ಅಂಗನವಾಡಿ ನೌಕರರ ಹೋರಾಟ ತೀವ್ರ; ಫೆ.2ರಂದು ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆಗೆ ನಿರ್ಧಾರ

ಬೆಂಗಳೂರು, ಜ.31: ಸಿಐಟಿಯು ಸಂಯೋಜಿತ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಜ.23ರಿಂದ ಆರಂಭವಾಗಿರುವ ಅನಿರ್ದಿಷ್ಟಾವಧಿ ಹಗಲು-ರಾತ್ರಿ ಧರಣಿ ಸತ್ಯಾಗ್ರಹ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಸರಕಾರ ಈವರೆಗೆ ನಮ್ಮ ಜೊತೆ ಮಾತುಕತೆ ನಡೆಸಿಲ್ಲ. ಸರಕಾರದ ನಡೆ ಖಂಡಿಸಿ ಫೆ.2ರಂದು ಮುಖ್ಯಮಂತ್ರಿ ಮನೆ ಚಲೋ ನಡೆಸಲಿದ್ದೇವೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದ್ದಾರೆ.
ಮಂಗಳವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಧರಣಿ ಸ್ಥಳಕ್ಕೆ ಆಗಮಿಸಿದ್ದ ಸಚಿವರು, ಬೇಡಿಕೆಗಳ ಈಡೇರಿಕೆಗೆ ಪ್ರಯತ್ನ ಮಾಡುತ್ತೇವೆ ಎಂದಷ್ಟೇ ಹೇಳಿದರೆ ಹೊರತು ಖಚಿತ ಭರವಸೆ ನೀಡಲಿಲ್ಲ. ಹಾಗಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಹಲವರು ನಾವು ಹಠಕ್ಕೆ ಬಿದ್ದಿದ್ದೇವೆ ಎಂದು ಪ್ರಶ್ನಿಸುತ್ತಿದ್ದಾರೆ. ನಾವು ಹಠಕ್ಕೆ ಬಿದ್ದಿಲ್ಲ. ನಮ್ಮ ಬೇಡಿಕೆ ಈಡೇರುವುದು ಮುಖ್ಯ. ನಾವು ಕೇಳುತ್ತಿರುವ ಬೇಡಿಕೆಗಳು ಸರಕಾರಕ್ಕೆ ಹೊರೆಯಲ್ಲ. ಆದೇಶ ಮಾಡಬಹುದಾದ ಬೇಡಿಕೆಗಳನ್ನೇ ನಾವು ಕೇಳುತ್ತಿದ್ದೇವೆ ಎಂದು ವರಲಕ್ಷ್ಮಿ ಅವರು ಹೇಳಿದರು.
ನಮ್ಮ ಪ್ರಮುಖ ಬೇಡಿಕೆಗಳಿರುವುದು ಅಂಗನವಾಡಿ ಕಾರ್ಯಕರ್ತೆಯನ್ನು ಶಿಕ್ಷಕಿ ಎಂದು ಪರಿಗಣಿಸಬೇಕು. ಕೆಲಸದ ಹೊರೆ ಕಡಿಮೆ ಮಾಡಬೇಕು. ಅಂಗನವಾಡಿ ಕಟ್ಟಡಗಳನ್ನು ಬಲಪಡಿಸಬೇಕು. ಅಂಗನವಾಡಿ ಬಿಡುವಾಗ ಮಗುವಿಗೆ ವರ್ಗಾವಣೆ ಪತ್ರ(ಟಿಸಿ) ನೀಡುವ ವ್ಯವಸ್ಥೆಯಾಗಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ನಮಗೆ ಗ್ರಾಚ್ಯೂಟಿ ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಈ ಬೇಡಿಕೆಯನ್ನು ಸರಕಾರ ಈಡೇರಿಸಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ಮುಷ್ಕರ ಮಾಡುವುದು ನಮ್ಮ ಹಕ್ಕು, ನಮ್ಮ ಬೇಡಿಕೆಗಳನ್ನು ಈಡೇರಿಸುವುದು ಸರಕಾರದ ಕರ್ತವ್ಯ. ಸರಕಾರ ಕೇವಲ ಮಾತುಕತೆಯ ಬದಲಾಗಿ ನಮ್ಮ ಬೇಡಿಕೆಗಳನ್ನು ಆದೇಶವಾಗಿ ತರಬೇಕು ಆಗಲೇ ನಮ್ಮ ಈ ಅನಿರ್ದಿಷ್ಟಾವಧಿ ಹೋರಾಟವನ್ನು ನಿಲ್ಲಿಸಲಿದ್ದೇವೆ ಎಂದು ವರಲಕ್ಷ್ಮಿ ಸ್ಪಷ್ಟವಾಗಿ ತಿಳಿಸಿದರು.
ನಾವು ಧರಣಿಯನ್ನು 10 ದಿನ ಶಾಂತಿಯುತವಾಗಿ ನಡೆಸಲು ನಿರ್ಧರಿಸಿದ್ದೇವೆ. ಹಾಗಾಗಿ ಇನ್ನೂ ಎರಡು ದಿನ ಬಾಕಿ ಇದೆ. ಸರಕಾರ ಸ್ಪಂದಿಸದೇ ಹೋದರೆ ಫೆ.2ರಂದು ಮುಖ್ಯಮಂತ್ರಿ ಮನೆ ಚಲೋ ನಡೆಸಲಿದ್ದೇವೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ, ಶಾಂತಾ ಎನ್ ಘಂಟೆ, ಜಿ.ಕಮಲಾ ಉಪಸ್ಥಿತರಿದ್ದರು.







