳಿದೆ.
‘ಪಿಎಸ್ಸೈ ಹಗರಣದ ಆರೋಪಿ ಡಿ.ಆರ್.ಪಾಟೀಲ್ ಹಗರಣ ಮುಚ್ಚಲು ಸಿಐಡಿ ಅಧಿಕಾರಿಗಳಿಗೆ 76ಲಕ್ಷ ರೂ. ಕೊಟ್ಟಿದ್ದೇನೆ ಎಂದಿದ್ದಾನೆ, ಆ ಹಣದ ಋಣದಿಂದಲೇ ಆತನನ್ನು ಪರಾರಿಯಾಗಲು ಸಿಐಡಿ ಪೊಲೀಸರೇ ವ್ಯವಸ್ಥೆ ಮಾಡಿದ್ದರೇ ಬಸವರಾಜ ಬೊಮ್ಮಾಯಿ ಅವರೇ? ಈತನಿಗೂ ಸಿಎಂಗೂ ನಿಕಟ ಸಂಬಂಧವಿರುವುದು ಸ್ವಾಗತದ ಬ್ಯಾನರ್‍ನಲ್ಲೇ ಸಾಬೀತಾಗಿದೆ. ಈಗ ಬೊಮ್ಮಾಯಿ ಅವರೆ ಉತ್ತರಿಸಬೇಕು’ ಎಂದು ಆಗ್ರಹಿಸಿದೆ.
‘ಪಿಎಸ್ಸೈ ಹಗರಣದ ತನಿಖೆಯನ್ನೇ ತನಿಖೆಗೊಳಪಡಿಸುವ ಅಗತ್ಯವಿದೆ! ಆರೋಪಿಗಳಿಗೆ ಜಾಮೀನು ಸಿಗುವ ರೀತಿ ಅಸಮರ್ಥ ವಾದ ಮಂಡಿಸಿತ್ತು ಸರಕಾರ. ಆಡಿಯೋ ಒಂದರಲ್ಲಿ ಗೃಹ ಸಚಿವರೇ ಈ ವೈಫಲ್ಯವನ್ನು ಒಪ್ಪಿದ್ದರು. ಸಿಐಡಿ ಅಧಿಕಾರಿಗಳು ಆರೋಪಿಯನ್ನು ಪರಾರಿಯಾಗಲು ಬಿಡುತ್ತಾರೆ. ಇದು ಪಾರದರ್ಶಕ ತನಿಖೆಯೇ ಬಸವರಾಜ ಬೊಮ್ಮಾಯಿ ಅವರೇ? ನ್ಯಾಯಾಂಗ ತನಿಖೆಗೆ ಹಿಂದೇಟು ಏಕೆ?’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
► ಆರ್.ಡಿ ಪಾಟೀಲ್ ಹೇಳಿಕೆ ಬಗ್ಗೆ ತನಿಖೆ: ಮುಖ್ಯಮಂತ್ರಿ ಬೊಮ್ಮಾಯಿ
'ಪೊಲೀಸ್ ಸಬ್ ಇನ್ಸ್‍ಪೆಕ್ಟರ್ (ಪಿಎಸ್ಸೈ) ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಆಡಿಯೋ ಕುರಿತು ತನಿಖೆ ನಡೆಸಲಾಗುವುದು, ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು. ಪಿಎಸ್ಸೈ ಅಕ್ರಮದ ಆರೋಪಿ ಆರ್.ಡಿ.ಪಾಟೀಲ್ ಏನು ಹೇಳಿದ್ದಾನೆಂಬುದು ಅಲ್ಲಿಯ ಪೊಲೀಸ್ ತನಿಖಾಧಿಕಾರಿಗಳಿಗೆ ಗೊತ್ತಿದೆ. ತನಿಖೆ ಬಳಿಕ ಅಧಿಕಾರಿಗಳದ್ದು ತಪ್ಪಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
"PSI ಹಗರಣದ ಮುಚ್ಚಿಹಾಕಲು ಸಿಐಡಿ ಪೊಲೀಸ್ ಅಧಿಕಾರಿಗಳು 3 ಕೋಟಿ ಕೇಳಿದ್ದರು, ನಾನು 76 ಲಕ್ಷ ಕೊಟ್ಟಿದ್ದೇನೆ" ಎಂಬ ಗಂಭೀರ ಆರೋಪ ಮಾಡಿದ್ದಾನೆ ಪ್ರಮುಖ ಆರೋಪಿ ಆರ್.ಡಿ ಪಾಟೀಲ್.
— Karnataka Congress (@INCKarnataka) January 24, 2023
ಪ್ರಾಮಾಣಿಕ, ಪಾರದರ್ಶಕ ತನಿಖೆ ಎಂದು ಡೈಲಾಗ್ ಹೊಡೆದಿದ್ದ @BSBommai ಅವರೇ, ನಿಮ್ಮ ಪಾರದರ್ಶಕತೆ ಇದೇನಾ?
ಸರ್ಕಾರದ ತನಿಖೆಯಲ್ಲಿ ಸತ್ಯ ಸಮಾಧಿಯಾಗುತ್ತಿದೆ.







