ಮುಲಾಯಂಗೆ ನೀಡಿದ ಮರಣೋತ್ತರ ಪದ್ಮಪ್ರಶಸ್ತಿ ಹಿಂಪಡೆಯಲು ಪ್ರಮೋದ್ ಮುತಾಲಿಕ್ ಆಗ್ರಹ
ಮುಲಾಯಂ ಸಿಂಗ್ ಧರ್ಮ ವಿರೋಧಿ, ದೇಶದ್ರೋಹಿ ಎಂದ ಶ್ರೀರಾಮ ಸೇನೆ ಮುಖಂಡ

ಉಡುಪಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರಿಗೆ ಕೇಂದ್ರ ಸರಕಾರ ಇತ್ತೀಚೆಗೆ ಮರಣೋತ್ತರವಾಗಿ ಪದ್ಮವಿಭೂಷಣಯನ್ನು ಪ್ರಶಸ್ತಿ ಘೋಷಿಸುವ ಮೂಲಕ ಅತ್ಯಂತ ಕೆಟ್ಟ ಹಾಗೂ ಹೇಯ ಪರಂಪರೆಯನ್ನು ಹಾಕಿಕೊಟ್ಟಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಕೇಂದ್ರ ಪ್ರಶಸ್ತಿ ಸಮಿತಿ ಮುಲಾಯಂ ಸಿಂಗ್ ಅವರಿಗೆ ಮರಣೋತ್ತರವಾಗಿ ನೀಡಲಾದ ಪದ್ಮವಿಭೂಷಣ ಪ್ರಶಸ್ತಿಯನ್ನು ತಕ್ಷಣ ಹಿಂಪಡೆದುಕೊಳ್ಳಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಂಗಳವಾರ ವಿಡಿಯೋ ಸಂದೇಶ ಒಂದನ್ನು ನೀಡಿರುವ ಪ್ರಮೋದ್ ಮುತಾಲಿಕ್, ಮುಲಾಯಂ ಸಿಂಗ್ 1989-91ರ ಅವಧಿಯಲ್ಲಿ ಅಯೋಧ್ಯೆ ಶ್ರೀರಾಮ ಕರಸೇವಕರು ಹಾಗೂ ಶಾಂತಿಯುತ ಪ್ರತಿಭಟನೆಗಾಗಿ ಅಯೋಧ್ಯೆಗೆ ಬಂದಿದ್ದ ಶ್ರೀರಾಮ ಭಕ್ತರ ಮೇಲೆ ಗುಂಡು ಹಾರಿಸಿದ ಕ್ರೂರಿ, ರಾಮ ವಿರೋಧಿ ಹಾಗೂ ಧರ್ಮ ವಿರೋಧಿ ಮಾತ್ರವಲ್ಲ ದೇಶದ್ರೋಹಿಯೂ ಆಗಿದ್ದಾರೆ ಎಂದವರು ಆರೋಪಿಸಿದರು.
ಅಂಥ ರಾಮವಿರೋಧಿಗೆ, ಅಯೋಧ್ಯೆಯಲ್ಲೇ ರಾಮಚಂದ್ರರ ಜನ್ಮಸ್ಥಾನದಲ್ಲಿ ಗುಂಡುಹಾರಿಸಿದ, ಲಾಠಿ ಚಾರ್ಜ್ ಮಾಡಿದ, ಬಂಧಿಸಿದ ಒಬ್ಬ ಮಾಜಿ ಮುಖ್ಯಮಂತ್ರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವುದೆಂದರೆ ಆ ಪ್ರಶಸ್ತಿಗೇ ಕಳಂಕ ತಂದಂತೆ. ಮಾತ್ರವಲ್ಲ ಅತ್ಯಂತ ಶ್ರೇಷ್ಠ ಪ್ರಶಸ್ತಿಗೆ ಇದೊಂದು ಕಪ್ಪುಚುಕ್ಕೆ ಎಂದು ಮುತಾಲಿಕ್ ಹೇಳಿದ್ದಾರೆ.
ಪ್ರತಿಷ್ಠಿತ ಪ್ರಶಸ್ತಿಗೆ ಮುಲಾಯಂ ಅವರನ್ನು ಆಯ್ಕೆ ಮಾಡಿದ ಪ್ರಶಸ್ತಿ ಆಯ್ಕೆ ಸಮಿತಿಗೆ ಧಿಕ್ಕಾರ ಹೇಳುವುದಾಗಿ ತಿಳಿಸಿದ ಮುತಾಲಿಕ್, ಸಮಿತಿ ಕೂಡಲೇ ಮುಲಾಯಂಗೆ ನೀಡಿರುವ ಪದ್ಮವಿಭೂಷಣ ಪ್ರಶಸ್ತಿಯನ್ನು ವಾಪಾಸು ಪಡೆಯಬೇಕು. ಇಲ್ಲದಿದ್ದರೆ ಪ್ರಶಸ್ತಿಗೆ ಅತ್ಯಂತ ದೊಡ್ಡ ಕಳಂಕ ಎಂದು ಮುತಾಲಿಕ್, ಇಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಜೈಲಿಗೆ ತಳ್ಳಲು ಯತ್ನಿಸಿದ, ಎನ್ಕೌಂಟರ್ ಮಾಡಲು ಹೊರಟ, ಸಂಸತ್‌ಭವನದಲ್ಲಿ ಕಣ್ಣೀರು ಹಾಕಿಸಿದ ವ್ಯಕ್ತಿಗೆ ಪದ್ಮವಿಭೂಷಣ ನೀಡಿರುವುದು ಅಕ್ಷಮ್ಯ ಅಪರಾಧ. ಇದನ್ನು ಒಪ್ಪಲಾಗದು, ಖಂಡಿಸುತಿದ್ದೇವೆ. ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಪುನರುಚ್ಚರಿಸಿದ್ದಾರೆ.







