ಸಿಂಧೂ ನದಿ ಜಲ ಒಪ್ಪಂದದಲ್ಲಿ ಬದಲಾವಣೆ ಕೋರಿ ಭಾರತದಿಂದ ಪಾಕ್ ಗೆ ನೋಟಿಸ್

ಹೊಸದಿಲ್ಲಿ, ಜ. 27: 1960ರ ಸಿಂಧೂ ನದಿ ಜಲ(Indus River Water) ಒಪ್ಪಂದದ ಅನುಷ್ಠಾನದಲ್ಲಿ ‘‘ಹೊಂದಾಣಿಕೆ’’ ಮಾಡಿಕೊಳ್ಳಲು ಪಾಕಿಸ್ತಾನ ನಿರಾಕರಿಸುತ್ತಿರುವುದರಿಂದ ಒಪ್ಪಂದಕ್ಕೆ ತಿದ್ದುಪಡಿ ತರುವ ಬಗ್ಗೆ ಪಾಕಿಸ್ತಾನ(Pakistan)ಕ್ಕೆ ಭಾರತವು ಜನವರಿ 25ರಂದು ನೋಟಿಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಒಪ್ಪಂದದ ವಿಧಿಗಳಂತೆ, ಸಿಂಧೂ ನದಿ ನೀರಿನ ಕಮಿಶನರ್ಗಳ ಮೂಲಕ ಇಸ್ಲಾಮಾಬಾದ್ ಗೆ ನೋಟಿಸ್ ಕಳುಹಿಸಲಾಗಿದೆ. ಭಾರತದ ಕಿಶನ್ಗಂಗಾ ಮತ್ತು ರತ್ಲೆ ಹೈಡ್ರೊ ಇಲೆಕ್ಟ್ರಿಕ್ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಿ ಇತ್ಯರ್ಥಪಡಿಸಲು ಕಳೆದ ಐದು ವರ್ಷಗಳಿಂದಲೂ ಪಾಕಿಸ್ತಾನ ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಅಗತ್ಯವಾಗಿದೆ ಎಂದು ಮೂಲಗಳು ಹೇಳಿವೆ.
ಸರಕಾರಗಳ ನಡುವಿನ ಸಂಧಾನಗಳಿಗೆ ಪ್ರವೇಶ ಪಡೆಯಲು ಪಾಕಿಸ್ತಾನಕ್ಕೆ ಸುಲಭವಾಗುವಂತೆ ಹಾಗೂ ಒಪ್ಪಂದದ ಉಲ್ಲಂಘನೆಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುವಂತೆ ಒಪ್ಪಂದದಲ್ಲಿ ತಿದ್ದುಪಡಿಯಾಗಬೇಕೆಂದು ಭಾರತ ಬಯಸಿದೆ. ಈ ಪ್ರಕ್ರಿಯೆಯಲ್ಲಿ, ಕಳೆದ 62 ವರ್ಷಗಳ ಅವಧಿಯಲ್ಲಿ ಕಲಿತ ಪಾಠಗಳನ್ನು ಒಪ್ಪಂದದಲ್ಲಿ ಅಳವಡಿಸಿಕೊಳ್ಳಲೂ ಅವಕಾಶವಿದೆ.
ಒಂಭತ್ತು ವರ್ಷಗಳ ಮಾತುಕತೆಗಳ ಬಳಿಕ, 1960ರಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಸಿಂಧೂ ನದಿ ಜಲ ಒಪ್ಪಂದಕ್ಕೆ ಸಹಿ ಹಾಕಿವೆ. ಹಲವು ನದಿಗಳ ನೀರಿನ ಬಳಕೆಗೆ ಸಂಬಂಧಿಸಿ ಉಭಯ ದೇಶಗಳ ನಡುವಿನ ಸಹಕಾರ ಮತ್ತು ಮಾಹಿತಿ ವಿನಿಮಯಕ್ಕಾಗಿ ಒಪ್ಪಂದದಲ್ಲಿ ವಿಧಿವಿಧಾನಗಳನ್ನು ರೂಪಿಸಲಾಗಿದೆ. ಒಪ್ಪಂದವು ಮೂರು ಪೂರ್ವದ ನದಿಗಳಾದ ಬಿಯಾಸ್, ರಾವಿ ಮತ್ತು ಸಟ್ಲೇಜ್ ನೀರಿನ ಮೇಲಿನ ಹಕ್ಕನ್ನು ಭಾರತಕ್ಕೆ ನೀಡಿದರೆ, ಮೂರು ಪಶ್ಚಿಮದ ನದಿಗಳಾದ ಸಿಂಧೂ, ಚೇನಾಬ್ ಮತ್ತು ಝೀಲಮ್ ನೀರಿನ ಮೇಲಿನ ಹಕ್ಕನ್ನು ಪಾಕಿಸ್ತಾನಕ್ಕೆ ನೀಡುತ್ತದೆ.







