ಕುಂದಾಪುರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಕುಂದಾಪುರ: ಶಾಲೆಗಳಲ್ಲಿನ ಕಲಿಕೆಯ ಹಬ್ಬದ ವಾತಾವರಣವು ಪ್ರತಿಯೊಬ್ಬ ವಿದ್ಯಾರ್ಥಿಗಳ ಮನೆ-ಮನದಲ್ಲೂ ಹಬ್ಬವಾಗಬೇಕು. ಈ ಹಬ್ಬ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸುವಂತಾಗಿದೆ ಎಂದು ಉಡುಪಿ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ವಿ.ಡಿ. ಮೊಗೇರ ಹೇಳಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಶ್ರಯದಲ್ಲಿ ಹೊಸ ಬಸ್ ನಿಲ್ದಾಣ ಬಳಿಯಲ್ಲಿರುವ ಕುಂದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಕುಂದಾಪುರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುರಸಭೆ ಸದಸ್ಯೆ ಪ್ರಭಾವತಿ ಶೆಟ್ಟಿ ಮಾತ ನಾಡಿ, ಕಲಿಕಾ ಹಬ್ಬವು ವಿನೂತನ ಕಾರ್ಯಾಕ್ರಮವಾಗಿದ್ದು, ಮಕ್ಕಳಲ್ಲಿ ಹೊಸ ಉತ್ಸಾಹವನ್ನು ತಂದುಕೊಟ್ಟಿದ್ದು ಇದು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ಕಾಂತರಾಜು ಮಾತನಾಡಿದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಣಾಧಿಕಾರಿ ನಾಗರಾಜು, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಅಶೋಕ್ ನಾಯ್ಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಶೆಟ್ಟಿ, ಬೋರ್ಡ್ ಹೈಸ್ಕೂಲ್ ಉಪಪ್ರಾಂಶುಪಾಲ ಕಿರಣ್ ಹೆಗ್ಡೆ, ಕಲಿಕಾ ಹಬ್ಬದ ತಾಲೂಕು ನೋಡಲ್ ಅಧಿಕಾರಿ ಸಂತೋಷ್ ಶೆಟ್ಟಿ, ಶಾಲಾ ಮುಖ್ಯೋ ಪಾಧ್ಯಾಯ ರಾಘವೇಂದ್ರ ಉಪಾಧ್ಯಾಯ, ಶಿಕ್ಷಣ ಸಂಯೋಜಕ ಶೇಖರ್ ಉಪಸ್ಥಿತರಿದ್ದರು.
ಕಲಿಕಾ ಹಬ್ಬದ ರಾಜ್ಯ ಸಂಪನ್ಮೂಲ ವ್ಯಕ್ತಿ ಉದಯ ಗಾಂವ್ಕರ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಿಆರ್ಪಿ ಸುಮಿತಾ ಬಾನು ಸ್ವಾಗತಿಸಿ, ಶಿಕ್ಷಕಿ ಸುಮನಾ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಬೋರ್ಡ್ ಹೈಸ್ಕೂಲ್, ಚಿಕ್ಕನ್ಸಾಲ್ ಶಾಲೆ, ಮದ್ದುಗುಡ್ಡೆ ಶಾಲೆ ಹಾಗೂ ಕುಂದಾಪುರ ಸರಕಾರಿ ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಂದ ಸಾಂಪ್ರದಾಯಿಕ ಶೈಲಿಯ ಉಡುಗೆ ತೊಟ್ಟು ಆಕರ್ಷಕ ಮೆರವಣಿಗೆ ಕುಂದಾಪುರದ ನಗರದಲ್ಲಿ ಸಂಚರಿಸಿ, ಶಾಲೆಯಲ್ಲಿ ಸಮಾಪನಗೊಂಡಿತು.