ಪರೀಕ್ಷಾ ಪೆ ಚರ್ಚಾ: ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಯಾವುದೇ ಶಾರ್ಟ್‌ಕಟ್ ಇಲ್ಲ; ಪ್ರಧಾನಿ ಮೋದಿ

ಹೊಸದಿಲ್ಲಿ, ಜ. 27: ಮುಂಬರುವ ಮಂಡಳಿ ಪರೀಕ್ಷೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi)ಶುಕ್ರವಾರ ‘ಪರೀಕ್ಷಾ ಪೆ ಚರ್ಚಾ’ದ 6ನೇ ಆವೃತ್ತಿಯ ಸಂದರ್ಭ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳೊಂದಿಗಿನ ತನ್ನ ವಾರ್ಷಿಕ ಸಂವಾದದ ಸಂದರ್ಭ ವಿದ್ಯಾರ್ಥಿಗಳು ತಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಬೇಕು. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಯಾವುದೇ ಶಾರ್ಟ್ ಕಟ್ ಆರಿಸಿಕೊಳ್ಳಬೇಡಿ ಎಂದು ತಿಳಿಸಿದರು.
ಪಾಲಕರು ತಮ್ಮ ಮಕ್ಕಳಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕೆಂದು ಒತ್ತಡ ಹೇರಬಾರದು ಎಂದು ಅವರು ಸಲಹೆ ನೀಡಿದರು.ಶಿಕ್ಷಣ ಸಚಿವಾಲಯ ಹೊಸದಿಲ್ಲಿಯ ತಾಲ್ಕಾಟೋರೆ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ಆಯೋಜಿಸಿತ್ತು. ಭಾರತದಲ್ಲಿ ಜನರು ಸರಾಸರಿ 6 ಗಂಟೆಗಳನ್ನು ಮೊಬೈಲ್ ನಲ್ಲಿ ಕಳೆಯುತ್ತಿದ್ದಾರೆ. ಇದು ಕಳವಳಕಾರಿ ವಿಷಯವಾಗಿದೆ. ದೇವರು ನಮಗೆ ಅಪಾರ ಸಾಮರ್ಥ್ಯದೊಂದಿಗೆ ಸ್ವತಂತ್ರ ಅಸ್ತಿತ್ವ ಹಾಗೂ ವೈಯುಕ್ತಿಕತೆಯನ್ನು ನೀಡಿರುವಾಗ ನಾವು ಮೊಬೈಲ್ಗಳ ಗುಲಾಮರಾಗುವುದು ಏಕೆ ? ಎಂದು ಅವರು ಪ್ರಶ್ನಿಸಿದರು. ನಮ್ಮ ದೇಶದಲ್ಲಿ ಜನರು ಮೊಬೈಲ್ ನೊಂದಿಗೆ 6 ಗಂಟೆಗಳನ್ನು ಕಳೆಯುವುದು ಅರ್ಥ ರಹಿತವಾದುದುದು.
ವಿದ್ಯಾರ್ಥಿಗಳು ಮೊಬೈಲ್ ಅನ್ನು ಬುದ್ದಿವಂತಿಕೆಯಿಂದ ಬಳಸಬೇಕು ಎಂದು ಅವರು ಕಿವಿ ಮಾತು ಹೇಳಿದರು. ಮೊಬೈಲ್ ಬಳಕೆ ಕಡಿಮೆ ಮಾಡಲು ‘‘ತಂತ್ರಜ್ಞಾನ ಉಪವಾಸ’’ ಕೈಗೊಳ್ಳಿ. ಆಗ ನೀವು ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು. ತಮ್ಮ ಬುದ್ಧಿವಂತಿಕೆ ಕುರಿತು ನಂಬಿಕೆ ಇರಿಸುವಂತೆ ಅವರು ವಿದ್ಯಾರ್ಥಿಗಳಿಗೆ ಸೂಚಿಸಿದರು. ಮೊಬೈಲ್ ಗಳನ್ನು ಅವಲಂಬಿಸಿ ವಿದ್ಯಾರ್ಥಿಗಳು ಮಾಡುವ ಪ್ರಮುಖ ತಪ್ಪಿನ ಬಗ್ಗೆ ಅವರು ಗಮನ ಸೆಳೆದರು.
ಅಲ್ಲದೆ, ಪರೀಕ್ಷೆ ಸಮಯದಲ್ಲಿ ನಕಲು ಮಾಡುವ ಸಮಸ್ಯೆಯನ್ನು ಪ್ರಧಾನಿ ಅವರು ಪ್ರಸ್ತಾವಿಸಿದರು. ಕೆಲವು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಲು ತಮ್ಮ ಸೃಜನಶೀಲತೆಯನ್ನು ಬಳಸುತ್ತಾರೆ. ಆದರೆ, ಅದೇ ವಿದ್ಯಾರ್ಥಿಗಳು ತಮ್ಮ ಸಮಯ ಮತ್ತು ಸೃಜನಶೀಲತೆಯನ್ನು ಉತ್ತಮ ರೀತಿಯಲ್ಲಿ ಬಳಸಿದರೆ ಯಶಸ್ಸಿನ ಎತ್ತರವನ್ನು ಏರುತ್ತಾರೆ ಎಂದು ಮೋದಿ ಹೇಳಿದರು. ತಾಯಿಯಿಂದ ಸಮಯ ನಿರ್ವಹಣೆ ಕಲಿಯಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡಕ್ಕೆ ಮಣಿಯಬಾರದು ಎಂದು ಅವರು ತಿಳಿಸಿದರು. ಸಾಮಾಜಿಕ ಸ್ಥಾನಮಾನಕ್ಕಾಗಿ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಬಾರದು ಎಂದು ಅವರು ಪೋಷಕರಿಗೆ ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ಪ್ರಧಾನಿ ಅವರು ಪೋಷಕರು ಹಾಗೂ ಅಧ್ಯಾಪಕರಿಗೆ ಸೂಚಿಸಿದರು. ಅವರನ್ನು ನಿರ್ಬಂಧಿಸಬಾರದು. ಆದರೆ, ನಡವಳಿಕೆಯಲ್ಲಿ ಏನಾದರೂ ಬದಲಾವಣೆ ಆಗಿದೆಯೇ ಎಂಬ ಬಗ್ಗೆ ಗಮನ ಇರಿಸಿ ಎಂದು ಅವರು ಹೇಳಿದರು.







