ಭಾಷೆಯಲ್ಲಿ ಮೇಲು,ಕೀಳು ಭಾವನೆ ಸಲ್ಲ: ಡಾ.ಮಹಾಬಲೇಶ್ವರ ರಾವ್

ಉಡುಪಿ: ಭಾಷೆಯಲ್ಲಿ ಮೇಲು, ಕೀಳು ಎಂಬ ಭಾವನೆ ಸಲ್ಲ. ಯಾವ ಭಾಷೆಯೂ ಮೇಲಲ್ಲ, ಕೀಳಲ್ಲ. ನೆರೆಹೊರೆಯ ಭಾಷೆಗಳನ್ನು ಕಲಿಯಬೇಕು. ಭಾಷೆಗಳ ನಡುವೆ ಬಾಂಧವ್ಯ ಬೆಳೆಯಬೇಕು ಎಂದು ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ ಆಶ್ರಯದಲ್ಲಿ ಶನಿವಾರ ಮಣಿಪಾಲದ ಸೋನಿಯಾ ಕ್ಲಿನಿಕ್ ಸಭಾಂಗಣದಲ್ಲಿ ಜರಗಿದ ‘ಕನ್ನಡ ಮಾತನಾಡು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನೆರೆಹೊರೆಯವರಿಂದ ಭಾಷೆಯ ಕೊಡುಕೊಳ್ಳುವಿಕೆಯಾಗಬೇಕು. ಭಾಷೆಗಳ ಜೊತೆಗೆ ನೆಲದ ಸಂಸ್ಕೃತಿ ಬಗ್ಗೆಯೂ ಅರಿಯಬೇಕು. ಭಾಷೆ ಒಂದು ಅಂಶವಾಗಿದ್ದು ಸಂಸ್ಕೃತಿಯು ಅದರ ಮೂಲವಾಗಿದೆ. ವ್ಯಾಕರಣದ ಮೂಲಕ ಭಾಷೆಯನ್ನು ಕಲಿಸುವ ಬದಲು ಸಂವಹನ ಮತ್ತು ಸನ್ನಿವೇಶಗಳ ಆಧಾರಿತವಾಗಿ ಭಾಷೆಯನ್ನು ಕಲಿಸುವುದು ಸೂಕ್ತ ಎಂದು ಡಾ.ರಾವ್ ಅಭಿಪ್ರಾಯ ಪಟ್ಟರು.
ಜನಪದ ವಿದ್ವಾಂಸ, ಸಾಹಿತಿ ಡಾ. ಗಣನಾಥ ಎಕ್ಕಾರು ಶುಭ ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಕೇರಳ ಕಲ್ಚರಲ್ ಸೋಶಿಯಲ್ ಸೆಂಟರ್‌ನ ಕಾರ್ಯದರ್ಶಿ ಬಿನೇಶ್ ಹಾಗು ಸದಸ್ಯರಾದ ಮೋಹನ್‌ರಾವ್, ಥಾಮಸ್ ಉಪಸ್ಥಿತರಿದ್ದರು.
ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಹೆಚ್.ಪಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ವಂದಿಸಿ,ರಾಜೇಶ್ ಪಣಿಯಾಡಿ ಕಾರ್ಯಕ್ರಮ ನಿರೂಪಿಸಿದರು.