ಉಡುಪಿ ಜಿಲ್ಲೆಯ 5 ಬಂದರುಗಳ ಹೂಳೆತ್ತಲು 20 ಕೋಟಿ ರೂ.: ಸಚಿವ ಅಂಗಾರ
ಜಿಲ್ಲಾ ಗಣರಾಜ್ಯೋತ್ಸವ ಸಮಾರಂಭ

ಉಡುಪಿ: ಜಿಲ್ಲೆಯ ಐದು ಮೀನುಗಾರಿಕಾ ಬಂದರುಗಳಲ್ಲಿ ಒಟ್ಟು 20 ಕೋಟಿರೂ. ವೆಚ್ಚದಲ್ಲಿ ಹೂಳೆತ್ತಲು ಅನುಮೋದನೆಯನ್ನು ನೀಡಲಾಗಿದೆ. ಮೀನುಗಾರಿಕಾ ಬಂದರುಗಳಲ್ಲಿ ಮೀನುಗಾರಿಕಾ ದೋಣಿಗಳು ಸುಗಮವಾಗಿ ಹಾಗೂ ವೇಗವಾಗಿ ಚಲಿಸಲು ಅನುಕೂಲವಾಗುವಂತೆ ನ್ಯಾವಿಗೇಷನ್ ಚಾನೆಲ್‌ಗಳಲ್ಲಿ ಹಂತಹಂತವಾಗಿ ಹೂಳೆತ್ತಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ನಡೆದ ಜಿಲ್ಲಾಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಪಥಸಂಚಲನದಲ್ಲಿ ಗೌರವ ರಕ್ಷೆ ಸ್ವೀಕರಿಸಿ, ಮಹಾತ್ಮಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಗಣರಾಜ್ಯೋತ್ಸವ ಸಂದೇಶ ನೀಡಿ ಮಾತನಾಡುತಿದ್ದರು.
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸೌಕರ್ಯ ಇಲ್ಲದ ಮನೆ ಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕೇಂದ್ರ ಸರಕಾರದ ಮನೆ ಮನೆಗೆ ಗಂಗೆ ಯೋಜನೆಯಡಿ ಜಿಲ್ಲೆಯಲ್ಲಿ 2,47,188 ಮನೆಗಳಿಗೆ ನಳ್ಳಿ ಸಂಪರ್ಕ ಕಲ್ಪಿಸುವ ಗುರಿ ಹಾಕಿಕೊಳ್ಳಲಾಗಿದ್ದು, ಈವರೆಗೆ 1,67,701 ಮನೆಗಳಿಗೆ ನಳ್ಳಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಉಳಿದ ಮನೆಗಳಿಗೂ ಶೀಘ್ರವೇ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಯಡಜಿ ಕಾರ್ಕಳ, ಹೆಬ್ರಿ ಮತ್ತು ಕಾಪು ತಾಲೂಕುಗಳ ವ್ಯಾಪ್ತಿಯ 122 ಗ್ರಾಮಗಳ 1904 ಗ್ರಾಮೀಣ ಜನ ವಸತಿಗಳಿಗೆ 1600 ಕೋಟಿ ರೂ.ಳಲ್ಲಿ ಹಾಗೂ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ 59 ಗ್ರಾಮಗಳಿಗೆ 585ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದವರು ನುಡಿದರು.
ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಸಂರಕ್ಷಣೆಗಾಗಿ ಸುಮಾರು 38.96 ಕೋಟಿ ರೂ.ಅಂದಾಜು ವೆಚ್ಚದಲ್ಲಿ 8.56 ಕಿ.ಮೀ. ಉದ್ದಕ್ಕೆ ನದಿದಂಡೆ ಸಂರಕ್ಷಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಪಶ್ಚಿಮ ವಾಹಿನಿ ಯೋಜನೆಯಡಿ 107 ಕೋಟಿ ರೂ.ಅಂದಾಜು ಮೊತ್ತದಲ್ಲಿ 91 ಕಿಂಡಿ ಅಣೆಕಟ್ಟು ಕಾಮಗಾರಿಗಳ ನಡೆಸಿ 1842.76 ಹೆಕ್ಟೇರ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಗುರಿ ಇದ್ದು, ಈ ಪೈಕಿ 61 ಕಿಂಡಿ ಅಣೆಕಟ್ಟುಗಳ ಕಾಮಗಾರಿ ಮುಗಿದು 1241.22 ಹೆಕ್ಟೇರ್ ಕೃಷಿ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರಕಿದೆ ಎಂದರು.
ವಾರಾಹಿ ಏತ ನೀರಾವರಿ ಯೋಜನೆಯಡಿ ನಾಲಾ ಕಾಮಗಾರಿಗಳನ್ನು 30 ಕೋಟಿ ರೂ.ವೆಚ್ಚದಲ್ಲಿ ನಡೆಸಲಾಗುತ್ತಿದೆ. ಇದರೊಂದಿಗೆ ಎಣ್ಣೆಹೊಳೆ ಹಾಗೂ ಸೌಕೂರು ಏತ ನೀರಾವರಿ ಯೋಜನೆಗಳಿಗೆ 386.2 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಅಂಗಾರ ತಿಳಿಸಿದರು.
ಜಲಮಾರ್ಗ: ಸಾಗರಮಾಲಾ ಯೋಜನೆಯಡಿಯಲ್ಲಿ ಹಂಗಾರಕಟ್ಟೆಯಿಂದ ಮಣಿಪಾಲದವರೆಗಿನ ಜಲಮಾರ್ಗವನ್ನು 25 ಕೋಟಿ ರೂ.ವೆಚ್ಚದಲ್ಲಿ ನಡೆಸಲು ತಾತ್ವಿಕ ಅನುಮೋದನೆ ದೊರಕಿದೆ ಎಂದ ಬಂದರು ಸಚಿವರು, ಮಹಾತ್ಮಗಾಂಧಿ ರಾ.ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 7.23 ಲಕ್ಷ ಮಾನವ ದಿನಗಳನ್ನು ಸೃಜಿಸಿ 38.51 ಕೋಟಿ ರೂ.ಗಳ ವೆಚ್ಚದಲ್ಲಿ ಗ್ರಾಮೀಣ ಭಾಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ರಾಜ್ಯದ ಎಲ್ಲಾ ವರ್ಗದವರ ಅಭಿವೃದ್ಧಿಗೆ ಸಮಗ್ರವಾದ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ರಾಜ್ಯ ಆರ್ಥಿಕತೆಯನ್ನು ಹೆಚ್ಚಿಸಿ ಅದರ ಲಾಭವನ್ನು ಎಲ್ಲರಿಗೂ ತಲುಪಿಸಲು ಬದ್ಧವಾಗಿರುವ ರಾಜ್ಯ ಸರಕಾರ ಸರ್ವರ ವಿಕಾಸಕ್ಕಾಗಿ ಸಮೃದ್ಧ ಕರ್ನಾಟಕ ಕಟ್ಟುವ ಸಂಕಲ್ಪವನ್ನು ಮಾಡಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಚಿವರು ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ 24 ಮಂದಿ ಕೃಷಿಕರನ್ನು ನಗದು ಬಹುಮಾನದೊಂದಿಗೆ ಗೌರವಿಸಿದರು. ಕಳೆದ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿರುವ ಸರಕಾರಿ ಶಾಲಾ- ಕಾಲೇಜುಗ ತಲಾ ಎಂಟು ಮಂದಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು. ಅತ್ಯುತ್ತಮ ಸೇವೆ ಒದಗಿಸಿರುವ ಗ್ರಾಮ ವನ್ ಕೇಂದ್ರಗಳಿಗೂ ಪ್ರಶಂಸಾ ಪತ್ರ ವಿತರಿಸಿದರು.
ಕೊನೆಯಲ್ಲಿ ಉಡುಪಿ ಆಸುಪಾಸಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ಶಾಸಕ ಕೆ. ರಘುಪತಿ ಭಟ್, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಕಲ್ಮಾಡಿ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಜಿಪಂನ ಸಿಇಒ ಪ್ರಸನ್ನ ಎಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ, ಪ್ರೊಬೇಷನರಿ ಐಎಎಸ್ ಯತೀಶ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.









