ಸಿದ್ದರಾಮಯ್ಯ ಸಿದ್ಧಾಂತವಿಲ್ಲದ ನಾಯಕ: ಸಚಿವ ಸುನಿಲ್ ಕುಮಾರ್

ಕಾರ್ಕಳ: ಹಿಂದುತ್ವ, ರಾಷ್ಟ್ರೀಯತೆ ಕುರಿತಾಗಿ ಸಂದರ್ಭಕ್ಕೆ ತಕ್ಕಂತೆ ಮಾತನಾಡುವ ಸಿದ್ದರಾಮಯ್ಯನವರಿಗೆ ಸಿದ್ಧಾಂತವೇ ಇಲ್ಲ. ಸೋಲಿನಿಂದ ಕಂಗೆಟ್ಟಿರುವ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ಹುಡುಕಾಟದಲ್ಲಿ ಪದರಾಡುತ್ತಿರುವ ದುರಂತ ನಾಯಕರಾಗಿದ್ದಾರೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಕಾರ್ಕಳ ಪ್ರವಾಸಿ ಬಂಗಲೆಯಲ್ಲಿ ಪತ್ರಕರ್ತರ ಜತೆ ಮಾತನಾಡಿ, ಕಾಂಗ್ರೆಸ್ ಕೂಡ ಹಿಂದೂಗಳ ಪರವಾಗಿರುವ ಪಕ್ಷ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ರಾಷ್ಟ್ರೀಯತೆ ಹಾಗೂ ಹಿಂದುತ್ವದ ಪ್ರಯೋಗ ಶಾಲೆ. ದೇಶ ಮೊದಲು ಎನ್ನುವುದು ಇಲ್ಲಿನ ಜನರ ರಕ್ತದಲ್ಲೇ ಇದೆ. ಸಿದ್ದರಾಮಯ್ಯನವರು ಕರಾವಳಿ ಜನರಿಗೆ ರಾಷ್ಟ್ರೀಯತೆ ಹಿಂದುತ್ವದ ಪಾಠ ಮಾಡಬೇಕಿಲ್ಲ, ಅವರೊಬ್ಬ ನೆಲೆಯಿಲ್ಲದ ನಾಯಕ ಎಂದು ಸುನಿಲ್ ವ್ಯಂಗ್ಯವಾಡಿದರು.
ಚುನಾವಣೆ ದೃಷ್ಟಿಯಿಂದ ನಾನು ಅಭಿವೃದ್ಧಿ ಕೆಲಸ ಮಾಡಿಲ್ಲ, ಕಾರ್ಕಳವನ್ನು ಸ್ವರ್ಣ ಕಾರ್ಕಳವನ್ನಾಗಿಸಿ ರೂಪಿಸಬೇಕೆಂಬ ಪ್ರಯತ್ನಕ್ಕೆ ಜನರ ಬೆಂಬಲ ಸದಾ ಇರುತ್ತದೆ. ಪರಶುರಾಮ ಥೀಮ್ ಪಾರ್ಕ್ ನನಗೆ ಪ್ರೇರಣೆ, ಪರಶುರಾಮ ಆಸ್ಪತ್ರೆ, ಶಾಲೆಗಳು ನಿರ್ಮಾಣ ಪ್ರಸ್ತಾಪ ಸ್ವಾಗತಾರ್ಹ ,ಅವರವರ ಕಲ್ಪನೆ ತಕ್ಕಂತೆ ಯೋಜನೆ ಹಾಕಿಕೊಳ್ಳಲು ಎಲ್ಲರಿಗೂ ಮುಕ್ತ ಅವಕಾಶವಿದೆ, ಮುಂದಿನ ಚುನಾವಣೆಯಲ್ಲಿ ಜನ ಅಭಿವೃದ್ಧಿಗೆ ಮತ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.