ರಾಜ್ಯ ರಾಜಕಾರಣಕ್ಕೆ ಸುಮಲತಾ ಅಂಬರೀಶ್: ಬೆಂಬಲಿಗರ ಸಭೆಯಲ್ಲಿ ನಿರ್ಣಯ
ಯಾವ ಪಕ್ಷದಿಂದ ಸ್ಪರ್ಧೆ?

ಮಂಡ್ಯ, ಜ.31: ಸಂಸದೆ ಸುಮಲತಾ ಅಂಬರೀಶ್ ಅವರು ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಬರಬೇಕು ಎಂದು ನಗರದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಮಂಗಳವಾರ ನಡೆದ ಬೆಂಬಲಿಗರ ಸಭೆ ಒತ್ತಾಯಿಸಿದೆ. ಆದರೆ, ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬ ವಿಚಾರದಲ್ಲಿ ಸಭೆಯಲ್ಲಿ ಒಮ್ಮತ ಬರಲಿಲ್ಲ.
ಸುಮಾರು ನೂರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಅವರಲ್ಲಿ ಬಹುತೇಕ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಎರಡು ಗಂಟೆ ನಡೆದ ಸಭೆಯಲ್ಲಿ ಕೆಲವರು ಕಾಂಗ್ರೆಸ್‍ನಿಂದ ಸ್ಪರ್ಧಿಸುವಂತೆ, ಮತ್ತೆ ಕೆಲಸವರು ಬಿಜೆಪಿಯಿಂದ ಸ್ಪರ್ಧಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅಂತಿಮವಾಗಿ ಸುಮಲತಾ ಅಂಬರೀಶ್ ಅವರು ಮುಂಬರಲಿವ ಚುನಾವಣೆಯಲ್ಲಿ ಸ್ಪರ್ಧಿಸಿ ರಾಜಕಾರಣಕ್ಕೆ ಬರಬೇಕು ಮತ್ತು ಅವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಬೆಂಬಲಿಸುತ್ತೇವೆಂದು ಸಭೆ ನಿರ್ಣಯ ಕೈಗೊಂಡಿತು. ಇದಲ್ಲದೆ, ಸುಮಲತಾ ಅವರ ಬಗ್ಗೆ ಏಕವಚನ ಪ್ರಯೋಗ ಮಾಡಿರುವ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ವಿರುದ್ಧ ಪ್ರತಿಭಟನೆ ಮಾಡಲೂ ತೀರ್ಮಾನಿಸಲಾಯಿತು.
ಸಭೆಯಲ್ಲಿ ಬೆಂಬಲಿಗರಾದ ಜಿಪಂ ಮಾಜಿ ಅಧ್ಯಕ್ಷ ಬಿ.ವಿವೇಕಾನಂದ, ಜಿಪಂ ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು, ಸುಮಲತಾ ಅವರ ಆಪ್ತರಾದ ಹನಕೆರೆ ಶಶಿಕುಮಾರ್, ಬೇಲೂರು ಸೋಮಶೇಖರ್, ಹಾಲಹಳ್ಳಿ ಅರವಿಂದ್, ಜಿ.ಸಿ.ಆನಂದ್, ಕೀಲಾರ ವಿಜಯ್ ರಾಧಾಕೃಷ್ಣ, ಎನ್.ಎಸ್.ಮಂಜುನಾಥ್, ಇತರ ಮುಖಂಡರ ನೇತೃತ್ವದಲ್ಲಿ ಸಭೆ ನಡೆಯಿತು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧಿಸಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್‍ಕುಮಾರ್‍ಸ್ವಾಮಿ ವಿರುದ್ಧ ಜಯಗಳಿಸಿದ್ದರು. ಆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಸುಮಲತಾ ಅವರಿಗೆ ಬೆಂಬಲ ನೀಡಿದ್ದರು.
ಇದುವರೆಗೂ ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದ ಸುಮಲತಾ ಅವರು, ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಮೊದಲು ಈ ಮಾತನ್ನು ನಿರಾಕರಿಸಿದ್ದ ಸುಮಲತಾ ಅವರು, ಇತ್ತೀಚೆಗೆ ಬೆಂಬಲಿಗರ ಅಭಿಪ್ರಾಯ ಪಡೆದು ತೀರ್ಮಾನಿಸುವುದಾಗಿ ಹೇಳಿದ್ದರು.
ಈ ನಡುವೆ ಸುಮಲತಾ ಅವರು ಬಿಜೆಪಿ ಸೇರಲಿದ್ದಾರೆಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದವು. ‘ಸುಮಲತಾ ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಆದರೆ, ಅವರ ಬೆಂಬಲಿಗರು ಬಿಜೆಪಿ ಸೇರುತ್ತಾರೆ’ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ಒಟ್ಟಾರೆ, ಸುಮಲತಾ ಅವರು ಬಿಜೆಪಿ ಸೇರುತ್ತಾರೆಂಬ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿದೆ. ಬೆಂಬಲಿಗರ ಸಭೆ ತೀರ್ಮಾನವನ್ನು ಅವರಿಗೇ ಬಿಟ್ಟಿರುವುದರಿಂದ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆಂಬುದು ಕುತೂಹಲ ಮೂಡಿಸಿದೆ.







