ವಕ್ಫ್ ಬೋರ್ಡ್‍ಗೆ 772 ಕೋಟಿ ರೂ.ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಕೆ: ಶಾಫಿ ಸಅದಿ

ಬೆಂಗಳೂರು, ಜ.31: 2023-24ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ ವಕ್ಫ್ ಬೋರ್ಡ್‍ಗೆ 772 ಕೋಟಿ ರೂ.ಗಳ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ತಿಳಿಸಿದರು.
ಮಂಗಳವಾರ ನಗರದ ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಕ್ಫ್ ಆಸ್ತಿಗಳ ಸಂರಕ್ಷಣೆ, ಮೂಲಸೌಕರ್ಯ, ಪೇಶ್ ಇಮಾಮ್ ಹಾಗೂ ಮುಅದ್ದೀನ್‍ಗಳಿಗೆ ಗೌರವ ಧನ ಹೆಚ್ಚಳ, ಮದ್ರಸಾಗಳಲ್ಲಿ ಬೋಧನೆ ಮಾಡುವ ಉಲಮಾಗಳಿಗೆ ಮಾಸಾಶನ ಮಂಜೂರು ಮಾಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸಲ್ಲಿಸಲಾಗಿದೆ ಎಂದರು.
ಖಬರಸ್ಥಾನ(ಸ್ಮಶಾನ)ದಲ್ಲಿ ಗೋರಿಗಳನ್ನು ತೋಡುವವರ 40 ಹುದೆಗಳನ್ನು ಕೇಳಿದ್ದೇವೆ. ಬೆಂಗಳೂರು ನಗರದಲ್ಲಿ ವಕ್ಫ್ ಮಂಡಳಿಯ ಮುಖ್ಯ ಕಚೇರಿ ‘ವಕ್ಫ್ ಭವನ’ ನಿರ್ಮಾಣಕ್ಕೆ 75 ಕೋಟಿ ರೂ., ಜಿಲ್ಲಾ ವಕ್ಫ್ ಕಚೇರಿಗಳ ನಿರ್ಮಾಣ, ಜಿಲ್ಲಾ ವಕ್ಫ್ ಕಚೇರಿಗಳಿಗೆ 93 ಹುದ್ದೆಗಳನ್ನು ಮಂಜೂರು ಮಾಡುವಂತೆ ಕೋರಿದ್ದೇವೆ ಎಂದು ಅವರು ಹೇಳಿದರು.
ಜಿಲ್ಲಾ ವಕ್ಫ್ ಕಚೇರಿಗಳೀಗೆ ವಾಹನ ಸೌಲಭ್ಯ ಒದಗಿಸಲು 4.88 ಕೋಟಿ ರೂ. ಒದಗಿಸುವಂತೆ ಮನವಿ ಮಾಡಿದ್ದೇವೆ. ಬೀದರ್ ಜಿಲ್ಲೆಯ 109 ವಕ್ಫ್ ಆಸ್ತಿಗಳ ಸಂರಕ್ಷಣೆಗೆ 48 ಕೋಟಿ ರೂ.ಅನುದಾನ ಒದಗಿಸುವಂತೆ ಕೋರಿದ್ದೇವೆ. ಪೇಶ್ ಇಮಾಮ್ ಹಾಗೂ ಮುಅದ್ದೀನ್‍ಗಳಿಗೆ ಈಗ ಕ್ರಮವಾಗಿ 4 ಸಾವಿರ ರೂ.ಹಾಗೂ 3 ಸಾವಿರ ರೂ. ಗೌರವಧನ ನೀಡುತ್ತಿದ್ದೇವೆ. ಅದನ್ನು ಕ್ರಮವಾಗಿ 8 ಹಾಗೂ 6 ಸಾವಿರ ರೂ. ಮಾಡುವಂತೆ ಮನವಿ ಮಾಡಿದ್ದೇವೆ ಎಂದು ಶಾಫಿ ಸಅದಿ ತಿಳಿಸಿದರು.
ವಕ್ಫ್ ಸಿಬ್ಬಂದಿ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರು, ಅಧ್ಯಕ್ಷರು, ಮುತವಲ್ಲಿ ಹಾಗೂ ಪದಾಧಿಕಾರಿಗಳಿಗೆ ವಕ್ಫ್‍ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತರಬೇತಿ ನೀಡಲು ಒಂದು ತರಬೇತಿ ಕೇಂದ್ರ ಆರಂಭಿಸಲು 10 ಕೋಟಿ ರೂ. ಹಾಗೂ ಖಬರಸ್ಥಾನ್‍ಗಳ ಮೂಲಭೂತ ಸೌಕರ್ಯಕ್ಕಾಗಿ 75 ಕೋಟಿ ರೂ.ಕೇಳಿದ್ದೇವೆ ಎಂದು ಅವರು ಹೇಳಿದರು.
ಮದ್ರಸಾಗಳಲ್ಲಿ ಬೋಧನೆ ಮಾಡುವ ಉಲಮಾಗಳಿಗೆ ಮಾಸಾಶನ ನೀಡಲು 50 ಕೋಟಿ ರೂ.ಗಳನ್ನು ಕೇಳಿದ್ದೇವೆ. ಹೀಗೆ ಒಟ್ಟು 772 ಕೋಟಿ ರೂ.ಗಳ ಪ್ರಸ್ತಾವನೆಗಳನ್ನು ಮುಖ್ಯಮಂತ್ರಿಗೆ ಸಲ್ಲಿಕೆ ಮಾಡಿದ್ದೇವೆ ಎಂದು ಶಾಫಿ ಸಅದಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ವಕ್ಫ್ ಮಂಡಳಿಯ ಸದಸ್ಯರಾದ ಆರ್.ಅಬ್ದುಲ್ ರಿಯಾಝ್ ಖಾನ್, ಜಿ.ಯಾಕೂಬ್, ಅನ್ವರ್ ಉಪಸ್ಥಿತರಿದ್ದರು.







