ಉಳ್ಳಾಲ| ರಸ್ತೆಯುದ್ದಕ್ಕೂ ಹರಿದ ಫಿಶ್ ಮೀಲ್ ತ್ಯಾಜ್ಯ: ಸ್ಥಳೀಯರಿಂದ ಟ್ಯಾಂಕರ್ ತಡೆದು ಆಕ್ರೋಶ

ಉಳ್ಳಾಲ: ಟ್ಯಾಂಕರ್ ವೊಂದರಲ್ಲಿ ಸಾಗಿಸಲಾಗುತ್ತಿದ್ದ ಫಿಶ್ ಮೀಲ್ ಫ್ಯಾಕ್ಟರಿಯ ದುರ್ನಾತ ತ್ಯಾಜ್ಯವು ರಸ್ತೆಯುದ್ದಕ್ಕೂ ಹರಿದ ಪರಿಣಾಮ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿದ್ದು, ಆಕ್ರೋಶಗೊಂಡ ಸ್ಥಳೀಯರು ಟ್ಯಾಂಕರನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಫಿಶ್ ಮೀಲ್ ತ್ಯಾಜ್ಯ ಹೊತ್ತಿದ್ದ ಟ್ಯಾಂಕರ್ ಒಂದು ಇಂದು ಬೆಳಿಗ್ಗೆ ಕೇರಳ ಕಡೆಯಿಂದ ಉಳ್ಳಾಲ ಕೋಟೆಪುರದ ಫ್ಯಾಕ್ಟರಿ ಕಡೆ ಸಾಗುತ್ತಿದ್ದ ವೇಳೆ ಅಬ್ಬಕ್ಕ ವೃತ್ತದಿಂದ ಮೊಗವೀರ ಪಟ್ಣದವರೆಗೆ ರಸ್ತೆಯುದ್ದಕ್ಕೂ ದುರ್ನಾತ ಬೀರುವ ರಾಸಾಯನಿಕ ಮಿಶ್ರಿತ ತ್ಯಾಜ್ಯವನ್ನ ಚೆಲ್ಲುತ್ತಾ ಸಾಗಿದೆ ಎನ್ನಲಾಗಿದೆ. ಪರಿಣಾಮ ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಗಳು ಜಾರಿ ಬಿದ್ದಿದ್ದು, ಸ್ಥಳೀಯರು ತಕ್ಷಣ ಟ್ಯಾಂಕರನ್ನ ತಡೆದು ನಿಲ್ಲಿಸಿ ಚಾಲಕನನ್ನ ತರಾಟೆಗೆ ತೆಗೆದುಕೊಂಡರು.
ಸ್ಥಳೀಯ ಮೀನುಗಾರರು ಮಾತನಾಡಿ, ಹೊರ ರಾಜ್ಯಗಳಿಂದಲೂ ಫಿಶ್ ಮೀಲ್ ಮಲಿನಗಳನ್ನ ಆಮದು ಮಾಡಿಸಿ ಉಳ್ಳಾಲ ನಗರವನ್ನೆ ಗಬ್ಬು ನಾರುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ಎಚ್ಚೆತ್ತ ಫಿಶ್ ಮೀಲ್ ಫ್ಯಾಕ್ಟರಿಯವರು, ಟ್ಯಾಂಕರ್ ನೀರನ್ನು ಬಳಸಿ ರಸ್ತೆ ಸ್ವಚ್ಛಗೊಳಿಸಿದ್ದಾರೆ. ಸ್ಥಳಕ್ಕೆ ಉಳ್ಳಾಲ ನಗರ ಸಭೆ ಆಯುಕ್ತ ವಿದ್ಯಾ ಕಾಳೆ ಭೇಟಿ ನೀಡಿದ್ದು ಟ್ಯಾಂಕರಲ್ಲಿದ್ದ ತ್ಯಾಜ್ಯವನ್ನ ಸುರಕ್ಷಿತವಾಗಿ ವಿಲೇವಾರಿ ನಡೆಸಲು ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ನಗರಸಭೆ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣಾಧಿಕಾರಿ ಟ್ಯಾಂಕರ್ ಚಾಲಕನನ್ನು ವಿಚಾರಿಸಿ ಎಫ್ ಐಆರ್ ದಾಖಲಿಸಿದ್ದಾರೆ.
ಫಿಶ್ ತ್ಯಾಜ್ಯ ರಸ್ತೆಗೆ ಚೆಲ್ಲಿದ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ತೆರಳಿ ಟ್ಯಾಂಕರ್ ಚಾಲಕನಿಗೆ ಎಚ್ಚರಿಕೆ ಕೊಟ್ಟು ನೊಟೀಸ್ ನೀಡಿದ್ದೇನೆ. ಈ ಘಟನೆ ಗೆ ಸಂಬಂಧಿಸಿ ಪೊಲೀಸ್ ಇಲಾಖೆ ಗೆ ನಗರ ಸಭೆ ವತಿಯಿಂದ ದೂರು ನೀಡಲಾಗಿದೆ.
ವಿದ್ಯಾ ಕಾಳೆ, ಪೌರಾಯುಕ್ತೆ