ಕಾಯಿಲೆಪೀಡಿತ ಮಕ್ಕಳನ್ನು ಕೊಂದು ಪತ್ನಿ ಸಮೇತ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿಯ ಮಾಜಿ ಕಾರ್ಪೊರೇಟರ್

ಭೋಪಾಲ್ (ಮಧ್ಯಪ್ರದೇಶ): ಬಿಜೆಪಿಯ ಮಾಜಿ ಕಾರ್ಪೊರೇಟರ್ ಹಾಗೂ ಅವರ ಪತ್ನಿ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಇಬ್ಬರು ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಸಂಜೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟವರನ್ನು ಸಂಜೀವ್ ಮಿಶ್ರಾ (45 ವರ್ಷ), ಅವರ ಪತ್ನಿ ನೀಲಂ (42 ವರ್ಷ), ಹಾಗೂ ಅವರ ಇಬ್ಬರು ಮಕ್ಕಳಾದ ಅನ್ಮೋಲ್ (13 ವರ್ಷ) ಮತ್ತು ಸಾರ್ಥಕ್ (7 ವರ್ಷ) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಮಕ್ಕಳ ಅನಾರೋಗ್ಯದ ಕಾರಣ ದಂಪತಿಗಳು ಖಿನ್ನತೆಗೊಳಗಾಗಿದ್ದರು.
"ದೇವರು ಶತ್ರುಗಳ ಮಕ್ಕಳನ್ನೂ ಈ ಕಾಯಿಲೆಯಿಂದ ರಕ್ಷಿಸಲಿ... ಮಕ್ಕಳನ್ನು ಉಳಿಸಲು ನನಗೆ ಸಾಧ್ಯವಾಗುತ್ತಿಲ್ಲ, ನಾನು ಇನ್ನು ಮುಂದೆ ಬದುಕಲು ಬಯಸುವುದಿಲ್ಲ" ಎಂದು ಸಾಯುವ ಮೊದಲು ಮಿಶ್ರಾ ಅವರು ಟ್ವಿಟರ್ ನಲ್ಲಿ ಬರೆದಿದ್ದರು.
ವಿದಿಶಾ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಸ್ಥಳಕ್ಕಾಗಮಿಸಿ ಬೀಗ ಹಾಕಿದ್ದ ಬಾಗಿಲು ಒಡೆದು ಒಳ ನುಗ್ಗಿ ಕುಟುಂಬದ ನಾಲ್ವರು ಸದಸ್ಯರನ್ನು ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ವೇಳೆ ನಾಲ್ವರು ಮೃತಪಟ್ಟಿದ್ದಾರೆ.







