ಬಜರಂಗದಳ ಕಾರ್ಯಕರ್ತರು ಕೊಲೆಗೈದಿದ್ದಾರೆ: ಹತ್ಯೆಗೀಡಾದ ವಾರಿಸ್ ಖಾನ್ ಕುಟುಂಬ ಸದಸ್ಯರ ಆರೋಪ
ಭಯಾನಕ ಹತ್ಯೆ ಎಂದ ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್

ಚಂಡೀಗಢ, ಜ. 31: ಹರ್ಯಾಣದ ನೂಹ್ ಜಿಲ್ಲೆಯಲ್ಲಿ, ದನಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಸಂಶಯದಲ್ಲಿ ಬಜರಂಗ ದಳದ ಕಾರ್ಯಕರ್ತರು ಜನವರಿ 28ರಂದು 22 ವರ್ಷದ ಮುಸ್ಲಿಮ್ ವ್ಯಕ್ತಿಯೊಬ್ಬರನ್ನು ಕೊಂದಿದ್ದಾರೆ ಎಂದು ಆ ವ್ಯಕ್ತಿಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ವಾರಿಸ್ ಖಾನ್ ಕಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಭಿವಾಡಿಯಿಂದ ಮರಳುತ್ತಿದ್ದಾಗ ಅವರನ್ನು ಕೊಲ್ಲಲಾಗಿದೆ ಎಂದು ಅವರ ಸೋದರ ಸಂಬಂಧಿ ಶಾಹಿದ್ ಖಾನ್ ‘ಸ್ಕ್ರಾಲ್.ಇನ್’ ಜೊತೆ ಮಾತನಾಡುತ್ತಾ ಹೇಳಿದರು.ವಾರಿಸ್ ಖಾನ್ ಮತ್ತು ಇತರ ಇಬ್ಬರನ್ನು ಬಜರಂಗದಳದ ಸದಸ್ಯರೆನ್ನಲಾದವರು ಹಿಡಿದಿಟ್ಟುಕೊಂಡು ದನ ಕಳ್ಳಸಾಗಣೆ ಸಂಶಯದಲ್ಲಿ ಅವರ ಮೇಲೆ ಹಲ್ಲೆ ನಡೆಸಿದರು ಎಂದು ಅವರು ಆರೋಪಿಸಿದರು.
ಬಜರಂಗ ದಳದ ಮೋನು ಮನೆಸರ್ ಮತ್ತು ಅವನ ಸಂಗಡಿಗರು ವಾರಿಸ್ ಖಾನ್ಗೆ ಹೊಡೆದು ಅವರನ್ನು ಮತ್ತು ಇತರರನ್ನು ತನ್ನ ವಾಹನದೊಳಕ್ಕೆ ತಳ್ಳುತ್ತಿರುವುದನ್ನು ಸ್ವತಃ ಮನೆಸರ್ ತನ್ನ ಫೇಸ್ಬುಕ್ ಲೈವ್ನಲ್ಲಿ ತೋರಿಸಿದ್ದಾನೆ ಎಂದು ಶಾಹಿದ್ ಖಾನ್ ಹೇಳಿದರು. ಬಜರಂಗದಳ ಸದಸ್ಯರು ಶಸ್ತ್ರಗಳನ್ನೂ ಹಿಡಿದುಕೊಂಡಿದ್ದರು ಎಂದರು.
ಪೊಲೀಸರು ಹೇಳುವುದೇ ಬೇರೆ
ಆದರೆ, ವಾರಿಸ್ ಖಾನ್ ಕುಟುಂಬ ಸದಸ್ಯರು ಮಾಡಿರುವ ಆರೋಪಗಳನ್ನು ಹರ್ಯಾಣ ಪೊಲೀಸರು ನಿರಾಕರಿಸಿದ್ದಾರೆ. ಕಾರು ಅಪಘಾತದಲ್ಲಿ ಆಂತರಿಕ ಗಾಯಗಳಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಜನವರಿ 28ರಂದು ಮುಂಜಾನೆ 5 ಗಂಟೆಗೆ ವಾರಿಸ್ ಖಾನ್, ಶೋಕೀನ್ ಮತ್ತು ನಫೀಸ್ ಇದ್ದ ಕಾರೊಂದು ಟೆಂಪೊವೊಂದಕ್ಕೆ ಢಿಕ್ಕಿಯಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಟೆಂಪೊ ಚಾಲಕನ ದೂರಿನ ಆಧಾರದಲ್ಲಿ ವಾರಿಸ್ ಖಾನ್ ಮತ್ತು ಅವರ ಸ್ನೇಹಿತರ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಗೋಹತ್ಯೆಯನ್ನು ನಿಷೇಧಿಸುವ ಗೋವಂಶ ಸಂರಕ್ಷಣೆ ಮತ್ತು ಗೋಸಂವರ್ಧನೆ ಕಾಯ್ದೆಯ ಅಡಿಯಲ್ಲಿ ಮೊದಲ ಮಾಹಿತಿ ವರದಿ ದಾಖಲಿಸಿದ್ದಾರೆ. ನಫೀಸ್ ಮತ್ತು ಶೋಕೀನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಭಯಾನಕ ಹತ್ಯೆ: ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್
ಈ ಹತ್ಯೆಯು ಭಯಾನಕವಾಗಿದೆ ಎಂದು ಮಾನವಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ಇಂಡಿಯಾ ಹೇಳಿದೆ ಹಾಗೂ ಅವರ ಕೊಲೆಯು ತಾರತಮ್ಯ ಮತ್ತು ಅಸಹಿಷ್ಣುತೆಯಿಂದ ಪ್ರೇರಿತವಾಗಿ ನಡೆದಿದೆಯೇ ಎಂಬ ಬಗ್ಗೆ ಹರ್ಯಾಣ ಸರಕಾರವು ‘‘ಪ್ರಾಮಾಣಿಕ, ಸ್ವತಂತ್ರ ಮತ್ತು ನಿಷ್ಪಕ್ಷ’’ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
‘‘2018ರಲ್ಲಿ, ದನ ಸಾಗಾಟಗಾರರ ಮೇಲೆ ನಡೆಯುವ ಆಕ್ರಮಣವನ್ನು ನಿಲ್ಲಿಸಲು ಹಾಗೂ ಭವಿಷ್ಯದಲ್ಲಿ ಅದು ಪುನರಾವರ್ತನೆಯಾಗದಂತೆ ತಡೆಯಲು ರಾಜ್ಯಗಳು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ, ಅದಾದ ಐದು ವರ್ಷಗಳ ಬಳಿಕವೂ ‘‘ಗೋರಕ್ಷಕ’’ರೆನಿಸಿಕೊಂಡವರಿಂದ ನಡೆಯುವ ದ್ವೇಷಾಪರಾಧಗಳು ದೇಶದಲ್ಲಿ ನಿರಂತರವಾಗಿ ಮುಂದುವರಿಯುತ್ತಿದೆ’’ ಎಂಬುದಾಗಿ ಅದು ಸರಣಿ ಟ್ವೀಟ್ಗಳಲ್ಲಿ ಹೇಳಿದೆ







