ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ, ಅಗತ್ಯವಿದ್ದರೆ ಭವಾನಿ ರೇವಣ್ಣಗೆ ನಾನೇ ಹೇಳುತ್ತಿದ್ದೆ: ಎಚ್.ಡಿ.ಕುಮಾರಸ್ವಾಮಿ

ರಾಯಚೂರು: 'ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿ ಇದ್ದಾರೆ. ಅಲ್ಲಿ ಅಭ್ಯರ್ಥಿ ಆಯ್ಕೆ ಅನಿವಾರ್ಯತೆ ಇದ್ದರೆ, ಭವಾನಿ ರೇವಣ್ಣ ಅವರಿಗೆ ಸ್ಪರ್ಧಿಸುವಂತೆ ನಾನೇ ಹೇಳುತ್ತಿದ್ದೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಪಂಚರತ್ನ ಯಾತ್ರೆಯ ವೇಳೆ ಗಾಣಧಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಈ ಬಗ್ಗೆ ಯಾವುದೇ ಗೊಂದಲ ಬೇಡ. ಕುಟುಂಬದಲ್ಲಿ ಏನೋ ಸಂಘರ್ಷ, ತಳಮಳ ನಡೆಯುತ್ತಿದೆ ಎಂಬ ಪ್ರಶ್ನೆಯೇ ಇಲ್ಲ. ಈ ಪಕ್ಷ ಕಟ್ಟಿತ್ತಿರುವ ಲಕ್ಷಾಂತರ ಕಾರ್ಯಕರ್ತರಿಗೆ ಬೆಲೆ ಕೊಡಬೇಕಾಗಿರುವುದು ನನ್ನ ಜವಾಬ್ದಾರಿ, ಇವರೇ ನನ್ನ ಕುಟುಂಬ" ಎಂದು ಹೇಳಿದರು.
'ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ಕಾರಣ ಇತ್ತು': ಮಧುಗಿರಿಯಲ್ಲಿ ಆಗ ಸರ್ಕಾರಿ ನೌಕರಿಯಲ್ಲಿ ಇದ್ದ ವೀರಭದ್ರಯ್ಯ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದರು. ಆದರೆ ಅವರು ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಗೆ ಸರ್ಕಾರದ ಮಟ್ಟದಲ್ಲಿ ಒಪ್ಪಿಗೆ ಸಿಕ್ಕಿರಲಿಲ್ಲ. ಆಗ ಮಧುಗಿರಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಅಭ್ಯರ್ಥಿ ಇರಲಿಲ್ಲ. ಈ ವೇಳೆ 8 ಕ್ಷೇತ್ರಗಳಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸಿತ್ತು. ಕೆಲವು ಕ್ಷೇತ್ರಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ನಮಗೆ ಇತ್ತು, ಆ ಕಾರಣಕ್ಕೆ ನಾನು ಅನಿತಾ ಕುಮಾರಸ್ವಾಮಿ ಅವರನ್ನು ಚುನಾವಣೆಗೆ ನಿಲ್ಲಿಸಿದೆ" ಎಂದು ಸ್ಪಷ್ಟಪಡಿಸಿದರು.
ಭವಾನಿ ರೇವಣ್ಣ ಹೇಳಿದ್ದೇನು?
'ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕು ಎಂದು ಎಲ್ಲರೂ ಮಾತನಾಡಿಕೊಂಡು ನಿರ್ಣಯ ತೆಗೆದುಕೊಂಡಿದ್ದಾರೆ. ಸ್ಪಲ್ಪ ದಿನಗಳಲ್ಲೇ ನನ್ನ ಹೆಸರು ಘೋಷಣೆಯಾಗಲಿದೆ' ಎಂದು ಭವಾನಿ ರೇವಣ್ಣ ಮಂಗಳವಾರ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧೆ ವಿಚಾರ; ರೇವಣ್ಣ, ಕುಮಾರಸ್ವಾಮಿ ನಿರ್ಧಾರ ಮಾಡುವುದಲ್ಲ: ಸಂಸದ ಪ್ರಜ್ವಲ್







