ಶಾಲಾ ಸಮವಸ್ತ್ರ ನೀಡಬೇಕೆಂಬ ಆದೇಶ ಪಾಲಿಸದ ಸರಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ
ಕೋಟಿ ಖರ್ಚು ಮಾಡಿ ಉತ್ಸವ ಮಾಡುತ್ತೀರಿ, ನಾಚಿಕೆಯಾಗಬೇಕು ಎಂದ ನ್ಯಾಯಾಲಯ

ಬೆಂಗಳೂರು, ಜ.31: ರಾಜ್ಯದ ಸರಕಾರಿ ಶಾಲಾ ಮಕ್ಕಳಿಗೆ ಎರಡು ಜೊತೆ ಹೊಲಿದ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡಬೇಕು ಎಂಬ ಆದೇಶ ಪಾಲಿಸದ ರಾಜ್ಯ ಸರಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ಕೊಪ್ಪಳ ಜಿಲ್ಲೆಯ ಮಾಸ್ಟರ್ ಮಂಜುನಾಥ್ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಉತ್ಸವ ಮಾಡುತ್ತೀರಿ. ಬೇರೆಯದಕ್ಕೇ ಕೋಟ್ಯಂತರ ಹಣ ಖರ್ಚು ಮಾಡುತ್ತೀರಿ. ಅಧಿಕಾರಿಗಳಿಗೆ ನಾಚಿಕೆಯಾಗಬೇಕು ಎಂಬ ನುಡಿಗಳನ್ನಾಡಿದೆ.
2019ರ ಆ.28ರಂದು ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವನ್ನು ಪಾಲಿಸದ ಸಂಬಂಧ ವಿಸ್ತತ ಅಫಿಡವಿಟ್ ಅನ್ನು ರಾಜ್ಯ ಸರಕಾರ ಸಲ್ಲಿಸಬೇಕು. ಆರ್ಟಿಇ ಕಾಯಿದೆ ಸೆಕ್ಷನ್ 3ರ ಅಡಿ ತನ್ನ ಕರ್ತವ್ಯವನ್ನು ತುರ್ತಾಗಿ ರಾಜ್ಯ ಸರಕಾರ ನಿಭಾಯಿಸಬೇಕಿದೆ. ಅಂತಿಮವಾಗಿ ಇದಕ್ಕೆ ಎರಡು ವಾರ ಕಾಲಾವಕಾಶ ನೀಡಲಾಗುತ್ತಿದ್ದು, ಸಂಬಂಧಿತ ಅಧಿಕಾರಿಯ ವಿರುದ್ಧ ಆರೋಪ ನಿಗದಿ ಮಾಡಲಾಗುತ್ತದೆ. ಅಂದು ಅವರು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.
ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 3ರ ಅಡಿ ಮಕ್ಕಳಿಗೆ ಸಮವಸ್ತ್ರ ವಿತರಿಸುವುದು ಸರಕಾರದ ಮೂಲಭೂತ ಕರ್ತವ್ಯವಾಗಿದೆ. ಫಲಾನುಭವಿ ಮಕ್ಕಳಿಗೆ ಸಮವಸ್ತ್ರ, ಶೂ-ಕಾಲು ಚೀಲ ಸಿಕ್ಕಿದೆಯೇ ಎಂಬುದು ದೇವರಿಗೆ ಮಾತ್ರ ಗೊತ್ತು ಎಂದು ಪೀಠವು ಆದೇಶದಲ್ಲಿ ಹೇಳಿದೆ.
ನ್ಯಾ. ಓಕಾ ನೇತೃತ್ವದ ವಿಭಾಗೀಯ ಪೀಠದ ಆದೇಶವೇನು?:
ಆರ್ಟಿಇ ಕಾಯಿದೆ ಸೆಕ್ಷನ್ 3ರ ಅಡಿ ಸರಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ನೀಡುವುದು ಕೇಂದ್ರ ಮತ್ತು ರಾಜ್ಯ ಸರಕಾರದ ಹೊಣೆಗಾರಿಕೆಯಾಗಿದೆ. ಶೂ ಧರಿಸುವ ನಿಯಮ ಯಾವ ಶಾಲೆಗಳಲ್ಲಿ ಇದೆಯೋ ಅಲ್ಲಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡುವ ಹೊಣೆಗಾರಿಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲಿದೆ ಎಂದು ನ್ಯಾಯಾಲಯ ಆದೇಶಿಸಿತ್ತು.







