ದ.ಕ. ಜಿಲ್ಲೆಯಲ್ಲಿ 2022ರಲ್ಲಿ ನಾಪತ್ತೆಯಾದ 62 ಮಕ್ಕಳಲ್ಲಿ 60 ಮಕ್ಕಳು ಪತ್ತೆ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಳೆದ ವರ್ಷ 33 ಬಾಲಕಿ ಯರು ಸೇರಿದಂತೆ 62 ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಪೈಕಿ 60 ಮಕ್ಕಳನ್ನು ಗುರುತಿಸಲಾಗಿದ್ದು, ಇನ್ನೂ ಇಬ್ಬರು ಪತ್ತೆಯಾಗಿಲ್ಲ ಎಂದು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ವರದಿ ಬಹಿರಂಗಪಡಿಸಿದೆ.
2022ರ ಜನವರಿಯಿಂದ 2022ರ ಡಿಸೆಂಬರ್ ತನಕ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ 33 (ಬಾಲಕರು 10, ಬಾಲಕಿಯರು 23), ಜಿಲ್ಲಾ ಪೊಲೀಸ್ ಅಧೀಕ್ಷಕರ ವ್ಯಾಪ್ತಿಯಲ್ಲಿ 29 (ಬಾಲಕ 15 ಮತ್ತು ಬಾಲಕಿಯರು 14) ಮಂದಿ ನಾಪತ್ತೆಯಾಗಿದ್ದಾರೆ. ಇಬ್ಬರು ಬಾಲಕಿಯರು ಇನ್ನೂ ಕೂಡಾ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಎಪ್ರಿಲ್‌ನಿಂದ ಡಿಸೆಂಬರ್ ತನಕ ಮಕ್ಕಳ ಕಲ್ಯಾಣ ಸಮಿತಿ ಮುಂದೆ 241 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಪೊಕ್ಸೊ 67, ಮನೆ ಬಿಟ್ಟು ಹೋಗಿರುವ ಮಕ್ಕಳ ಸಂಖ್ಯೆ 25, ಭಿಕ್ಷಾಟನೆ 7, ಒಪ್ಪಿಸಲ್ಪಟ್ಟ ಅಥವಾ ಪರಿತ್ಯಕ್ತ ಮಗು 4, ಇತರೆ ಪ್ರಕರಣಗಳು 138. ಪ್ರಧಾನ ಬಾಲನ್ಯಾಯ ಮಂಡಳಿ ಮುಂದೆ ಎಪ್ರಿಲ್‌ನಿಂದ ಡಿಸೆಂಬರ್ ತನಕ 81 ಪ್ರಕರಣಗಳು ಬಂದಿವೆ ಹಾಗೂ ಈ ಪೈಕಿ 30 ಪ್ರಕರಣಗಳು ಇತ್ಯರ್ಥಗೊಂಡಿದ್ದು, 51 ಪ್ರಕರಣಗಳು ಇನ್ನೂ ಇತ್ಯರ್ಥಕ್ಕೆ ಬಾಕಿ ಇದೆ ಎಂದು ತಿಳಿದು ಬಂದಿದೆ
ಜಿಲ್ಲೆಯಲ್ಲಿ 93 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ವಿಚಾರಣೆ ವೇಳೆ ಕೈಬಿಟ್ಟ ಪ್ರಕರಣಗಳು 2, ಇನ್ನೂ 91 ಪ್ರಕರಣಗಳು ತನಿಖೆ ಮತ್ತು ವಿಚಾರಣೆ ಹಂತದಲ್ಲಿವೆ.
‘ಉಪಕಾರ್’ ಯೋಜನೆ: ಬಾಲನ್ಯಾಯ ಮಕ್ಕಳ (ಪಾಲನೆ ಮತ್ತು ರಕ್ಷಣೆ) ಕಾಯ್ದೆ-2015ರಡಿ ನೋಂದಾಯಿಸಿರುವ ಮಕ್ಕಳ ಪಾಲನಾ ಸಂಸ್ಥೆಯಲ್ಲಿರುವ 18 ವರ್ಷ ಪೂರ್ಣಗೊಂಡ ಮಕ್ಕಳ ಮುಂದಿನ ಪುನರ್ವಸತಿಗಾಗಿ, ಸಮಾಜದಲ್ಲಿ ಗೌರವಯುತವಾಗಿ ಮತ್ತು ಸ್ವತಂತ್ರವಾಗಿ ಜೀವನ ನಿರ್ವಹಿಸಲು ಅನುಕೂಲವಾಗಲು ಸರಕಾರ ಆರಂಭಿಸಿರುವ ‘ಉಪಕಾರ್’ ಯೋಜನೆಯಲ್ಲಿ ಎಪ್ರಿಲ್ 2021ರಿಂದ ಮಾರ್ಚ್ 2022ರ ತನಕ 34 ಮಂದಿಗೆ 20.40 ಲಕ್ಷ ರೂ. ಬಿಡುಗಡೆಯಾಗಿದೆ.
ಬಾಲಸೇವಾ ಯೋಜನೆ
ಕೋವಿಡ್‌ನಿಂದ ಪೋಷಕರಿಬ್ಬರನ್ನು ಕಳೆದುಕೊಂಡು ವಿಸ್ತೃತ ಕುಟುಂಬದ ಸದಸ್ಯರ ಆರೈಕೆಯಲ್ಲಿರುವ ಮಕ್ಕಳಿಗೆ ಪ್ರತಿ ತಿಂಗಳು 3,500 ರೂ. ಧನಸಹಾಯವನ್ನು ಮಕ್ಕಳ ಸಮಗ್ರ ರಕ್ಷಣೆ ಮತ್ತು ಪಾಲನೆಗಾಗಿ ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಮೇ 1ರಿಂದ ಅಕ್ಟೋಬರ್ ತನಕ 10 ಮಂದಿಗೆ 2,76,500 ರೂ. ಬಿಡುಗಡೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಫಾಝಿಲ್ ಹತ್ಯೆಯಲ್ಲಿ ಶರಣ್ ಪಂಪ್‌ವೆಲ್ ಪಾತ್ರದ ಕುರಿತು ಮರು ತನಿಖೆಯಾಗಲಿ: ಡಿವೈಎಫ್‌ಐ