ಪಿಐಬಿ ಸತ್ಯ ಪರಿಶೀಲನೆ ತಿದ್ದುಪಡಿ: ಮರುಮಾಹಿತಿ ಸಲ್ಲಿಸಲು ಗಡುವು ಫೆ.20ಕ್ಕೆ ವಿಸ್ತರಣೆ

ಹೊಸದಿಲ್ಲಿ,ಜ.26: ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು Press Information Bureau (PIB) ಅಥವಾ ಸತ್ಯ ಪರಿಶೀಲನೆಗೆ ಕೇಂದ್ರ ಸರಕಾರದಿಂದ ಅಧಿಕಾರ ಪಡೆದಿರುವ ಯಾವುದೇ ಇತರ ಸಂಸ್ಥೆಯು ಸುಳ್ಳು ಎಂದು ಗುರುತಿಸಿದ ಯಾವುದೇ ವಿಷಯವನ್ನು ಆನ್‌ಲೈನ್ ವೇದಿಕೆಗಳು ತೆಗೆದುಹಾಕುವುದನ್ನು ಕಡ್ಡಾಯಗೊಳಿಸಿರುವ ಪ್ರಸ್ತಾವದ ಕುರಿತು ಮರುಮಾಹಿತಿಗಳನ್ನು ಸಲ್ಲಿಸಲು ಗಡುವನ್ನು ಬುಧವಾರ ಜ.25ರಿಂದ ಫೆ.20ಕ್ಕೆ ವಿಸ್ತರಿಸಿದೆ.
ಸಚಿವಾಲಯವು 2021ರ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಿದ್ದುಪಡಿಯ ಕರಡು ಪ್ರಸ್ತಾವವನ್ನು ಜ.17ರಂದು ಮಂಡಿಸಿತ್ತು. ಪ್ರಸ್ತಾವವನ್ನು ವಿರೋಧಿಸಿದ್ದ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (Editors Guild of India) ,ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಷನ್ (DIGIPUB News India Foundation) ಸೇರಿದಂತೆ ಹಲವಾರು ಮಾಧ್ಯಮ ಸಂಘಟನೆಗಳು ಅದನ್ನು ಹಿಂದೆಗೆದುಕೊಳ್ಳುವಂತೆ ಕೇಂದ್ರವನ್ನು ಆಗ್ರಹಿಸಿದ್ದವು.
ಪ್ರಸ್ತಾವಿತ ಬದಲಾವಣೆಯನ್ನು ಜಾರಿಗೊಳಿಸಿದರೆ ಅದು ಅಂತರ್ಜಾಲದಲ್ಲಿ ಸುದ್ದಿ ವರದಿಗಾರಿಕೆ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ತೀವ್ರ ಹಾನಿಯನ್ನುಂಟು ಮಾಡುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಮಂಗಳವಾರ ಹೇಳಿಕೆಯನ್ನು ನೀಡಿದ್ದ ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಅವರು,ಪ್ರಸ್ತಾವವನ್ನು ಜಾರಿಗೊಳಿಸುವ ಮುನ್ನ ಕೇಂದ್ರವು ಸಂಬಂಧಿಸಿದವರೊಂದಿಗೆ ಚರ್ಚೆಗಳನ್ನು ನಡೆಸಲಿದೆ ಎಂದು ತಿಳಿಸಿದ್ದರು.
ಆನ್ಲೈನ್ ಗೇಮಿಂಗ್ಗೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ನಿಯಮಗಳು,2021ಕ್ಕೆ ಮಾಡಲಾಗಿರುವ ತಿದ್ದುಪಡಿ ಕುರಿತು ಮರುಮಾಹಿತಿ ಸಲ್ಲಿಕೆಗೆ ಗಡುವನ್ನು ವಿಸ್ತರಿಸಲಾಗಿಲ್ಲ ಎಂದೂ ಸಚಿವಾಲಯವು ಬುಧವಾರ ಸ್ಪಷ್ಟಪಡಿಸಿದೆ.
ಸರಕಾರವು ಆನ್ಲೈನ್ ಗೇಮಿಂಗ್ ಅನ್ನು ನಿಯಂತ್ರಿಸಲು ಕರಡು ನಿಯಮಗಳನ್ನು ಜ.2ರಂದು ಬಿಡುಗಡೆಗೊಳಿಸಿತ್ತು ಮತ್ತು ಸಂಬಂಧಿಸಿದವರು ತಮ್ಮ ಅಭಿಪ್ರಾಯಗಳನ್ನು ಜ.17ರೊಳಗೆ ಸಲ್ಲಿಸಬೇಕಿತ್ತು. ಆದರೆ ಅದೇ ದಿನ ಸರಕಾರವು ಸುಳ್ಳುಸುದ್ದಿಗಳಿಗೆ ಸಂಬಂಧಿಸಿದ ತಿದ್ದುಪಡಿಯನ್ನು ಹೊರಡಿಸಿತ್ತು. ಬಳಿಕ ಸಂಬಂಧಿಸಿದವರು ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಲು ಜ.25ರ ಗಡುವನ್ನು ನೀಡಲಾಗಿತ್ತು.







