ಫೆ.19ರವರೆಗೆ ಸ್ಪರ್ಶ ಕುಷ್ಟರೋಗ ಜಾಗೃತಿ ಅಭಿಯಾನ: ಸಿಇಓ ಪ್ರಸನ್ನ ಹೆಚ್

ಉಡುಪಿ: ಕುಷ್ಟ ರೋಗ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸ್ಪರ್ಶ ಕುಷ್ಟರೋಗ ಜಾಗೃತಿ ಅಭಿಯಾನವನ್ನು ಜಿಲ್ಲೆಯಾದ್ಯಂತ ಇಂದಿನಿಂದ ಫೆಬ್ರವರಿ 13ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಹೇಳಿದ್ದಾರೆ.
ಮಣಿಪಾಲದ ತಮ್ಮ ಕಚೇರಿಯಲ್ಲಿ ಇಂದು ಕರೆದ ಸ್ಪರ್ಶ ಕುಷ್ಟ ಅರಿವು ಆಂದೋಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜನಸಾಮಾನ್ಯರು ಎಲ್ಲಾ ತರಹದ ರೋಗಗಳ ಬಗ್ಗೆ ಆರೋಗ್ಯ ಶಿಕ್ಷಣ ಹೊಂದಿದಾಗ ಮಾತ್ರ ಅವರುಗಳು ರೋಗಗಳ ಬಗ್ಗೆ ಮುಂಜಾಗ್ರತೆ ಹಾಗೂ ಒಂದೊಮ್ಮೆ ಯಾವುದೇ ರೋಗಲಕ್ಷಣಗಳು ಕಂಡುಬಂದಾಗ ತತ್ಕ್ಷಣದಲ್ಲಿ ಪರೀಕ್ಷೆಗೆ ಒಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ ಎಂದರು.
ಕುಷ್ಟ ರೋಗವು ಸಂಪೂರ್ಣ ಗುಣಮುಖವಾಗುವ ರೋಗವಾಗಿದ್ದು, ಇದಕ್ಕೆ ರೋಗದ ಪ್ರಥಮ ಹಂತದಲ್ಲಿಯೇ ಗುರುತಿಸಿ, ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಈ ರೋಗಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ ಎಂದರು.
ವ್ಯಕ್ತಿಯ ದೇಹದ ಮೇಲೆ ಯಾವುದೇ ಭಾಗದಲ್ಲಿ ತಿಳಿ ಬಿಳಿ ಅಥವಾ ತಾಮ್ರವರ್ಣದ ಸ್ಪರ್ಶಜ್ಞಾನವಿಲ್ಲದ ಮಚ್ಚೆ ಕಂಡುಬಂದಲ್ಲಿ ಆರೋಗ್ಯ ಸಹಾಯಕರು ಅಥವಾ ಆಶಾ ಕಾರ್ಯಕರ್ತರನ್ನು ಸಂಪರ್ಕಿಸಿ ಅಥವಾ ನೇರವಾಗಿ ಸಮೀಪದ ಆರೋಗ್ಯ ಕೇಂದ್ರಗಳಿಗೆ ಹೋಗಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
ಜಿಲ್ಲೆಯಾದ್ಯಂತ ಜನವರಿ 30ರಿಂದ ಫೆಬ್ರವರಿ 13ರವರೆಗೆ ಸ್ಪರ್ಶ ಕುಷ್ಟ ರೋಗ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಪ್ರತೀ ಮನೆಗಳಿಗೂ ಭೇಟಿ ನೀಡಿ, ಕುಷ್ಟ ರೋಗದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.
ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ವಿಶೇಷ ಗ್ರಾಮಸಭೆಗಳಲ್ಲಿ, ಶಾಲಾ-ಕಾಲೇಜು, ವಿದ್ಯಾರ್ಥಿ ನಿಲಯ ಸೇರಿದಂತೆ ಸಾರ್ವಜನಿಕರ ಸ್ಥಳಗಳು, ಸಾಮಾಜಿಕ ಜಾಲತಾಣಗಳು ಹಾಗೂ ಮೊಬೈಲ್ ಸಂದೇಶಗಳ ಮೂಲಕ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕುಷ್ಟರೋಗ ಕುರಿತು ಜಾಗೃತಿ ಮೂಡಿಸುವ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಕುಷ್ಟರೋಗ ನಿಯಂತ್ರಣ ಅಧಿಕಾರಿ ಡಾ. ಲತಾ, ಸಮಾಜಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಡ್ಲೂರು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಹಾಗೂ ಇತರರು ಉಪಸ್ಥಿತರಿದ್ದರು.