ಗಾಂಧಿಯನ್ನು ಕೊಂದ ಮನಃಸ್ಥಿತಿ ಮತ್ತು ವರ್ತಮಾನ
ಇಂದು ಗಾಂಧೀಜಿಯ ಹತ್ಯೆಗೆ 75 ವರ್ಷ

ಅಹಿಂಸೆ ಎಂಬ ಅಪ್ರತಿಮ ಶಕ್ತಿಯನ್ನು ಈ ಜಗತ್ತಿಗೆ ಕೊಟ್ಟ ಚೇತನವು ಹಾಗೆ ಕ್ಷುಲ್ಲಕ ಮನಃಸ್ಥಿತಿಯ ದಾಳಿಗೆ ಬಲಿಯಾಗಿ ಹೋದದ್ದು ಈ ಜಗತ್ತಿನ ವ್ಯಂಗ್ಯ. ‘ನನ್ನ ಜೀವನವೇ ನನ್ನ ಸಂದೇಶ’ವೆಂದಿದ್ದ ಮಹಾತ್ಮಾನೆದುರು ಹಿಂಸೆ ತಾಂಡವವಾಡಿತ್ತು. ಅವರು ಇಲ್ಲವಾಗಿರುವ ದೇಶದಲ್ಲಿ ಅದಿನ್ನೂ ಅಟ್ಟಹಾಸಗೈಯುತ್ತಲೇ ಇದೆ.
ಜನವರಿ 30 ಹುತಾತ್ಮರ ದಿನ. ದೇಶಕ್ಕಾಗಿ ಮಡಿದ ಯೋಧರ ಸ್ಮರಣೆ ಮಾಡಲಾಗುವ ಈ ದಿನ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯೂ ಹೌದು.
‘ಶಹೀದ್ ದಿವಸ್’ ಎಂದೂ ಕರೆಯಲ್ಪಡುವ ಹುತಾತ್ಮರ ದಿನವನ್ನು ಮಾತೃಭೂಮಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸ್ವಾತಂತ್ರ ಹೋರಾಟಗಾರರಿಗೆ ಗೌರವ ಸಲ್ಲಿಸಲು ಭಾರತದಲ್ಲಿ ಜನವರಿ 30 ಮತ್ತು ಮಾರ್ಚ್ 23ರಂದು ಆಚರಿಸಲಾಗುತ್ತದೆ.
ಜನವರಿ 30ರಂದು, ಬಿರ್ಲಾ ಹೌಸ್ನಲ್ಲಿರುವ ಗಾಂಧಿ ಸ್ಮತಿಯಲ್ಲಿ 1948ನೇ ಇಸವಿ ಜನವರಿ 30ರಂದು ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಲಾಯಿತು. ಅವರಿಗೆ ಆಗ 78 ವರ್ಷ ವಯಸ್ಸಾಗಿತ್ತು. ಹುತಾತ್ಮರ ದಿನದ ಈ ಸಂದರ್ಭದಲ್ಲಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಕ್ಷಣಾ ಸಚಿವರು, ಭಾರತೀಯ ಸಶಸ್ತ್ರ ಪಡೆಗಳ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಮತ್ತು ಮೂವರು ಸೇನಾ ಮುಖ್ಯಸ್ಥರು ರಾಜ್ ಘಾಟ್ ಸ್ಮಾರಕದ ಸಮಾಧಿ ಬಳಿ ಸೇರುತ್ತಾರೆ.
ಮಾರ್ಚ್ 23ರಂದು, ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ ರಾಗಿರುವ ಭಗತ್ ಸಿಂಗ್, ಶಿವರಾಮ ರಾಜಗುರು ಮತ್ತು ಸುಖದೇವ್ಥಾಪರ್ ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ವಾತಂತ್ರಕ್ಕಾಗಿ ಪ್ರಾಣತೆತ್ತ ವೀರ ಪುತ್ರರಿಗೆ ಜನರು ಗೌರವ ಸಲ್ಲಿಸಲು ಆ ದಿನವನ್ನೂ ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ.
ಮಹಾತ್ಮಾ ಗಾಂಧಿಯವರು ನಾಥೂರಾಮ್ ಗೋಡ್ಸೆಯಿಂದ ಹತ್ಯೆಗೀಡಾದರು. ಗಾಂಧಿ ವಸಾಹತುಶಾಹಿಯನ್ನು ವಿರೋಧಿಸುತ್ತಿದ್ದ ರಾಷ್ಟ್ರೀಯತಾವಾದಿಯಾಗಿದ್ದರು. ಬ್ರಿಟಿಷ್ ಆಳ್ವಿಕೆಯಿಂದ ಭಾರತ ವನ್ನು ಮುಕ್ತಗೊಳಿಸಲು ಅಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸಿ ದರು. ಅಲ್ಲದೆ ಪ್ರಪಂಚದಾದ್ಯಂತ ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ ಕ್ಕಾಗಿ ವಿವಿಧ ಚಳವಳಿಗಳಗೆ ಪ್ರೇರಕ ಶಕ್ತಿಯಾಗಿದ್ದರು.
ಅಂಥ ಗಾಂಧಿ ತನ್ನದೇ ನೆಲದಲ್ಲಿ ಹತ್ಯೆಗೀಡಾದರು. ಎಲ್ಲರನ್ನೂ ಒಳಗೊಳ್ಳಬೇಕೆಂಬ ಅವರ ನಿಲುವು ಕೆಲವರಿಗೆ ಆಗಿಬರಲಿಲ್ಲ. ಸಾಮರಸ್ಯಕ್ಕೆ ಶ್ರಮಿಸಿದ ಅವರ ಹೋರಾಟವನ್ನು ದ್ವೇಷಿಸುವವರು ಹುಟ್ಟಿಕೊಂಡರು. ಗಾಂಧಿಯನ್ನು ಕೊಂದವನನ್ನು ದೇಶಭಕ್ತನೆನ್ನ ಲಾಗುತ್ತದೆ. ಆತನನ್ನು ಜಯಶಾಲಿಯಾಗಿ ಬಾ ಎಂದು ಹರಸಿ ಕಳಿಸಿದ್ದವರನ್ನು ಇಂದು ಪೂಜಿಸಲಾಗುತ್ತದೆ. ಗಾಂಧಿ ಹತ್ಯೆಯನ್ನು ಬಹಿರಂಗವಾಗಿಯೇ ಸಮರ್ಥಿಸಿಕೊಳ್ಳಲಾಗುತ್ತದೆ. ಗಾಂಧಿ ಹತ್ಯೆಯನ್ನು ಮರುಸೃಷ್ಟಿಸಿ ಆನಂದಿಸುವವರನ್ನೂ ನೋಡುತ್ತಿ ದ್ದೇವೆ. ಗಾಂಧಿತತ್ವಗಳನ್ನೂ ಕೊಲ್ಲಲಾಗುತ್ತಿದೆ.
ಏಳು ದಶಕಗಳ ಹಿಂದಿನ ಗೋಡ್ಸೆ ಮನಃಸ್ಥಿತಿ ಎಂಥದಿತ್ತು ಎಂಬು ದನ್ನು, ಗಾಂಧಿ ಹತ್ಯೆಯ ನಂತರ ನಡೆದ ಕೋರ್ಟ್ ವಿಚಾರಣೆಯಲ್ಲಿ ‘ನಾನೇಕೆ ಗಾಂಧಿಯನ್ನು ಹತ್ಯೆ ಮಾಡಿದೆ’ ಎಂದು ಗೋಡ್ಸೆ ತನ್ನ ಪರ ಮಂಡಿಸಿದ್ದ ವಾದದಲ್ಲಿ ಕಾಣಬಹುದು. ಗಾಂಧೀಜಿ ವಿರುದ್ಧದ ಆತನ ತಕರಾರುಗಳು ಹೀಗಿದ್ದವು:
1.ಗಾಂಧೀಜಿಯಿಂದಾಗಿ ದೇಶ ವಿಭಜನೆಯಾಗಿ ಪಾಕಿಸ್ತಾನ ನಿರ್ಮಾಣವಾಯಿತು.
2.ದೇಶದ ಮೂರನೇ ಒಂದು ಭಾಗ ಆಗಸ್ಟ್ 15, 1947ರಂದು ವಿದೇಶವಾಗಿ ಹೋಯಿತು. ಅದಕ್ಕೆ ಕಾರಣ ಗಾಂಧಿ.
3.ದೇಶವೇ ಸಂಕಷ್ಟದಲ್ಲಿದ್ದಾಗ ಗಾಂಧೀಜಿ ಪಾಕಿಸ್ತಾನಕ್ಕೆ 55 ಕೋಟಿ ರೂ. ಪರಿಹಾರ ಕೊಡಿ ಎಂದು ಉಪವಾಸಕ್ಕೆ ಕುಳಿತಿದ್ದರು, ಇದು ಸರಿಯಲ್ಲ.
4.ಗಾಂಧೀಜಿಯ ಮುಸ್ಲಿಮ್ ಓಲೈಕೆಯಿಂದಾಗಿಯೇ ದೇಶ ವಿಭಜನೆಯಾಗಿದ್ದು.
5.ದೇಶ ವಿಭಜನೆಯಾಗಿ ಗಡಿಯಲ್ಲಿ ಹಿಂದೂಗಳ ಮಾರಣ ಹೋಮವಾಗುತ್ತಿದ್ದರೂ ಗಾಂಧಿ ವೌನ ವಹಿಸಿದ್ದರು.
6.ಪಾಕಿಸ್ತಾನದಿಂದ ಬಂದ ಹಿಂದೂ ನಿರಾಶ್ರಿತರಿಂದ ತುಂಬಿ ಹೋಗಿದ್ದ ಮಸೀದಿ ಖಾಲಿ ಮಾಡಿ ಮುಸ್ಲಿಮರಿಗೆ ಜಾಗ ಕೊಡಿ ಎಂದು ಗಾಂಧಿ ಉಪವಾಸ ಕುಳಿತಿದ್ದರು.
7.ದೇಶದಲ್ಲೇ ಉಳಿದುಕೊಂಡ ಮುಸ್ಲಿಮರಿಗೆ ಆಶ್ರಯ ನೀಡಬೇಕು ಎಂದು ಗಾಂಧಿ ಒತ್ತಾಯಿಸಿದರು.
8.ಪಾಕಿಸ್ತಾನದಿಂದ ಭಾರತಕ್ಕೆ ಬಂದ ನಿರಾಶ್ರಿತ ಹಿಂದೂಗಳ ಬಗ್ಗೆ ಗಾಂಧಿ ಕಿಂಚಿತ್ತೂ ಕರುಣೆ ತೋರಲಿಲ್ಲ.
9.ಗಾಂಧಿಯನ್ನು ರಾಷ್ಟ್ರಪಿತ ಎನ್ನುವುದಾದರೆ ಅವರು ಆ ಸ್ಥಾನವನ್ನು ಸರಿಯಾಗಿ ನಿಭಾಯಿಸಲಿಲ್ಲ. ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ.
10.ಗಾಂಧಿ ಇಲ್ಲದ ಭಾರತ ಶಕ್ತಿಶಾಲಿಯಾಗುತ್ತದೆ ಎಂಬ ಕಾರಣಕ್ಕೆ ಗಾಂಧಿಯನ್ನು ಕೊಂದೆ.
ಹಿಂದೂಗಳ ಪರವಾಗಿ ಗಾಂಧಿ ನಿಲ್ಲಲಿಲ್ಲ ಎಂಬ ತಕರಾರು ಹೊಂದಿದ್ದ ಅವನ ಕಣ್ಣಿಗೆ ದೇಶಾದ್ಯಂತ ಹರಡಿದ್ದ ಕೋಮುದಳ್ಳುರಿ ಯನ್ನು ನಂದಿಸಲು ಗಾಂಧಿ ಶ್ರಮಿಸಿದ್ದು ಕಾಣಿಸಲೇ ಇಲ್ಲ. ಮನುಷ್ಯರು ಸಾಯಬಾರದು ಎಂದುಕೊಂಡ ಮಹಾತ್ಮಾನ ದೃಷ್ಟಿ ಈ ದೇಶಕ್ಕೆ ಅರ್ಥವಾಗದೇ ಹೋಯಿತು. ಹಾಗೆ ಗಾಂಧಿ ಅರ್ಥವಾಗದ ಮನಃಸ್ಥಿತಿಯು ಎಲ್ಲವನ್ನೂ ಧರ್ಮದ ನೆಲೆಯಲ್ಲಿ ತಂದಿಡುತ್ತಿದೆ. ಧರ್ಮವನ್ನು ರಾಜಕೀಯದಲ್ಲಿ ಬೆರೆಸಿ ವಿಷವನ್ನು ಬಿತ್ತುತ್ತಿದೆ. ದ್ವೇಷವು ರಾಜಕಾರಣದ್ದೇ ಭಾಗವಾಗಿ ವಿಜೃಂಭಿಸುತ್ತಿರುವ ಕರಾಳ ವಿಪರ್ಯಾಸ ಇಂದಿನ ವಾಸ್ತವವಾಗಿದೆ. ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಹೇಳುವಂತೆ, ಉಪಖಂಡದ ವಿಭಜನೆಗೆ ಮುಂಚಿತವಾಗಿ ಮತ್ತು ನಂತರ ರಕ್ತಸಿಕ್ತ ದಂಗೆಗಳ ಸರಣಿಯೇ ನಡೆಯಿತು. ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರು ಬಲಿಪಶುಗಳೂ ಆಗಿದ್ದ ಮತ್ತು ಅಪರಾಧಿಗಳೂ ಆಗಿದ್ದ ದಂಗೆಗಳು ಅವಾಗಿದ್ದವು. ಗಾಂಧಿ, ಹಿಂಸಾಚಾರವನ್ನು ತಡೆಯಲು ವೀರೋಚಿತವಾಗಿ ಕೆಲಸ ಮಾಡುತ್ತಿದ್ದರು. ಸೆಪ್ಟಂಬರ್ ನಲ್ಲಿ ಕೋಲ್ಕತಾವನ್ನು ಶಾಂತಗೊಳಿಸುವಲ್ಲಿ ಯಶಸ್ಸನ್ನು ಸಾಧಿಸಿದ ನಂತರ, ಅವರು ದಿಲ್ಲಿಗೆ ತೆರಳಿದರು. ಅಲ್ಲಿ ಪರಿಸ್ಥಿತಿಯು ಆತಂಕಕಾರಿ ಯಾಗಿತ್ತು. ವಿಭಜನೆಯಿಂದ ನಿರಾಶ್ರಿತರಾದ ಹಿಂದೂ ಮತ್ತು ಸಿಖ್ ಸಮುದಾಯದವರು ದಿಲ್ಲಿಯಲ್ಲಿ ಇನ್ನೂ ವಾಸಿಸುತ್ತಿದ್ದ ಮುಸ್ಲಿಮರ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದ್ದರು. ಉತ್ತರ ಭಾರತದಲ್ಲಿ ಮುಸ್ಲಿಮರ ಪಾಲಿಗೆ ಭದ್ರತೆ ಒದಗಿಸುವುದು ಸಾಧ್ಯವಾದರೆ, ಗಡಿಯಾಚೆ ಪಾಕಿಸ್ತಾನದಲ್ಲಿ ಇನ್ನೂ ಉಳಿದಿರುವ ಹಿಂದೂಗಳು ಮತ್ತು ಸಿಖ್ಖರ ಸುರಕ್ಷತೆ ಸಾಧ್ಯವಾಗುತ್ತದೆ ಎಂಬುದು ಗಾಂಧಿಯ ಆಶಯವಾಗಿತ್ತು.
ಆದರೆ ಇದಾವುದೂ ಗೋಡ್ಸೆ ಮನಃಸ್ಥಿತಿಗಳಿಗೆ ಅರ್ಥವಾಗದೇ ಹೋಯಿತು. ಅಷ್ಟು ಮಟ್ಟಿನ ಸಂಕುಚಿತ ದೃಷ್ಟಿ ಒಂದು ದೊಡ್ಡ ಅನಾಹುತವನ್ನೇ ಎಸಗಿತ್ತು. ಕಡೆಗೂ ಅವರು ಹಂತಕನ ಗುಂಡಿಗೆ ಬಲಿಯಾಗಿ ಹೋದದ್ದು ಗಲಭೆಗ್ರಸ್ತ ದಿಲ್ಲಿಯಲ್ಲಿ ಶಾಂತಿ ಮರಳಿಸಲು ಹೋರಾಡುತ್ತಿದ್ದಾಗಲೇ.
ಮತ್ತೆ ಮತ್ತೆ ಅವರ ಹತ್ಯೆಯ ಯತ್ನಗಳು ನಡೆದವು. ಬಹುಶಃ ಅವೆಲ್ಲವುಗಳ ಹಿಂದೆ ಇದ್ದಿದ್ದು ಅವು ಹಿಂದೂ ಸಮಾಜದಲ್ಲಿನ ಅಸ್ಪಶ್ಯತೆಯ ವಿರುದ್ಧ ಮತ್ತಿತರ ವೌಢ್ಯಗಳ ವಿರುದ್ಧ ಅವರು ಜನ ಜಾಗೃತಿಯಲ್ಲಿ ತೊಡಗಿದ್ದರೆಂಬ ಕಾರಣಕ್ಕೆ, ದಲಿತರ ಪರವಾಗಿ ನಿಂತ ರೆಂಬ ಕಾರಣಕ್ಕೆ ಎಂಬುದನ್ನು ಇತಿಹಾಸವೇ ಸ್ಪಷ್ಟಪಡಿಸಿದೆ. ದೇಶ ವಿಭಜನೆಗೆ ಮೊದಲೇ, ಮುಸ್ಲಿಮ್ ಪಕ್ಷಪಾತಿಯೆಂಬ ಆಕ್ಷೇಪಕ್ಕೆ ಒಳಗಾಗುವ ಮೊದಲೇ ಅವರ ಹತ್ಯೆಗೆ ಅನೇಕ ಸಲ ಯತ್ನಗಳು ನಡೆದಿದ್ದವು. ಅವರ ವಿರುದ್ಧ ಕತ್ತಿ ಮಸೆಯುತ್ತಿದ್ದವರು, ಅವರನ್ನು ಆಗಲೇ ಹಿಂದೂ ದ್ವೇಷಿ ಎಂಬಂತೆ ಅರ್ಥೈಸಿದ್ದರು ಎಂಬುದು ಸ್ಪಷ್ಟ.
ಶಾಂತಿಯ ಪಾಠ ಹೇಳಿದ್ದ, ಅಹಿಂಸೆ ಎಂಬ ಅಪ್ರತಿಮ ಶಕ್ತಿಯನ್ನು ಈ ಜಗತ್ತಿಗೆ ಕೊಟ್ಟ ಚೇತನವು ಹಾಗೆ ಕ್ಷುಲ್ಲಕ ಮನಃಸ್ಥಿತಿಯ ದಾಳಿಗೆ ಬಲಿಯಾಗಿ ಹೋದದ್ದು ಈ ಜಗತ್ತಿನ ವ್ಯಂಗ್ಯ. ನನ್ನ ಜೀವನವೇನನ್ನ ಸಂದೇಶವೆಂದಿದ್ದ ಮಹಾತ್ಮಾನೆದುರು ಹಿಂಸೆ ತಾಂಡವವಾಡಿತ್ತು. ಅವರು ಇಲ್ಲವಾಗಿರುವ ದೇಶದಲ್ಲಿ ಅದಿನ್ನೂ ಅಟ್ಟಹಾಸಗೈಯುತ್ತಲೇ ಇದೆ. ಮಹಾತ್ಮಾರ ದಿನವನ್ನು ಒಂದು ದಿನ ಆಚರಿಸುವ ಶಾಸ್ತ್ರ ನಡೆಯುತ್ತದೆ. ಆದರೆ ದೇಶದ ತುಂಬ ಪ್ರತಿನಿತ್ಯವೆಂಬಂತೆ ನಡೆಯುತ್ತಿ ರುವುದು ಹಿಂಸೆಯದ್ದೇ ಆಟ.







