Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬನಶಂಕರಿ ಜಾತ್ರೆಯಲ್ಲಿ ನಾಟಕ ಸುತ್ತಾಟ...

ಬನಶಂಕರಿ ಜಾತ್ರೆಯಲ್ಲಿ ನಾಟಕ ಸುತ್ತಾಟ ...

ಗಣೇಶ ಅಮೀನಗಡಗಣೇಶ ಅಮೀನಗಡ27 Jan 2023 9:31 AM IST
share
ಬನಶಂಕರಿ  ಜಾತ್ರೆಯಲ್ಲಿ ನಾಟಕ ಸುತ್ತಾಟ ...

ರಂಗಭೂಮಿ ಪರಂಪರೆಯನ್ನು ಉಳಿಸುವ, ಬೆಳೆಸುವ ಬನಶಂಕರಿ ಜಾತ್ರೆಗೆ ಬಹುದೊಡ್ಡ ಇತಿಹಾಸವಿದೆ. ಕೆಲ ವರ್ಷಗಳ ಹಿಂದೆ ಸುಮತಿಶ್ರೀ ಅವರು ‘ದೇವಿ ಮಹಾತ್ಮೆ’ ನಾಟಕದಲ್ಲಿ ದೇವಿ ಪಾತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು. ಇದು ಪಿ.ಬಿ.ಧುತ್ತರಗಿ ವಿರಚಿತ ನಾಟಕವಾಗಿತ್ತು. ಆಗ 13 ಲಕ್ಷ ಕಲೆಕ್ಷನ್ ಆಗಿತ್ತೆಂದು ದೊಡ್ಡ ಸಂಗತಿಯಾಗಿತ್ತು.

‘ಸಂದಿಮನಿ ಸಂಗವ್ವ’, ‘ಎಲ್ಲಿ ಅದಿ ಮಲ್ಯಾ’, ‘ರೊಕ್ಕ ಇದ್ದವಂಗ್ ಸೊಕ್ಕ ಭಾಳ’, ‘ಕುಂಟ ಕೋಣ-2’, ‘ನೀ ಬಂಗಾರ ಬಣ್ಣದಾಕಿ ಒಳ್ಳೆ ಗುಣದಾಕಿ’, ‘ಗುಳ್ಳವ್ವನ ಗುಗ್ರಿ’, ‘ಬಳಿಗಾರ ಹನುಮವ್ವ’, ‘ನೋಡ್ಯಾಳ ರೊಕ್ಕ ಬರತಾಳ ಪಕ್ಕ’, ‘ಫ್ಯಾಷನ್ ಹುಡುಗಿ ಟ್ಯೂಷನ್‌ಗೆ ಬಾ’ ಇವೆಲ್ಲ ಬನಶಂಕರಿ ಜಾತ್ರೆಯಲ್ಲಿ ಪ್ರದರ್ಶನಗೊ ಳ್ಳುತ್ತಿರುವ ನಾಟಕಗಳು. ಈ ಜಾತ್ರೆಗೆ ಬರುವವರಿಗೆ ಹೆಚ್ಚು ಮನರಂಜನೆ ಒದಗಿಸುವವು ನಾಟಕಗಳೇ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿಯ ಬನಶಂಕರಿ ಜಾತ್ರೆಯೆಂದರೆ ‘ತಂದೆ- ತಾಯಿ ಮಾತ್ರ ಸಿಗೂದಿಲ್ಲ’ ಎನ್ನುವ ಮಾತು ಚಾಲ್ತಿಯಲ್ಲಿದೆ. ರೊಕ್ಕ ಇದ್ದರೆ ಸಾಕು; ಎಲ್ಲವೂ ಸಿಗುವ ಈ ಜಾತ್ರೆಯಲ್ಲಿ ರೊಟ್ಟಿ ಊಟ ಕೊಡುವ ತಾಯಂದಿರು ಹೆಚ್ಚಿದ್ದಾರೆ. ಇರಲಿ, ಬನಶಂಕರಿ ಜಾತ್ರೆ ಯೆಂದರೆ ನಾಟಕ ಕಂಪೆನಿಗಳಿಗೆ ಬಲು ಹುರುಪು. ಸಾಲವನ್ನು ತೀರಿಸಿ, ಲಾಭ ಗಳಿಸುವ ಜಾತ್ರೆಯೆನ್ನುವ ಕಾರಣಕ್ಕೆ ಅನೇಕ ಕಂಪೆನಿಗಳು ಇಲ್ಲಿ ಮುಕ್ಕಾಂ ಮಾಡುತ್ತವೆ. ಆದರೆ ಎಲ್ಲ ಕಂಪೆನಿಗಳಿಗೆ ಲಾಭ ಆಗುತ್ತದೆ ಎನ್ನುವುದು ಕಷ್ಟ. ಪ್ರತಿ ವರ್ಷ ನಾಟಕವೊಂದು ಪ್ರೇಕ್ಷಕರ ಬಾಯಿಪ್ರಚಾರದಿಂದ ಜನಪ್ರಿಯ ಗಳಿಸಿ, ಆ ಕಂಪೆನಿಗೆ ಲಾಭ ವಾಗುತ್ತದೆ. ಉಳಿದ ಕಂಪೆನಿಗಳು ಅಷ್ಟಾಗಿ ಲಾಭ ಕಾಣದಿದ್ದರೂ ನಷ್ಟವಂತೂ ಹೊಂದುವುದಿಲ್ಲ. ಆದರೆ ಒಂದೆರಡು ಕಂಪೆನಿಗಳಿಗೆ ಕಲೆಕ್ಷನ್ ಕಡಿಮೆಯಾಗಿ ನಾಟಕ ಬದಲಾಯಿಸುತ್ತವೆ.

ಈ ಬಾರಿಯ ಜಾತ್ರೆಯಲ್ಲಿ ಅತ್ಯಂತ ಯಶ ಕಂಡ ನಾಟಕ ‘ಮೂಲಿ ಮನಿ ಸಂಗವ್ವ’. ಚಿತ್ತರಗಿಯ ಶ್ರೀ ಕುಮಾರ ವಿಜಯ ನಾಟಕ ಸಂಘವು ಎನ್.ಎಸ್.ಜೋಶಿ ವಿರಚಿತ ’ಸಂದಿಮನಿ ಸಂಗವ್ವ’ ನಾಟಕವನ್ನು ಪ್ರದರ್ಶಿಸುತ್ತಿದೆ. ನಿತ್ಯ ಸಂಜೆ 6.15ಕ್ಕೆ, ರಾತ್ರಿ 9.30 ಹಾಗೂ ರಾತ್ರಿ 12.30ಕ್ಕೆ ನಾಟಕದ ಪ್ರದರ್ಶನಗಳಿವೆ. ಈ ನಾಟಕ ಹಾಸ್ಯಪ್ರಧಾನ ವಾದುದು. ‘ಕುಂಟ ಕೋಣ ಮೂಕ ಜಾಣ’ ನಾಟಕದ ಮೂಲಕ ಪ್ರಸಿದ್ಧರಾದ ದಯಾನಂದ ಬೀಳಗಿ ಹಾಗೂ ಶ್ವೇತಾ ಬೀಳಗಿ ಅವರ ಅಭಿನಯ, ಜೂನಿಯರ್ ವಿಷ್ಣುವರ್ಧನ್ ಪಾತ್ರಧಾರಿಯಾಗಿ ಜಯಶ್ರೀರಾಜ್ ಗಮನ ಸೆಳೆಯುತ್ತಿದ್ದಾರೆ.

ಹೀಗಾಗಿ ಬಾಗಲಕೋಟೆ, ವಿಜಾಪುರ, ಕೊಪ್ಪಳ, ರಾಯಚೂರು, ಹಾವೇರಿ, ಗದಗ, ಧಾರವಾಡ ಮೊದಲಾದ ಜಿಲ್ಲೆಗಳಿಂದ ಬಂದ ಪ್ರೇಕ್ಷಕರು ‘ಸಂದಿಮನಿ ಸಂಗವ್ವ’ ನಾಟಕ ನೋಡಲು ಮುಗಿಬೀಳುತ್ತಿದ್ದಾರೆ. ಆದರೆ ಅನೇಕ ವರ್ಷಗಳಿಂದ ನಷ್ಟ ಅನುಭವಿಸುತ್ತಿದ್ದ ಚಿತ್ತರಗಿಯ ಶ್ರೀ ಕುಮಾರ ವಿಜಯ ನಾಟಕ ಸಂಘದ ಮಂಜುನಾಥ ಜಾಲಿಹಾಳ ಅವರನ್ನು ಈ ಬಾರಿ ‘ಸಂಗವ್ವ’ ಕೈ ಹಿಡಿದಿದ್ದಾಳೆ. 2019ರಲ್ಲಿ ಇದೇ ಜಾತ್ರೆಯಲ್ಲಿ ‘ಅತ್ತಿ ಅಟ್ಟದ ಮ್ಯಾಲೆ ಮಾವ ಕಟ್ಟಿ ಮ್ಯಾಲೆ’ ನಾಟಕಕ್ಕೆ ಸಿನೆಮಾ ನಟಿ ಮಾಲಾಶ್ರೀ ಅವರನ್ನು ಮೂರು ದಿನಗಳಮಟ್ಟಿಗೆ ಆಹ್ವಾನಿಸಿದ್ದರು.

ಪ್ರತಿ ದಿನ ಲಕ್ಷಾಂತರ ರೂಪಾಯಿ ಸಂಭಾವನೆಯನ್ನು ಮಾಲಾಶ್ರೀ ಅವರಿಗೆ ನೀಡಿದ್ದರು. ಆದರೆ ನಿರೀಕ್ಷಿಸಿದಷ್ಟು ಕಲೆಕ್ಷನ್ ಆಗದ ಪರಿಣಾಮ ನಷ್ಟ ಅನುಭವಿಸಿದ್ದರು. ಇದನ್ನೆಲ್ಲ ಹೋಗಲಾಡಿಸುವಂತೆ ಈ ಬಾರಿ ಲಾಭ ಕಂಡಿದ್ದಾರೆ. ಆದರೆ ಮೊನ್ನೆ ಬುಧವಾರದ ಪ್ರದರ್ಶನಕ್ಕೆ ಶೆಟ್ಟಿ ಪಾತ್ರಧಾರಿ ದಯಾನಂದ ಬೀಳಗಿ ಅವರು ಸಿನೆಮಾದ ಚಿತ್ರೀಕರಣಕ್ಕೆಂದು ಗೈರಾದ ಪರಿಣಾಮ ಕೆಲ ಪ್ರೇಕ್ಷಕರು ಗಲಾಟೆ ಮಾಡಿದರು. ದಯಾನಂದ ಬೀಳಗಿ ಅವರ ಅಭಿನಯ ನೋಡಲೆಂದೇ ದೂರದ ಊರುಗಳಿಂದ ಬಂದವರಿದ್ದರು. ನಂತರ ದಯಾನಂದ ಬೀಳಗಿ ಅವರು ಚಿತ್ರೀಕರಣಕ್ಕೆ ತೆರಳಿದ್ದಾರೆಂದು ಬ್ಯಾನರ್ ಕಟ್ಟಲಾಯಿತು. ದಯಾನಂದ ಬೀಳಗಿ ಅವರ ಪಾತ್ರವನ್ನು ಮಂಜುನಾಥ ಜಾಲಿಹಾಳ ಅವರ ಪುತ್ರ ವಿಜಯ್ ಅವರು ಸಮರ್ಥವಾಗಿ ನಿಭಾಯಿಸಿದರು.

ಇನ್ನು ಖಾಸ್ಗತೇಶ್ವರ ನಾಟಕ ಸಂಘದ ರಾಜು ತಾಳಿಕೋಟಿ ಅವರ ಪುತ್ರ ಭರತರಾಜ್ ತಾಳಿಕೋಟಿ ‘ರೊಕ್ಕ ಇದ್ದವಂಗ್ ಸೊಕ್ಕ ಭಾಳ’ ನಾಟಕ ಪ್ರದರ್ಶಿಸುತ್ತಿದ್ದಾರೆ. ಅವರದು ಖಳನಾಯಕನ ಪಾತ್ರ. ಅವರ ಪ್ರವೇಶವೆ ಸ್ಕ್ರಾರ್ಪಿಯೊ ವಾಹನದ ಮೂಲಕ. ಸಿನೆಮಾ ನಟ ಸುವೇದ್ ದಾಸ್ ಅವರಲ್ಲದೆ, ಮಹಾಂತೇಶ ತಾಳಿಕೋಟಿ ಅವರ ಹಾಸ್ಯಪಾತ್ರವಿದೆ. ರಾಜು ತಾಳಿಕೋಟಿ ಅವರ ಇನ್ನೊಬ್ಬ ಪುತ್ರ ದಾವಲ್ ಅವರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘ, ಕಮತಗಿ ಕಂಪೆನಿಯಡಿ ‘ಬಂಗಾರ ಬಣ್ಣದಾಕಿ ಒಳ್ಳೆಯ ಗುಣದಾಕಿ’ ನಾಟಕ ಪ್ರಸ್ತುತಪಡಿಸುತ್ತಿದ್ದಾರೆ.

ಕಳೆದ ವರ್ಷ ‘ಮಾತನಾಡಿದ ಮೂಕ ದನ’ ನಾಟಕದ ಮೂಲಕ ಹೆಚ್ಚು ಕಲೆಕ್ಷನ್ ಕಂಡಿದ್ದ ಜೇವರ್ಗಿ ರಾಜಣ್ಣ ಅವರ ರಚನೆಯ ‘ಕುಂಟ ಕೋಣ-2’ ಈ ಬಾರಿ ಭಾರಿ ಕಲೆಕ್ಷನ್ ಕಾಣದಿದ್ದರೂ ಯಶ ಕಂಡಿದೆ. 2017ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಕಂಡ ನಾಟಕ ಜೇವರ್ಗಿ ರಾಜಣ್ಣ ಅವರ ’ಸೆರೆ ಮನೆ ಸಂಗವ್ವ’. 1999ರಲ್ಲಿ ಜೇವರ್ಗಿ ರಾಜಣ್ಣ ಅವರು ರಚಿಸಿದ್ದ ‘ಕುಂಟ ಕೋಣ ಮೂಕ ಜಾಣ’ ನಾಟಕ ಮೂರು ಕಂಪೆನಿಗಳ ಮೂಲಕ 20 ಸಾವಿರ ಪ್ರದರ್ಶನಗಳನ್ನು ಕಂಡಿದೆ. ಈ ನಾಟಕದ ಪ್ರೇರಣೆಯಿಂದ 11 ನಾಟಕಗಳನ್ನು ಜೇವರ್ಗಿ ರಾಜಣ್ಣ ರಚಿಸಿದರು. ಜೊತೆಗೆ ಈ ವರ್ಷ ‘ಕುಂಟಕೋಣ-2’ ನಾಟಕವನ್ನು ರಚಿಸಿ, ಅವರ ಪುತ್ರಿ ಸುಜಾತಾ ಅವರ ಗುಬ್ಬಿಯ ಬಿಎಸ್‌ಆರ್ ನಾಟಕ ಸಂಘದ ಮೂಲಕ ಆಡಿಸುತ್ತಿದ್ದಾರೆ. ನಾಟಕದ ಆರಂಭದ ದಿನಗಳಲ್ಲಿ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಷೋನ ಖ್ಯಾತಿಯ ನಯನಾ ಅವರು ಮೂರು ದಿನಗಳವರೆಗೆ ಬಂದು ಪಾತ್ರ ನಿರ್ವಹಿಸಿದ್ದರು.

ಗಮನಾರ್ಹವೆಂದರೆ, ಜೇವರ್ಗಿ ಅವರ ಕಂಪೆನಿಯಲ್ಲಿ ನೀನಾಸಂ ಪದವೀಧರ ಸಂತೋಷಕುಮಾರ್ ಮಳ್ಳಿ ಹಾಗೂ ಹೆಗ್ಗೋಡಿನ ಸುಹಾಸ್ ಕಲಾವಿದರಾಗಿದ್ದಾರೆ. ಹಿರಿಯ ರಂಗಕಲಾವಿದೆ ಪ್ರೇಮಾ ಗುಳೇದಗುಡ್ಡ ಅವರ ಸೋದರಿಯ ಮಕ್ಕಳಾದ ಮಂಜುನಾಥ ಹಾಗೂ ಜ್ಯೋತಿ ಗುಳೇದಗುಡ್ಡ ಅವರು ‘ಗುಳ್ಳವ್ವನ ಗುಗ್ರಿ’ ನಾಟಕ ಆಡುತ್ತಿದ್ದಾರೆ. ಸ್ಥಳೀಯರು ಎನ್ನುವ ಕಾರಣಕ್ಕೆ ಅಂದರೆ ಬಾದಾಮಿಗೆ ಹತ್ತಿರವಿರುವ ಗುಳೇದಗುಡ್ಡದವರು ಎನ್ನುವ ಕಾರಣಕ್ಕೆ ‘ಗುಳ್ಳವ್ವನ’ ನಾಟಕಕ್ಕೆ ಪ್ರೇಕ್ಷಕರ ಬರ ಇರಲಿಲ್ಲ. ಇದಕ್ಕೆ ಮಂಜುನಾಥ, ಜ್ಯೋತಿ, ಉಮಾ ಬಾರಿಗಿಡದ ಅವರ ಅಭಿನಯವೂ ಕಾರಣ. ಮಂಜುನಾಥ ಅವರು ಅಭಿನಯ ಕಂಡು, ಮೆಚ್ಚಿದ ಪ್ರೇಕ್ಷಕರು ಅವರೊಂದಿಗೆ ಫೋಟೊ, ಸೆಲ್ಫಿ ತೆಗೆದುಕೊಳ್ಳುವುದು ಕಂಡು ಕಂಪೆನಿ ನಾಟಕಗಳ ಕಲಾವಿದರು ಸೆಲೆಬ್ರಿಟಿಗಳಾಗಿರುವುದನ್ನು ಕಂಡು ಖುಷಿಯಾಯಿತು. ಆದರೆ ಮಾಲತೇಶ ದಂಡಿನ ಅವರ ಕಲ್ಲೂರಿನ ಶ್ರೀಗುರು ಮಲ್ಲಿಕಾರ್ಜುನ ನಾಟ್ಯ ಸಂಘದ ಮೂಲಕ ‘ಫ್ಯಾಷನ್ ಹುಡುಗಿ ಟ್ಯೂಷನ್‌ಗೆ ಬಾ’ ಎಂಬ ನಾಟಕ ಆಡುತ್ತಿದ್ದರು. ಕಲೆಕ್ಷನ್ ಕಾಣದಾಗ ‘ಗ್ರಾಮ ಪಂಚಾಯ್ತಿ ಗಂಗವ್ವ’ ನಾಟಕವನ್ನು ಬುಧವಾರ ಶುರು ಮಾಡಿ ಗುರುವಾರಕ್ಕೆ ನಿಲ್ಲಿಸಿದರು. ಹೀಗೆಯೇ ಆಶಾರಾಣಿ ವಿಜಾಪುರ ಅವರ ಸಂತ ಶರೀಫ ಶಿವಯೋಗಿ ನಾಟ್ಯ ಸಂಘ, ತೆಗ್ಗಿಹಳ್ಳಿ ಕಂಪೆನಿ ಮೂಲಕ ‘ಬಳಿಗಾರ ಹನುಮವ್ವ’ ನಾಟಕ ಪ್ರದರ್ಶಿಸುತ್ತಿದ್ದರು.

ನಾಟಕ ಶುರುವಾದ ಮೊದಲ ವಾರ ‘ದುನಿಯಾ’ ಸಿನೆಮಾದ ನಟಿ ರಶ್ಮಿ ಅವರನ್ನು ಅತಿಥಿ ಕಲಾವಿದೆಯೆಂದು ಆಹ್ವಾನಿಸಲಾಗಿತ್ತು. ಆದರೆ ಪ್ರೇಕ್ಷಕರ ಕೊರತೆಯಿಂದಾಗಿ ಬುಧವಾರ ಸಂಜೆ ಮಾತ್ರ ಪ್ರದರ್ಶನ ಕಂಡಿತು. ಇದಕ್ಕಾಗಿ ನಿನ್ನೆ ಅಂದರೆ ಗುರುವಾರದಿಂದ ’ಬಂಗಾರಿ ನೀ ಬಲು ಸಿಂಗಾರಿ’ ನಾಟಕವನ್ನು ಆಶಾರಾಣಿ ಆರಂಭಿಸಿದರು. ಹೀಗೆ ಕಲೆಕ್ಷನ್ ಆಗದಾಗ ನಾಟಕ ಬದಲಾಯಿಸುವ ಕ್ರಮವೊಂದಾದರೆ, ಕಿರುತೆರೆಯ ಬೇರೆ ಬೇರೆ ಕಲಾವಿದರನ್ನು ಕರೆಸುವುದು ಇನ್ನೊಂದು ಕ್ರಮ. ಇದನ್ನು ಚಿಂದೋಡಿ ಶ್ರೀಕಂಠೇಶ ಅವರು ತಮ್ಮ ಕೆಬಿಆರ್ ಡ್ರಾಮಾ ಕಂಪೆನಿ ಮೂಲಕ ಕೈಗೊಂಡಿದ್ದಾರೆ. ನಾಟಕ ಆರಂಭವಾದ ಮೊದಲ ವಾರ ಕಿರುತೆರೆಯ ಕಲಾವಿದೆ ಚಂದ್ರಿಕಾ ಅವರನ್ನು ನಂತರ ಮೇಘಾ ಶೆಟ್ಟಿ ಅವರಲ್ಲದೆ ರಜಿನಿ ಅವರನ್ನೂ ಆಹ್ವಾನಿಸಿದರು.

ಹೀಗೆ ಕಿರುತೆರೆಯ ಕಲಾವಿದ ರೊಂದಿಗೆ ಸಿನೆಮಾ ಕಲಾವಿದರನ್ನು ಕರೆಸುವುದು ಲಾಗಾಯ್ತಿನಿಂದಲೂ ಬಂದಿದೆ. ವರನಟ ಡಾ.ರಾಜಕುಮಾರ್ ಅವರಿಂದ ಹಿಡಿದು ಈಚಿನ ಕಲಾವಿದರು ಬನಶಂಕರಿ ಜಾತ್ರೆಗೆ ಬರುತ್ತಾರೆ. ಇವರ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ಗಳಿಸಿಕೊಳ್ಳುವ ತಂತ್ರವಿದಾಗಿದೆ ಜೊತೆಗೆ ಜಾತ್ರೆಗೆ ಬರುವ ಪ್ರೇಕ್ಷಕರನ್ನು ತಾವು ಆಡುವ ನಾಟಕಗಳಿಗೆ ಸೆಳೆಯುವ ತಂತ್ರವೂ ಇದಾಗಿದೆ. ಹಿಂದೊಮ್ಮೆ ಈ ನಾಟಕ ಕಂಪೆನಿಗಳಿಗೆ ಪೈಪೋಟಿಯಾಗಿದ್ದ ಸಿನೆಮಾ ಥಿಯೇಟರುಗಳು ಕಡಿಮೆಯಾಗುತ್ತ ಬಂದು, ಈ ಬಾರಿ ಮಹಾಕೂಟೇಶ್ವರ ಟೂರಿಂಗ್ ಟಾಕೀಇನಲ್ಲಿ ವಿರಾಗಿ, ವೇದ, ಕಾಂತಾರ ಸಿನೆಮಾಗಳ ದಿನಕ್ಕೆ ಒಂದೊಂದು ಪ್ರದರ್ಶನ ಆಯೋಜಿಸಲಾಗಿದೆ. ಆದರೆ ಈ ಸಿನೆಮಾಗಳಿಗೆ ಇಲ್ಲಿ ಮಾತ್ರ ಪ್ರೇಕ್ಷಕರ ಕೊರತೆ ಕಾಡುತ್ತಿದ್ದು, ನಾಟಕಗಳನ್ನೇ ಹೆಚ್ಚು ನೋಡುತ್ತಾರೆ. ಬೆಳಗಾವಿ ಜಿಲ್ಲೆಯ ಗೊಡಚಿ ಜಾತ್ರೆಯಿಂದ, ಕೊಪ್ಪಳ ಜಿಲ್ಲೆಯ ಕುಕನೂರು ಜಾತ್ರೆಯಿಂದ ಬನಶಂಕರಿಗೆ ಬರುವ ನಾಟಕ ಕಂಪೆನಿಗಳು ಯಶ ಕಂಡರೆ ಒಂದೂವರೆ ತಿಂಗಳವರೆಗೆ ಮುಂದುವರಿಯುತ್ತವೆ. ನಂತರ ಕೊಟ್ಟೂರು, ಮೈಲಾರ ಜಾತ್ರೆಗಳಲ್ಲಿ ಮುಕ್ಕಾಂ ಹೂಡುತ್ತವೆ.

ಇದು ಮಳೆಗಾಲದವರೆಗೆ ಮುಂದುವರಿಯುತ್ತದೆ. ಹೀಗೆ ರಂಗಭೂಮಿ ಪರಂಪರೆಯನ್ನು ಉಳಿಸುವ, ಬೆಳೆಸುವ ಬನಶಂಕರಿ ಜಾತ್ರೆಗೆ ಬಹುದೊಡ್ಡ ಇತಿಹಾಸವಿದೆ. ಕೆಲ ವರ್ಷಗಳ ಹಿಂದೆ ಸುಮತಿಶ್ರೀ ಅವರು ‘ದೇವಿ ಮಹಾತ್ಮೆ’ ನಾಟಕದಲ್ಲಿ ದೇವಿ ಪಾತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು. ಇದು ಪಿ.ಬಿ.ಧುತ್ತರಗಿ ವಿರಚಿತ ನಾಟಕವಾಗಿತ್ತು. ಆಗ 13 ಲಕ್ಷ ಕಲೆಕ್ಷನ್ ಆಗಿತ್ತೆಂದು ದೊಡ್ಡ ಸಂಗತಿಯಾಗಿತ್ತು. ಗುಡಗೇರಿ ಬಸವರಾಜ ಅವರು ತಮ್ಮ ಅಭಿನಯದಿಂದಲೇ ಪ್ರೇಕ್ಷಕರನ್ನು ಸೆಳೆಯುತ್ತಿದ್ದರು ಎಂಬುದು ಇತಿಹಾಸ. ಗಟ್ಟಿ ಕಥಾವಸ್ತು, ಕಲಾವಿದರ ಅಭಿನಯವೇ ಜೀವಾಳವಾದಾಗ ನಾಟಕಗಳು ಯಶಸ್ಸು ಕಾಣುತ್ತವೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇರುತ್ತದೆ. ಬನಶಂಕರಿ ಜಾತ್ರೆಯ ಇಂಥವೇ ನೆನಪುಗಳು ಚಿತ್ತಿಭಿತ್ತಿಯಲ್ಲಿ ಉಳಿದಿವೆ.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X