ಮೇಲುಸ್ತುವಾರಿ ಸಮಿತಿ ಆಯ್ಕೆ ವೇಳೆ ನಮ್ಮೆಂದಿಗೆ ಸಮಾಲೋಚಿಸಿಲ್ಲ ಸಾಕ್ಷಿ ಮಲಿಕ್, ಬಜರಂಗ ಪೂನಿಯ ಬೇಸರ

ಹೊಸದಿಲ್ಲಿ, ಜ. 24: ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲುಎಫ್ಐ)ನ ದೈನಂದಿನ ವ್ಯವಹಾರಗಳನ್ನು ನಡೆಸಲು ಬಾಕ್ಸಿಂಗ್ ವಿಶ್ವ ಚಾಂಪಿಯನ್ ಎಮ್.ಸಿ. ಮೇರಿ ಕೋಮ್ ನೇತೃತ್ವದ ಮೇಲುಸ್ತುವಾರಿ ಸಮಿತಿಯನ್ನು ಕ್ರೀಡಾ ಸಚಿವಾಲಯ ನೇಮಿಸಿರುವ ಬಗ್ಗೆ ಖ್ಯಾತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ ಪೂನಿಯ ಮಂಗಳವಾರ ನಿರಾಶೆ ವ್ಯಕ್ತಪಡಿಸಿದ್ದಾರೆ.
‘‘ಮೇಲುಸ್ತುವಾರಿ ಸಮಿತಿಯನ್ನು ನೇಮಿಸುವ ಮೊದಲು ನಮ್ಮಂದಿಗೆ ಸಮಾಲೋಚಿಸಲಾಗುವುದು ಎಂಬ ಭರವಸೆಯನ್ನು ನಮಗೆ ನೀಡಲಾಗಿತ್ತು. ಆದರೆ ಈ ಸಮಿತಿಯ ರಚನೆಗೆ ಮುನ್ನ ನಮ್ಮಂದಿಗೆ ಸಮಾಲೋಚನೆಯನ್ನೂ ಮಾಡದಿರುವುದು ಬೇಸರದ ಸಂಗತಿಯಾಗಿದೆ’’ ಎಂಬುದಾಗಿ ಅವರು ಟ್ವಿಟರ್ನಲ್ಲಿ ಬರೆದಿದ್ದಾರೆ.
ಸೋಮವಾರ ಭಾರತೀಯ ಕುಸ್ತಿ ಫೆಡರೇಶನ್ನ ದೈನಂದಿನ ವ್ಯವಹಾರಗಳನ್ನು ನಡೆಸಲು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಐವರು ಸದಸ್ಯರ ಮೇಲುಸ್ತುವಾರಿ ಸಮಿತಿಯ ಸದಸ್ಯರ ಹೆಸರುಗಳನ್ನು ಪ್ರಕಟಿಸಿದ್ದಾರೆ.
‘‘ಮೇಲುಸ್ತುವಾರಿ ಸಮಿತಿಯ ನೇತೃತ್ವವನ್ನು ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ವಹಿಸುವರು. ಯೋಗೇಶ್ವರ್ ದತ್ತ್, ದ್ರೋಣಾಚಾರ್ಯ ಪ್ರಶಸ್ತಿ ವಿಜೇತೆ ತೃಪ್ತಿ ಮುರ್ಗುಂಡೆ, ಮಾಜಿ ಟಿಒಪಿಎಸ್ ಸಿಇಒ ರಾಜಗೋಪಾಲನ್ ಮತ್ತು ಸಾಯಿ ರಾದಿಕಾ ಶ್ರೀಮನ್ ಸಮತಿಯ ಸದಸ್ಯರಾಗಿರುವರು. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಸಂಬಂಧಪಟ್ಟ ಎಲ್ಲರೊಂದಿಗೂ ಮಾತನಾಡಿ, ಫೆಡರೇಶನ್ ಅಧ್ಯಕ್ಷರ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಮತ್ತು ಇತರ ಆರೋಪಗಳ ಬಗ್ಗೆ ತನಿಖೆ ನಡೆಸುವುದು ಹಾಗೂ ತನ್ನ ವರದಿ ಸಲ್ಲಿಸುವುದು. ಅಲ್ಲಿವರೆಗೆ, ಫೆಡರೇಶನ್ನ ದೈನಂದಿನ ವ್ಯವಹಾರಗಳನ್ನು ಈ ಸಮಿತಿಯೇ ನೋಡಿಕೊಳ್ಳುವುದು’’ ಎಂದು ಠಾಕೂರ್ ಹೇಳಿದ್ದಾರೆ.







