ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಿದ್ಧತೆ: ದಿಲ್ಲಿ ವಿವಿಯ 24 ವಿದ್ಯಾರ್ಥಿಗಳ ಬಂಧನ

ಹೊಸದಿಲ್ಲಿ: 2002ರ ಗೋಧ್ರಾ ಗಲಭೆ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಯೋಜಿಸಿದ್ದಕ್ಕಾಗಿ ದಿಲ್ಲಿ ವಿಶ್ವವಿದ್ಯಾಲಯದ ಕಲಾ ವಿಭಾಗದ 24 ವಿದ್ಯಾರ್ಥಿಗಳನ್ನು ದಿಲ್ಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಭೀಮ್ ಆರ್ಮಿ ಸ್ಟೂಡೆಂಟ್ ಫೆಡರೇಶನ್ ಸಂಘಟನೆಯ ಸದಸ್ಯರು ಎಂದು ಪ್ರಾಥಮಿಕ ವರದಿಗಳು ಹೇಳಿವೆ.
“ಸಂಜೆ 4 ಗಂಟೆಯ ಸುಮಾರಿಗೆ ಸುಮಾರು 20 ಜನರು ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಕಲಾ ವಿಭಾಗದ ಗೇಟ್‌ನ ಹೊರಗೆ ಬಂದರು. ಇದು ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಗೆ ಭಂಗವನ್ನು ಉಂಟುಮಾಡಬಹುದು ಎಂದು ಅವರಿಗೆ ತಿಳಿಸಲಾಯಿತು. ಅಲ್ಲಿಂದ ಅವರು ತೆರಳದಾದಾಗ ಅವರನ್ನು ಬಂಧಿಸಲಾಯಿತು. ಒಟ್ಟು 24 ಜನರನ್ನು ಬಂಧಿಸಲಾಗಿದೆ” ಎಂದು ಉಪ ಪೊಲೀಸ್ ಕಮಿಷನರ್ (ಉತ್ತರ) ಸಾಗರ್ ಸಿಂಗ್ ಕಲ್ಸಿ ಅವರು ಹೇಳಿದ್ದಾರೆ.
ಇದಕ್ಕೂ ಮುನ್ನಾ ದಿನ, ವಿವಿ ಅಧಿಕಾರಿಗಳು ಉದ್ದೇಶಿತ ಪ್ರದರ್ಶನದ ಬಗ್ಗೆ ದಿಲ್ಲಿ ಪೊಲೀಸರಿಗೆ ಪತ್ರ ಬರೆದಿದ್ದರು.
ದಿಲ್ಲಿ ವಿಶ್ವವಿದ್ಯಾಲಯದ ಪ್ರೊಕ್ಟರ್ ರಜನಿ ಅಬ್ಬಿ ಅವರು ʼಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ, ವಿದ್ಯಾರ್ಥಿಗಳು ವಿವಿ ಆಡಳಿತದ ಅನುಮತಿಯನ್ನು ಪಡೆದಿಲ್ಲʼ ಎಂದು ಹೇಳಿದ್ದರು.





